ಬೆಂಗಳೂರು: ಮಾಜಿ ಪ್ರಧಾನಮಂತ್ರಿ, ಭಾರತರತ್ನ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ಶತಮಾನೋತ್ಸವದ ಅಂಗವಾಗಿ ಅಟಲ್‍ಜಿ ಜನ್ಮ ಶತಮಾನೋತ್ಸವ ಸಮಿತಿ ಕರ್ನಾಟಕ, ಬೆಂಗಳೂರು ವತಿಯಿಂದ ಆಯೋಜಿಸಲಾಗಿರುವ ವಿವಿಧ ಕಾರ್ಯಕ್ರಮಗಳ ಪೋಸ್ಟರ್ ಬಿಡುಗಡೆ ಕಾರ್ಯಕ್ರಮವು ಬಿಜೆಪಿ ಜಗನ್ನಾಥ ಭವನದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ ಅವರು ಪೋಸ್ಟರ್ ಬಿಡುಗಡೆಗೊಳಿಸಿದರು.
ಅಟಲ್‍ಜಿ ಜನ್ಮ ಶತಮಾನೋತ್ಸವ ಸಮಿತಿಯ ಪ್ರಮುಖ ಹಾಗೂ ವಿಧಾನ ಪರಿಷತ್ ಮಾಜಿ ಸದಸ್ಯ ಡಾ. ಎ.ಹೆಚ್. ಶಿವಯೋಗಿಸ್ವಾಮಿ ಅವರು ಮಾತನಾಡಿ, “ಅಟಲ್‍ಜಿ ಅವರು ದೇಹತ್ಯಾಗ ಮಾಡಿದ ದಿನವಾದ ಆಗಸ್ಟ್ 16 ರಂದು ಬೆಂಗಳೂರಿನ ಟೌನ್‍ಹಾಲ್‌ನಲ್ಲಿ ಸಂಜೆ 4:30ಕ್ಕೆ ‘ಅಟಲ್ ಸ್ಮೃತಿ ಸಂಗ್ರಹ’ ಲೋಕಾರ್ಪಣೆ ಕಾರ್ಯಕ್ರಮ ಆಯೋಜಿಸಲಾಗಿದೆ,” ಎಂದು ತಿಳಿಸಿದರು. ಈ ಕಾರ್ಯಕ್ರಮವನ್ನು ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕೇಂದ್ರ ಮಾಜಿ ಸಚಿವ ಡಿ.ವಿ. ಸದಾನಂದ ಗೌಡ, ಮುಖಂಡರಾದ ಶ್ರೀಮತಿ ತೇಜಸ್ವಿನಿ ಅನಂತ್ ಕುಮಾರ್, ವಿರೋಧ ಪಕ್ಷದ ನಾಯಕ ಆರ್. ಅಶೋಕ್, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಭಾಗವಹಿಸಲಿದ್ದಾರೆ.
ವಿವಿಧ ಕಾರ್ಯಕ್ರಮಗಳ ಆಯೋಜನೆ
ಡಾ. ಶಿವಯೋಗಿಸ್ವಾಮಿ ಅವರು ಮಾತನಾಡುತ್ತಾ, “ಅಟಲ್‍ಜಿ ಅವರ ಜನ್ಮ ಶತಮಾನೋತ್ಸವವನ್ನು ಯಶಸ್ವಿಯಾಗಿ ಆಚರಿಸಲು ಕೇಂದ್ರ ಮತ್ತು ರಾಜ್ಯದಲ್ಲಿ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಕರ್ನಾಟಕದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮತ್ತು ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್ ಅವರ ಮಾರ್ಗದರ್ಶನದಲ್ಲಿ ಜನವರಿಯಿಂದ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ,” ಎಂದರು.
ಜನವರಿ 14 ರಿಂದ ಫೆಬ್ರವರಿ 15ರವರೆಗೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ತಂಡಗಳನ್ನು ರಚಿಸಿ, ಅಟಲ್‍ಜಿ ಅವರ ಒಡನಾಡಿಗಳು ಮತ್ತು ಹಿರಿಯ ಕಾರ್ಯಕರ್ತರ ಮನೆಗೆ ಭೇಟಿನೀಡಿ ಗೌರವ ಸಮರ್ಪಣೆ ಮಾಡಲಾಗಿದೆ. ಅಟಲ್‍ಜಿ ಅವರ ಚಿತ್ರಗಳು, ಲೇಖನಗಳು, ಮತ್ತು ಕೃತಿಗಳನ್ನು ಸಂಗ್ರಹಿಸಲಾಗಿದೆ. ಫೆಬ್ರವರಿ 15 ರಿಂದ ಮಾರ್ಚ್‌ವರೆಗೆ ರಾಜ್ಯದ 39 ಜಿಲ್ಲಾ ಕೇಂದ್ರಗಳಲ್ಲಿ ‘ಅಟಲ್‍ಜಿ ವಿರಾಸತ್ ಸಮ್ಮೇಳನ’ ನಡೆಸಲಾಗಿದೆ. ಈ ಸಂದರ್ಭದಲ್ಲಿ ಅಟಲ್‍ಜಿ ಜೊತೆ ಕೆಲಸ ಮಾಡಿದವರಿಗೆ ಗೌರವ ಸಮರ್ಪಿಸಲಾಗಿದೆ.
ವಿಶೇಷ ಕಾರ್ಯಕ್ರಮಗಳು
ಬೀದರ್ ಜಿಲ್ಲೆಯಲ್ಲಿ ಬಹುಭಾಷಾ ಸಮ್ಮೇಳನ, ಯುವ ಮೋರ್ಚಾ ನೇತೃತ್ವದಲ್ಲಿ ‘ಅಟಲ್ ವಿರಾಸತ್ ವಾಕಥಾನ್’, ಬಾಗಲಕೋಟೆಯಲ್ಲಿ ಹಲಗಿ ಮಜಲು ಸ್ಪರ್ಧೆ, ದಾವಣಗೆರೆಯಲ್ಲಿ ವಿದ್ಯಾರ್ಥಿಗಳಿಗಾಗಿ ಪ್ರಬಂಧ ಸ್ಪರ್ಧೆಯಂತಹ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಆಗಸ್ಟ್ 16ರ ಕಾರ್ಯಕ್ರಮವು ಒಂದೇ ದಿನಕ್ಕೆ ಸೀಮಿತವಾಗದೇ, ಅಟಲ್‍ಜಿ ಅವರ ಕೊಡುಗೆಯನ್ನು ವ್ಯಾಪಕವಾಗಿ ತಿಳಿಸುವ ಸಲುವಾಗಿ ಚಿತ್ರ ನಮನ (ಚಿತ್ರಕಲಾ ಸ್ಪರ್ಧೆ), ರಂಗೋಲಿ ನಮನ (ರಂಗೋಲಿ ಸ್ಪರ್ಧೆ), ನುಡಿ ನಮನ (ಭಾಷಣ ಸ್ಪರ್ಧೆ-ಆನ್‌ಲೈನ್), ಬರಹ ನಮನ (ಪ್ರಬಂಧ ಸ್ಪರ್ಧೆ), ಸಂಗೀತ ನಮನ, ಮತ್ತು ನರಸಿಂಹಮೂರ್ತಿ ಅವರಿಂದ ರಚಿತವಾದ ಕಿರುನಾಟಕ ಪ್ರದರ್ಶನವನ್ನು ಆಯೋಜಿಸಲಾಗಿದೆ.
ಸಾರ್ವಜನಿಕರಿಗೆ ಮನವಿ
ಡಾ. ಶಿವಯೋಗಿಸ್ವಾಮಿ ಅವರು, “ಅಟಲ್‍ಜಿ ಅವರ ಜನ್ಮ ಶತಮಾನೋತ್ಸವ ಕಾರ್ಯಕ್ರಮವನ್ನು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಯಶಸ್ವಿಗೊಳಿಸಬೇಕು,” ಎಂದು ಮಾಧ್ಯಮಗಳ ಮೂಲಕ ಕೋರಿದರು. ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್, ಅಟಲ್ ಜನ್ಮ ಶತಮಾನೋತ್ಸವ ಕಾರ್ಯಕ್ರಮದ ಸಂಚಾಲಕ ಜಗದೀಶ್ ಹಿರೇಮನಿ, ಸಹ-ಸಂಚಾಲಕ ಫಣೀಶ್, ಅಭಿಯಾನ ಸಮಿತಿಯ ಸದಸ್ಯರಾದ ಸದಾಶಿವ ಮತ್ತು ಶಂಕರ್ ಬಿರಾದಾರ್ ಉಪಸ್ಥಿತರಿದ್ದರು.