ಸುಪ್ರೀಂ ಕೋರ್ಟ್ ಆದೇಶ ಪಾಲನೆಯ ಜೊತೆಗೆ ಜನಸಾಮಾನ್ಯರಿಗೆ ಕಾನೂನು ಚೌಕಟ್ಟಿನಲ್ಲಿ ವಿನಾಯಿತಿ
ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಚರ್ಚೆಗೆ ತೀರ್ಮಾನ
ಬೆಂಗಳೂರು: ಬೆಂಗಳೂರಿನಲ್ಲಿ ಅಕ್ರಮ ಕಟ್ಟಡಗಳಿಂದ ಉಂಟಾಗುತ್ತಿರುವ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ, ಇಂತಹ ನಿರ್ಮಾಣಗಳಿಗೆ ಯಾವುದೇ ಅವಕಾಶ ನೀಡುವುದಿಲ್ಲ ಎಂದು ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ. ಸಿಸಿ (ಕಾಮಗಾರಿ ಪ್ರಾರಂಭ ಪ್ರಮಾಣಪತ್ರ) ಮತ್ತು ಒಸಿ (ಆಕ್ಯುಪೆನ್ಸಿ ಸರ್ಟಿಫಿಕೇಟ್) ಕಡ್ಡಾಯಗೊಳಿಸುವ ಸುಪ್ರೀಂ ಕೋರ್ಟ್ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುವುದರ ಜೊತೆಗೆ, ಕಾನೂನು ಚೌಕಟ್ಟಿನಲ್ಲಿ ಜನಸಾಮಾನ್ಯರಿಗೆ ವಿನಾಯಿತಿ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.
ವಿಧಾನಸಭೆಯಲ್ಲಿ ಗಮನ ಸೆಳೆಯುವ ಸೂಚನೆಯ ಸಂದರ್ಭದಲ್ಲಿ ಶಾಸಕ ಅಶ್ವತ್ ನಾರಾಯಣ ಅವರು, ಸಿಸಿ ಮತ್ತು ಒಸಿ ಆಧಾರದ ಮೇಲೆ ಎಸ್ಕಾಂಗಳು ವಿದ್ಯುತ್ ಮತ್ತು ನೀರಿನ ಸಂಪರ್ಕ ನೀಡಬೇಕೆಂಬ ಸುಪ್ರೀಂ ಕೋರ್ಟ್ ತೀರ್ಪಿನಿಂದ ಜನರಿಗೆ ಎದುರಾಗಿರುವ ತೊಂದರೆಗಳನ್ನು ಬಗೆಹರಿಸಲು ಕ್ರಮ ಕೈಗೊಳ್ಳುವಂತೆ ಪ್ರಸ್ತಾಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಡಿಸಿಎಂ ಶಿವಕುಮಾರ್, “ಈ ವಿಷಯ ಇಡೀ ದೇಶಕ್ಕೆ ಸಂಬಂಧಿಸಿದ್ದು, ಗ್ರಾಮೀಣಾಭಿವೃದ್ಧಿ, ನಗರಾಭಿವೃದ್ಧಿ, ಪಾಲಿಕೆ, ಮತ್ತು ಪಂಚಾಯಿತಿಗಳಿಗೆ ಸಂಬಂಧಿಸಿದೆ. ನಿಯಂತ್ರಣ ಪ್ರಾಧಿಕಾರವು ಈ ತೀರ್ಪನ್ನು ಜಾರಿಗೊಳಿಸಲು ಸೂಚಿಸಿದೆ. ಈ ವಿಚಾರದ ಮೇಲ್ಮನವಿಯನ್ನು ಸಲ್ಲಿಸಲಾಗಿತ್ತು. ಶಾಸಕ ಅಶ್ವತ್ ನಾರಾಯಣ ಅವರು ಈ ತೀರ್ಪಿನಲ್ಲಿ ಸಡಿಲಿಕೆಯಾಗಿದೆ ಎಂದು ಸದನದಲ್ಲಿ ತಿಳಿಸಿದ್ದರು. ಆದರೆ, ಆ ದಾಖಲೆಯನ್ನು ಸಲ್ಲಿಸಲು ಸಾಧ್ಯವಾಗಿಲ್ಲ. ಈಗಲಾದರೂ ಅದನ್ನು ನೀಡಿದರೆ ತೀರ್ಮಾನಕ್ಕೆ ನೆರವಾಗುತ್ತದೆ” ಎಂದು ಹೇಳಿದರು.
ಬೇರೆ ರಾಜ್ಯಗಳಿಗಿಂತ ಕರ್ನಾಟಕದಲ್ಲಿ ಕಾನೂನು ಕಟ್ಟುನಿಟ್ಟು
“ನಿಯಂತ್ರಣ ಪ್ರಾಧಿಕಾರವು ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಮತ್ತು ಬೆಸ್ಕಾಂಗೆ ಪತ್ರ ಬರೆದು, ಸಿಸಿ ಮತ್ತು ಒಸಿ ಸಲ್ಲಿಕೆಯಾದ ನಂತರವೇ ಕಟ್ಟಡಗಳಿಗೆ ವಿದ್ಯುತ್ ಮತ್ತು ನೀರಿನ ಸಂಪರ್ಕ ನೀಡಬೇಕೆಂದು ಸೂಚಿಸಿದೆ. ಈ ವಿಷಯದಲ್ಲಿ ಮುಖ್ಯಮಂತ್ರಿಗಳು, ಇಂಧನ ಸಚಿವ ಕೆ.ಜೆ. ಜಾರ್ಜ್ ಸೇರಿದಂತೆ ಚರ್ಚೆ ನಡೆಸಿದ್ದೇವೆ. ಈ ಸಮಸ್ಯೆಯನ್ನು ಬಗೆಹರಿಸಲು ಪ್ರಯತ್ನಿಸುತ್ತಿದ್ದೇವೆ. ಬೇರೆ ರಾಜ್ಯಗಳು ಈ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿಲ್ಲ. ಆದರೆ, ಕರ್ನಾಟಕದಲ್ಲಿ ಕಾನೂನು ಉಲ್ಲಂಘನೆಯಾದರೆ, ಸರ್ಕಾರ ಮತ್ತು ಅಧಿಕಾರಿಗಳಿಗೆ ತೊಂದರೆಯಾಗಲಿದೆ” ಎಂದು ಶಿವಕುಮಾರ್ ವಿವರಿಸಿದರು.
ಅಕ್ರಮ ಕಟ್ಟಡಗಳಿಂದ ಬೆಂಗಳೂರಿಗೆ ಅಪಾಯ
“ಅಕ್ರಮ ಕಟ್ಟಡಗಳಿಗೆ ಯಾವುದೇ ಕಾರಣಕ್ಕೂ ಅವಕಾಶ ನೀಡಲಾಗುವುದಿಲ್ಲ. ಕೋರ್ಟ್ ಆದೇಶಕ್ಕೆ ಮುಂಚೆ ಕಟ್ಟಡ ನಿರ್ಮಿಸಿರುವ ಬಡವರಿಗೆ ಕಾನೂನು ಚೌಕಟ್ಟಿನಲ್ಲಿ ವಿನಾಯಿತಿ ನೀಡಲು ಪರಿಹಾರ ಕಂಡುಕೊಳ್ಳಲಾಗಿದೆ. ಆದರೆ, ಯಾರಿಗೆ ಬೇಕಾದರೂ ಎಷ್ಟು ಮಹಡಿ ಬೇಕಾದರೂ ಕಟ್ಟಲು ಅನುಮತಿಯಿಲ್ಲ. ಇತ್ತೀಚೆಗೆ ನಗರ್ತಪೇಟೆಯಲ್ಲಿ 20X25 ಅಡಿ ಜಾಗದಲ್ಲಿ ಎಂಟು ಮಹಡಿ ಕಟ್ಟಡ ಕಂಡುಬಂದಿದೆ. ಅಲ್ಲಿ ಸಂಭವಿಸಿದ ಅಗ್ನಿ ದುರಂತದಿಂದ ಜನ ಸಾವನ್ನಪ್ಪಿದ್ದಾರೆ. ಇಂತಹ ಅಕ್ರಮ ಕಟ್ಟಡಗಳು ಬೆಂಗಳೂರಿಗೆ ದೊಡ್ಡ ಅಪಾಯವನ್ನುಂಟುಮಾಡಿವೆ. ಕೋರ್ಟ್ ಆದೇಶದಿಂದಾಗಿ ಇಂತಹ ನಿರ್ಮಾಣವನ್ನು ತಡೆಯಲು ಅವಕಾಶವಿದೆ. ಜನಸಾಮಾನ್ಯರಿಗೆ ಕಾನೂನು ವ್ಯಾಪ್ತಿಯಲ್ಲಿ ಸಡಿಲಿಕೆ ನೀಡಲು ಕ್ರಮ ಕೈಗೊಳ್ಳಲಾಗಿದೆ” ಎಂದು ಡಿಸಿಎಂ ತಿಳಿಸಿದರು.
“ಬೆಂಗಳೂರಿನ ಸಮಸ್ಯೆಗಳ ಬಗ್ಗೆ ನನಗೆ ಚೆನ್ನಾಗಿ ತಿಳಿದಿದೆ. ಬಡವರಿಗೆ ನೆರವಾಗಲು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ, ಸಹೋದ್ಯೋಗಿಗಳ ಅಭಿಪ್ರಾಯ ಪಡೆದು ತೀರ್ಮಾನ ಕೈಗೊಳ್ಳಲಾಗುವುದು. ಈ ಸರ್ಕಾರ ಜನಸಾಮಾನ್ಯರ ಪರವಾಗಿದೆ” ಎಂದು ಶಿವಕುಮಾರ್ ಭರವಸೆ ನೀಡಿದರು.
ಅತ್ತಿಬೆಲೆವರೆಗೆ ಮೆಟ್ರೋ ವಿಸ್ತರಣೆಗೆ ಕ್ರಮ
ಪ್ರಶ್ನೋತ್ತರ ಕಲಾಪದಲ್ಲಿ ಶಾಸಕ ಬಿ. ಶಿವಣ್ಣ ಅವರು, ಹೊಸೂರು ಭಾಗದಿಂದ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಅತ್ತಿಬೆಲೆ ಗಡಿವರೆಗೆ ಮೆಟ್ರೋ ವಿಸ್ತರಣೆಯ ಅಗತ್ಯವನ್ನು ಪ್ರಸ್ತಾಪಿಸಿದರು. ಇದಕ್ಕೆ ಉತ್ತರಿಸಿದ ಡಿಸಿಎಂ, “ಶಾಸಕ ಶಿವಣ್ಣ ಅವರು ಎರಡು ವರ್ಷಗಳಿಂದ ಈ ವಿಷಯವನ್ನು ಪ್ರಸ್ತಾಪಿಸುತ್ತಿದ್ದಾರೆ. ಇತ್ತೀಚೆಗೆ ಪ್ರಧಾನಮಂತ್ರಿಗಳು ಹಳದಿ ಮಾರ್ಗಕ್ಕೆ ಚಾಲನೆ ನೀಡಿದ್ದಾರೆ. ಶಾಸಕರ ಬೇಡಿಕೆಯಂತೆ 10-12 ಕಿ.ಮೀ. ಮೆಟ್ರೋ ವಿಸ್ತರಣೆಗೆ ಡಿಪಿಆರ್ ಸಿದ್ಧಪಡಿಸಲು ಆರ್.ವಿ ಅಸೋಸಿಯೇಟ್ಸ್‌ಗೆ ಸೂಚಿಸಲಾಗಿದೆ. ಜಿಗಣಿ, ಬನ್ನೇರುಘಟ್ಟ ಮಾರ್ಗವಾಗಿ ಈ ವಿಸ್ತರಣೆಗೆ ಕ್ರಮ ಕೈಗೊಳ್ಳಲಾಗುವುದು. ಅತ್ತಿಬೆಲೆಯಲ್ಲಿ 90 ಸಾವಿರ ಪ್ರೇಕ್ಷಕರ ಸಾಮರ್ಥ್ಯದ ಕ್ರೀಡಾಂಗಣ ನಿರ್ಮಾಣಕ್ಕೆ ತೀರ್ಮಾನಿಸಲಾಗಿದೆ. ಈ ಮಾರ್ಗದಲ್ಲಿ ದಿನನಿತ್ಯ 90 ಸಾವಿರ ಪ್ರಯಾಣಿಕರು ಸಂಚರಿಸುತ್ತಿದ್ದಾರೆ. ಶಾಸಕರ ಮನವಿಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು” ಎಂದು ಭರವಸೆ ನೀಡಿದರು.