ಬೆಂಗಳೂರು: ಅಮೆರಿಕದ ಅಲಬಾಮಾ ರಾಜ್ಯದ ಔಬರ್ನ್ ವಿಶ್ವವಿದ್ಯಾಲಯದ ಪ್ರತಿನಿಧಿಗಳ ನಿಯೋಗ ಇಂದು ವಿಕಾಸಸೌಧದಲ್ಲಿ ಕರ್ನಾಟಕ ರಾಜ್ಯದ ಕೃಷಿ ಸಚಿವ ಎನ್. ಚಲುವರಾಯಸ್ವಾಮಿಯವರನ್ನು ಭೇಟಿಯಾಗಿ ಕರ್ನಾಟಕದ ಕೃಷಿ ವಿಶ್ವವಿದ್ಯಾಲಯಗಳೊಂದಿಗೆ ಸಹಯೋಗದ ಬಗ್ಗೆ ಚರ್ಚೆ ನಡೆಸಿತು.
ಈ ಸಭೆಯಲ್ಲಿ ಡಾ. ಜಾನಕಿ ಅಲವಲಪಟ್ಟಿ (ಡೀನ್, ಅರಣ್ಯ ಮಹಾವಿದ್ಯಾಲಯ ಮತ್ತು ವನ್ಯಜೀವಿ ವಿಭಾಗ), ಡಾ. ಜಾರ್ಜ್ ಫ್ಲವರ್ಸ್ (ಡೀನ್, ಮೆಕಾನಿಕಲ್ ಇಂಜಿನಿಯರಿಂಗ್ ವಿಭಾಗ), ಡಾ. ಸೀಮಾ ಸ್ಟೀವಾರ್ಟ್ (ನಿರ್ದೇಶಕ, ವೃತ್ತಿಪರ ಅಭಿವೃದ್ಧಿ ವಿಭಾಗ), ಜಸ್ಟಿನ್ ಮಿಲ್ಲರ್, ಡಾ. ವೃಷಾಕ್ ರಾಘವ್ ಶಂಕರ ಗೌಡ (ಪ್ರಾಧ್ಯಾಪಕರು, ಏರೋಸ್ಪೇಸ್ ವಿಭಾಗ) ಸೇರಿದಂತೆ ಹಲವು ಗಣ್ಯರು ಭಾಗವಹಿಸಿದರು.

ಸಭೆಯಲ್ಲಿ ಕರ್ನಾಟಕ ಮತ್ತು ಔಬರ್ನ್ ವಿಶ್ವವಿದ್ಯಾಲಯಗಳ ನಡುವಿನ ಸಹಯೋಗ ಮತ್ತು ಕೃಷಿ, ತೋಟಗಾರಿಕೆ, ಪಶುಸಂಗೋಪನೆ ಹಾಗೂ ಅರಣ್ಯ ಕ್ಷೇತ್ರದಲ್ಲಿ ಉನ್ನತ ವ್ಯಾಸಂಗ ಮತ್ತು ಸಂಶೋಧನೆ ಕುರಿತಂತೆ ಚರ್ಚೆ ನಡೆಯಿತು. ಈಗಾಗಲೇ ತೆಲಂಗಾಣ ಕೃಷಿ ವಿಶ್ವವಿದ್ಯಾಲಯ ಔಬರ್ನ್ ವಿಶ್ವವಿದ್ಯಾಲಯದೊಂದಿಗೆ ಒಡಂಬಡಿಕೆ ಮಾಡಿಕೊಂಡಿರುವುದರಿಂದ, ಕರ್ನಾಟಕದಲ್ಲೂ ಇದೇ ಮಾದರಿಯ ಒಡಂಬಡಿಕೆ ಸಿದ್ಧಪಡಿಸಲು ಕೃಷಿ ಸಚಿವರು ಸಂಬಂಧಿತ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಸಭೆಯಲ್ಲಿ ಕೃಷಿ ಇಲಾಖೆ ಕಾರ್ಯದರ್ಶಿ ಡಾ. ರವಿಶಂಕರ್, ಆಯುಕ್ತ ವೈ.ಎಸ್. ಪಾಟೀಲ್, ಜಲಾನಯನ ಆಯುಕ್ತ ಮಹೇಶ್ ಶಿರೂರು, ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಉಪಕುಲಪತಿ ಸುರೇಶ್, ಕೃಷಿ ಇಲಾಖೆ ನಿರ್ದೇಶಕ ಡಾ. ಪುತ್ರ, ಜಲಾನಯನ ಅಭಿವೃದ್ಧಿ ಇಲಾಖೆಯ ನಿರ್ದೇಶಕ ಬಂಥನಾಳ್ ಸೇರಿದಂತೆ ಅನೇಕ ಅಧಿಕಾರಿಗಳು ಭಾಗವಹಿಸಿದರು.
ಇದರಿಂದ ರಾಜ್ಯದ ಕೃಷಿ ಶಿಕ್ಷಣ ಮತ್ತು ಸಂಶೋಧನೆಗೆ ಹೊಸ ಮಾರ್ಗಗಳು ತೆರೆಯಲಿವೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದರು.