ಅಥಣಿ: ಅಥಣಿ ಸಕ್ಕರೆ ಕಾರ್ಖಾನೆ ಚುನಾವಣೆಯ ಮತದಾನದ ವೇಳೆ ಗಲಾಟೆಯ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಶಾಸಕ ಮಹೇಶ ಕುಮಟಳ್ಳಿ ಅವರು ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ರಮೇಶ ಜಾರಕಿಹೊಳಿ ಅವರ ಆಪ್ತರಾಗಿರುವ ಕುಮಟಳ್ಳಿ, ಶಾಸಕ ಲಕ್ಷ್ಮಣ ಸವದಿ ವಿರುದ್ಧ ತಮ್ಮ ಬಣದಿಂದ ಪ್ಯಾನಲ್ ನಿರ್ಮಿಸಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ.
ಕುಮಟಳ್ಳಿ ಅವರು, ಸವದಿ ಬೆಂಬಲಿಗರು ತಮ್ಮ ಬಣದ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಚುನಾವಣೆಯಲ್ಲಿ ಗೆಲುವು ಸಾಧಿಸಲು ಸವದಿ ಬಣದವರು ಅಡ್ಡದಾರಿ ಅನುಸರಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ, ಮತದಾರರ ಪಟ್ಟಿಯಲ್ಲಿ ಗಂಭೀರ ಗೊಂದಲಗಳಿವೆ ಎಂದು ಕುಮಟಳ್ಳಿ ಆರೋಪಿಸಿದ್ದಾರೆ. “ಸತ್ತವರು ಜೀವಂತರಾಗಿ ಮಾತನಾಡಿದ್ದಾರೆ ಎಂದು ತೋರಿಸಲಾಗಿದೆ, ಆದರೆ ಜೀವಂತವಾಗಿರುವವರನ್ನು ಮತದಾರರ ಪಟ್ಟಿಯಲ್ಲಿ ಸತ್ತವರೆಂದು ತೋರಿಸಲಾಗಿದೆ,” ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ.
ಸವದಿ ಬೆಂಬಲಿಗರು ದಬ್ಬಾಳಿಕೆಯಲ್ಲಿ ತೊಡಗಿದ್ದಾರೆ ಎಂದು ಕಿಡಿಕಾರಿರುವ ಕುಮಟಳ್ಳಿ, ಈ ಕುರಿತು ತನಿಖೆಗೆ ಒತ್ತಾಯಿಸಿದ್ದಾರೆ. ಈ ಘಟನೆಯಿಂದ ಅಥಣಿಯಲ್ಲಿ ರಾಜಕೀಯ ವಾತಾವರಣ ಉದ್ವಿಗ್ನವಾಗಿದ್ದು, ಚುನಾವಣೆಯ ಪಾರದರ್ಶಕತೆಯ ಕುರಿತು ಚರ್ಚೆಗಳು ಆರಂಭವಾಗಿವೆ.












