ಬೆಂಗಳೂರು: ಅಕ್ಷಯ ತೃತೀಯದ ಪವಿತ್ರ ದಿನದಂದು, ಬೆಂಗಳೂರು ನಗರದ ಪ್ರಸಿದ್ಧ ಬನಶಂಕರಿ ದೇವಾಲಯದಲ್ಲಿ “ಸಿಂಧೂರಿ” ಕನ್ನಡ ಚಿತ್ರಕ್ಕೆ ಭವ್ಯವಾಗಿ ಮುಹೂರ್ತ ನಡೆಯಿತು. ಎಸ್. ರಮೇಶ್ (ಬನಶಂಕರಿ) ನಿರ್ಮಿಸುತ್ತಿರುವ ಈ ಚಿತ್ರವನ್ನು ಶಂಕರ್ ಕೋನಮಾನಹಳ್ಳಿ ನಿರ್ದೇಶಿಸುತ್ತಿದ್ದು, ರಾಗಿಣಿ ದ್ವಿವೇದಿ ಹಾಗೂ ಧರ್ಮ ಕೀರ್ತಿರಾಜ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.
ಚಿತ್ರದ ಮುಹೂರ್ತ ಕಾರ್ಯಕ್ರಮದಲ್ಲಿ ಚಿತ್ರತಂಡದ ಸದಸ್ಯರು ಹಾಗೂ ಹಲವರು ಗಣ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮದ ನಂತರ ಚಿತ್ರತಂಡ ಮಾಧ್ಯಮದವರೊಂದಿಗೆ ಮಾತನಾಡಿ ಚಿತ್ರಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡಿದರು.
ಚಿತ್ರದ ಬಗ್ಗೆ ನಿರ್ದೇಶಕರ ಮಾತು
“ಇದು ನನ್ನ ನಾಲ್ಕನೇ ಚಿತ್ರ. ಮೇ 10ರಿಂದ ಚಿತ್ರೀಕರಣ ಆರಂಭವಾಗಲಿದೆ. ಸಕಲೇಶಪುರ ಮುಂತಾದ ಸ್ಥಳಗಳಲ್ಲಿ 45 ದಿನಗಳ ಕಾಲ ಒಂದೇ ಹಂತದಲ್ಲಿ ಶೂಟಿಂಗ್ ನಡೆಯಲಿದೆ,” ಎಂದು ನಿರ್ದೇಶಕ ಶಂಕರ್ ಕೋನಮಾನಹಳ್ಳಿ ತಿಳಿಸಿದರು.
ಚಿತ್ರದ ಶೀರ್ಷಿಕೆಯಿಂದ ರೋಹಿಣಿ ಸಿಂಧೂರಿ ಹಾಗೂ ದಿ. ಕೆ. ರವಿ ಅವರ ಕಥೆಯೆಂದು ಕೆಲವರು ಭಾವಿಸಿದರೂ, ಚಿತ್ರ ಅವರಿಗೆ ಯಾವುದೇ ಸಂಬಂಧವಿಲ್ಲವೆಂದು ಅವರು ಸ್ಪಷ್ಟಪಡಿಸಿದರು. “ಇದು ಸಂಪೂರ್ಣ ಕಾಲ್ಪನಿಕ ಮರ್ಡರ್ ಮಿಸ್ಟ್ರಿ ಕಥೆಯಾಗಿದೆ. ರಾಗಿಣಿ ಈ ಚಿತ್ರದಲ್ಲಿ ಕಥೆಗೆ ತಿರುವು ನೀಡುವ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಅವರು ‘ಬಿಂಗೋ’ ಚಿತ್ರ ಶೂಟಿಂಗ್ ಸಮಯದಲ್ಲಿ ನನ್ನ ಕೆಲಸ ಇಷ್ಟಪಟ್ಟಿದ್ದರು. ಆಗಲೇ ಈ ಚಿತ್ರದ ಬಗ್ಗೆ ಮಾತನಾಡಿದ್ದೆವು,” ಎಂದು ನಿರ್ದೇಶಕರು ಹೇಳಿದರು.
ನಿರ್ಮಾಪಕರ ನುಡಿಗಳು
“ಏಳೆಂಟು ವರ್ಷಗಳ ಹಿಂದೆ ‘ವಿಕ್ಕಿ’ ಎಂಬ ಚಿತ್ರ ಮಾಡಿದ್ದೆ. ನಿರ್ದೇಶಕರು ಮೋಸ ಮಾಡಿದ ನಂತರ ಚಿತ್ರವನ್ನು ನಾನು ಮುಗಿಸಿ ಬಿಡುಗಡೆ ಮಾಡಿದೆ. ಆ ಬಳಿಕ ಚಿತ್ರ ನಿರ್ಮಾಣದಿಂದ ದೂರವಿದ್ದೆ. ಆದರೆ ಶಂಕರ್ ಅವರು ಕಥೆ ಹೇಳಿದ ನಂತರ, ಬನಶಂಕರಮ್ಮನ ಆಶೀರ್ವಾದದಿಂದ ಈ ಚಿತ್ರ ಶುರುವಾಗಿದೆ,” ಎಂದು ನಿರ್ಮಾಪಕ ಎಸ್. ರಮೇಶ್ (ಬನಶಂಕರಿ) ತಿಳಿಸಿದ್ದಾರೆ.
ನಟ-ನಟಿಯರಿಂದ ಅಭಿಪ್ರಾಯಗಳು
“ಮಹಿಳಾ ಪ್ರಧಾನ ಚಿತ್ರ ಮಾಡುವುದು ಸವಾಲಿನ ಕೆಲಸ. ಪ್ರೇಕ್ಷಕರನ್ನು ಚಿತ್ರಮಂದಿರಗಳಿಗೆ ಸೆಳೆಯುವುದು ಸುಲಭವಲ್ಲ. ಆದರೂ ಈ ಚಿತ್ರ ವಿಭಿನ್ನವಾದ ಕಥಾಹಂದರ ಹೊಂದಿದ್ದು, ಆ್ಯಕ್ಷನ್-ಕಮರ್ಷಿಯಲ್ ಲೈನ್‌ನಲ್ಲಿ ಸಾಗುತ್ತದೆ. ಪ್ರತಿಯೊಬ್ಬ ಪಾತ್ರಕ್ಕೂ ಈ ಚಿತ್ರದಲ್ಲಿ ಮಹತ್ವವಿದೆ,” ಎಂದು ನಟಿ ರಾಗಿಣಿ ದ್ವಿವೇದಿ ತಿಳಿಸಿದ್ದಾರೆ.
“ನಾನು ಈ ಚಿತ್ರದಲ್ಲಿ ಚಾಕಲೆಟ್ ಬಾಯ್ ಪಾತ್ರವಲ್ಲ. ಪಾತ್ರವೊಂದು ಸಂಪೂರ್ಣ ವಿಭಿನ್ನವಾಗಿದೆ. ನಾನು ಮತ್ತು ರಾಗಿಣಿ ಜೋಡಿಯಾಗಿ ಇಲ್ಲ, ಆದರೆ ನಮ್ಮ ಪಾತ್ರಗಳ ನಡುವೆ ಹಲವು ತಿರುವುಗಳಿವೆ. ಉತ್ತಮ ತಂಡದೊಂದಿಗೆ ಕೆಲಸ ಮಾಡುತ್ತಿರುವ ಖುಷಿಯಿದೆ,” ಎಂದು ನಟ ಧರ್ಮ ಕೀರ್ತಿರಾಜ್ ತಿಳಿಸಿದ್ದಾರೆ.
ತಂಡದ ಇತರ ಸದಸ್ಯರು
ಈ ಸಂಧರ್ಭದಲ್ಲಿ ನಟ ನಾರಾಯಣಸ್ವಾಮಿ, ರಮೀಜ್ ರಾಕಿ, ಛಾಯಾಗ್ರಾಹಕ ರಾಕೇಶ್ ಸಿ. ತಿಲಕ್, ಸಂಗೀತ ನಿರ್ದೇಶಕ ಹಿತನ್ ಹಾಸನ್ ಹಾಗೂ ಸಂಭಾಷಣೆ ಬರೆಯುತ್ತಿರುವ ಹರೀಶ್ ಉಪಸ್ಥಿತರಿದ್ದರು.