ಕಬಿನಿ: ರಾಜ್ಯದ ಅಣೆಕಟ್ಟುಗಳ ಸುರಕ್ಷತೆಯನ್ನು ಖಾತ್ರಿಪಡಿಸಲು ಸರ್ಕಾರ ತಾಂತ್ರಿಕ ಸಮಿತಿಯನ್ನು ರಚಿಸಿದ್ದು, ಈ ಸಮಿತಿಯ ವರದಿ ಸ್ವೀಕೃತವಾದ ಬಳಿಕ ಅಗತ್ಯ ಕಾಮಗಾರಿಗಳನ್ನು ಆದ್ಯತೆಯ ಮೇರೆಗೆ ಕೈಗೊಳ್ಳಲಾಗುವುದು ಎಂದು ಉಪಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ತಿಳಿಸಿದರು.
ಕಬಿನಿ ಅಣೆಕಟ್ಟಿನ ಬಳಿ ಭಾನುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಡಿಸಿಎಂ, “ಕೆಆರ್‌ಎಸ್ ಅಣೆಕಟ್ಟಿನ ಬಳಿಕ ಇಂದು ಕಬಿನಿಯಲ್ಲಿ ಬಾಗಿನ ಅರ್ಪಣೆ ಮಾಡಿದ್ದೇವೆ. ಕಳೆದ ಎರಡು ವರ್ಷಗಳಿಂದ ಅಣೆಕಟ್ಟು ಭರ್ತಿಯಾಗಿರಲಿಲ್ಲ. ಈ ವರ್ಷ ತುಂಬಿದ್ದು, ಕಷ್ಟದ ಕಾಲದಲ್ಲೂ ಕಬಿನಿ ನಮಗೆ ಸಹಾಯವಾಗಿದೆ. ಈ ಪ್ರದೇಶದ ವಿಸ್ತರಣೆಗೆ ಸ್ಥಳೀಯ ಶಾಸಕರು ಪ್ರಸ್ತಾವನೆ ಸಲ್ಲಿಸಿದ್ದಾರೆ. ಮಹದೇಶ್ವರ ಬೆಟ್ಟದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ 35 ಕೋಟಿ ರೂ. ಮೌಲ್ಯದ ಅಭಿವೃದ್ಧಿ ಕಾಮಗಾರಿಗಳಿಗೆ ಅನುಮೋದನೆ ನೀಡಲಾಗಿದೆ. ಇದೇ ರೀತಿ 88 ಕೋಟಿ ರೂ. ವೆಚ್ಚದ ಹನಿ ನೀರಾವರಿ ಯೋಜನೆಗೆ ಡಿಪಿಆರ್ ಸಿದ್ಧಪಡಿಸಿ ಪ್ರಸ್ತಾವನೆ ಸಲ್ಲಿಸಲಾಗಿದೆ” ಎಂದರು.
ತುಂಗಭದ್ರಾ ಅಣೆಕಟ್ಟಿನ ಗೇಟ್ ದುರಸ್ತಿಯ ಬಳಿಕ ರಾಜ್ಯದ ಎಲ್ಲಾ ಅಣೆಕಟ್ಟುಗಳ ಸುರಕ್ಷತೆಗೆ ಸಂಬಂಧಿಸಿದಂತೆ ತಾಂತ್ರಿಕ ಸಮಿತಿಯನ್ನು ರಚಿಸಲಾಗಿದೆ. ಈ ಸಮಿತಿಯ ವರದಿಯ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಶಿವಕುಮಾರ್ ಸ್ಪಷ್ಟಪಡಿಸಿದರು.
ಕಬಿನಿ ಉತ್ಸವಕ್ಕೆ ಚರ್ಚೆ
ಕಬಿನಿ ಉತ್ಸವ ಆಯೋಜನೆಗೆ ಸಂಬಂಧಿಸಿದಂತೆ ಒತ್ತಾಯದ ಬಗ್ಗೆ ಕೇಳಿದಾಗ, “ಈ ಕುರಿತು ಪ್ರಸ್ತಾವನೆ ಬಂದಿದೆ. ಜಿಲ್ಲಾ ಸಚಿವರು ಹಾಗೂ ಇತರರೊಂದಿಗೆ ಚರ್ಚಿಸಿ, ಕಬಿನಿ ಉತ್ಸವ ಮತ್ತು ಕಾವೇರಿ ಆರತಿಯನ್ನು ಆಯೋಜಿಸುವ ಬಗ್ಗೆ ಪರಿಶೀಲಿಸುತ್ತೇವೆ. ಈ ಕಾರ್ಯಕ್ರಮಗಳ ಮೂಲಕ ಪ್ರವಾಸೋದ್ಯಮವನ್ನು ಉತ್ತೇಜಿಸುವುದರ ಜೊತೆಗೆ ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಲಾಗುವುದು” ಎಂದು ತಿಳಿಸಿದರು.
ಬಟಾನಿಕಲ್ ಗಾರ್ಡನ್ ಯೋಜನೆಗೆ ಬಂಡವಾಳದ ಅಗತ್ಯ
ಬಟಾನಿಕಲ್ ಗಾರ್ಡನ್ ಯೋಜನೆ ನೆನೆಗುದಿಗೆ ಬಿದ್ದಿದೆ ಎಂಬ ಪ್ರಶ್ನೆಗೆ, “ಈ ಯೋಜನೆಗೆ ಬಂಡವಾಳ ಹೂಡಿಕೆದಾರರು ಮುಂದೆ ಬರಬೇಕು. ನಮ್ಮ ಆದ್ಯತೆಯೆಂದರೆ ನೀರಿನ ಸಮರ್ಪಕ ಬಳಕೆ ಮತ್ತು ಅಣೆಕಟ್ಟುಗಳ ಸುರಕ್ಷತೆ” ಎಂದು ಉತ್ತರಿಸಿದರು.
ದೆಹಲಿ ಖಾಸಗಿ ಪ್ರವಾಸ
ದಿಢೀರ್ ದೆಹಲಿ ಪ್ರವಾಸದ ಬಗ್ಗೆ ಕೇಳಿದಾಗ, “ಮುಖ್ಯಮಂತ್ರಿಗಳಿಗೆ ಮಾಹಿತಿ ನೀಡಿ ಖಾಸಗಿ ಕೆಲಸದ ನಿಮಿತ್ತ ದೆಹಲಿಗೆ ತೆರಳಿದ್ದೆ. ಮಾರ್ಗಮಧ್ಯೆ ನನ್ನ ಬೆಂಗಾವಲು ವಾಹನ ಅಪಘಾತಕ್ಕೀಡಾಯಿತು. ಆದರೆ ಚಾಮುಂಡೇಶ್ವರಿ ಕೃಪೆಯಿಂದ ಯಾರಿಗೂ ತೊಂದರೆಯಾಗಿಲ್ಲ. ವಕೀಲರೊಂದಿಗಿನ ಸಭೆಗಾಗಿ ಸಂಜೆ 7.30ಕ್ಕೆ ತೆರಳಿ, 9.30ಕ್ಕೆ ವಾಪಸ್ ಬಂದಿದ್ದೇನೆ. ಇದು ಖಾಸಗಿ ಕಾರ್ಯಕ್ರಮವಷ್ಟೇ, ರಾಜಕೀಯವಿಲ್ಲ” ಎಂದು ಸ್ಪಷ್ಟಪಡಿಸಿದರು.
ಬಿಜೆಪಿಯ ಟೀಕೆಗೆ ಲೇವಡಿ
ಡಿ.ಕೆ. ಶಿವಕುಮಾರ್ ಅವರಿಗೆ ಅಪಮಾನವಾಗಿದೆ ಎಂಬ ಬಿಜೆಪಿ ನಾಯಕರ ಹೇಳಿಕೆಗೆ ಪ್ರತಿಕ್ರಿಯೆಯಾಗಿ, “ಅವರಿಗೆ ಯಾವಾಗಲೂ ನನ್ನ ಮೇಲೆ ಪ್ರೀತಿ ಜಾಸ್ತಿ. ನಾನು ಬಲಿಷ್ಠನಾಗಿರುವುದಕ್ಕೆ ಅವರಿಗೆ ಹೆಚ್ಚು ಪ್ರೀತಿ” ಎಂದು ಲೇವಡಿಯಿಂದ ಉತ್ತರಿಸಿದರು.