ಬೆಂಗಳೂರು: ರಾಜ್ಯದ ಸರ್ಕಾರಿ ಪ್ರಾಥಮಿಕ, ಪ್ರೌಢ ಶಾಲೆಗಳು ಮತ್ತು ಪದವಿ ಪೂರ್ವ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅತಿಥಿ ಶಿಕ್ಷಕರು ಹಾಗೂ ಉಪನ್ಯಾಸಕರಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದ್ದು, ಅವರ ಮಾಸಿಕ ಗೌರವ ಸಂಭಾವನೆಯನ್ನು ತಲಾ ₹2,000 ಗಳಷ್ಟು ಹೆಚ್ಚಿಸುವಂತೆ ಆದೇಶ ಹೊರಡಿಸಿದೆ.
ಈ ಹೊಸ ಆದೇಶವು ತಕ್ಷಣದಿಂದಲೇ ಜಾರಿಗೆ ಬರಲಿದ್ದು, ಮುಂದಿನ ಸೂಚನೆಗಳು ಬರುವವರೆಗೆ ಪರಿಷ್ಕೃತ ಸಂಭಾವನೆ ನೀಡಲಾಗುವುದು ಎಂದು ಸರ್ಕಾರ ತಿಳಿಸಿದೆ.
ಹೆಚ್ಚಳದ ನಂತರ, ಪ್ರಾಥಮಿಕ ಶಾಲಾ ಅತಿಥಿ ಶಿಕ್ಷಕರಿಗೆ ಗೌರವಧನ ₹10,000 ರಿಂದ ₹12,000ಕ್ಕೆ, ಪ್ರೌಢ ಶಾಲಾ ಅತಿಥಿ ಶಿಕ್ಷಕರಿಗೆ ₹10,500 ರಿಂದ ₹12,500ಕ್ಕೆ ಹೆಚ್ಚಳವಾಗಲಿದೆ.
ಅಂತೆಯೇ, ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಅತಿಥಿ ಉಪನ್ಯಾಸಕರಿಗೆ ಈಗಿರುವ ₹12,000 ಗೌರವಧನವನ್ನು ₹14,000ಕ್ಕೆ ಏರಿಸಲಾಗಿದೆ.
ಅತಿಥಿ ಶಿಕ್ಷಕರು ಮತ್ತು ಉಪನ್ಯಾಸಕರ ಬಹುದಿನದ ಬೇಡಿಕೆಗೆ ಪ್ರತಿಕ್ರಿಯೆಯಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ಮೂಲಕ, ಶಿಕ್ಷಣ ಕ್ಷೇತ್ರದಲ್ಲಿ ಸೇವೆ ನೀಡುತ್ತಿರುವ ಅತಿಥಿ ಬೋಧಕರಿಗೆ ಅರ್ಥಿಕ ಭದ್ರತೆ ಒದಗಿಸಲು ಸರ್ಕಾರ ಮುಂದಾಗಿದೆ.