ಬೆಂಗಳೂರು, ಏಪ್ರಿಲ್ 26: ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಶಿಕ್ಷಣ ಕ್ಷೇತ್ರಕ್ಕೆ ಕಾಲಿಟ್ಟು ‘ಜೂನಿಯರ್ ಟೋಸ್ ಇಂಟರ್ನ್ಯಾಷನಲ್ ಪ್ರೀಸ್ಕೂಲ್’ ಪ್ರಾರಂಭಿಸಿದ್ದಾರೆ. ಸುನೀತಾ ಗೌಡ, ಸ್ಪೂರ್ತಿ ವಿಶ್ವಾಸ್, ಶೃತಿ ಕಿರಣ್ ಅವರೊಂದಿಗೆ ಕೈಜೋಡಿಸಿರುವ ಅವರು, ಈ ಶಾಲೆಯ ಟೀಸರ್‌ನ್ನು ಏಪ್ರಿಲ್ 25ರಂದು ಬೆಂಗಳೂರಿನ ಒರಿಯನ್ ಮಾಲ್‌ನಲ್ಲಿ ಬಿಡುಗಡೆಗೊಳಿಸಿದರು. ಕಾರ್ಯಕ್ರಮದಲ್ಲಿ ನಟಿ ಮಿಲನಾ ನಾಗರಾಜ್ ವಿಶೇಷ ಅತಿಥಿಯಾಗಿ ಭಾಗವಹಿಸಿದ್ದರು. ಜೂನ್ 2025ರಿಂದ ಈ ಪ್ರೀಸ್ಕೂಲ್‌ನಲ್ಲಿ ಪ್ರವೇಶ ಆರಂಭವಾಗಲಿದೆ.
ಅಶ್ವಿನಿ ಪುನೀತ್ ರಾಜ್‌ಕುಮಾರ್ ಮಾತನಾಡಿ, “‘ಜೂನಿಯರ್ ಟೋಸ್ ಇಂಟರ್ನ್ಯಾಷನಲ್ ಪ್ರೀಸ್ಕೂಲ್’ 12 ಕೇಂದ್ರಗಳನ್ನು ಆರಂಭಿಸಿದ್ದೇವೆ, ಇದರಲ್ಲಿ ಮೈಸೂರಿನಲ್ಲಿ ಒಂದು ಕೇಂದ್ರವಿದೆ. ಪ್ರತಿ ಮಗುವಿನ ಸಾಮರ್ಥ್ಯವನ್ನು ಪೋಷಿಸಿ, ನಾಯಕತ್ವ ಗುಣಗಳನ್ನು ಬೆಳೆಸುವುದು ನಮ್ಮ ಗುರಿಯಾಗಿದೆ,” ಎಂದರು.
ನಟಿ ಮಿಲನಾ ನಾಗರಾಜ್, “‘ಜೂನಿಯರ್ ಟೋಸ್’ ಹೆಸರು ಮುದ್ದಾಗಿದೆ. ಇಂದಿನ ಮಕ್ಕಳಿಗೆ ಕೌಶಲ್ಯ ಕಲಿಸುವ ಈ ಶಾಲೆ ಒಳ್ಳೆಯ ಅವಕಾಶ. ಇದು ಕೇವಲ ಆರಂಭವಷ್ಟೇ, ಇಡೀ ತಂಡಕ್ಕೆ ಶುಭವಾಗಲಿ,” ಎಂದರು.
ಸ್ಪೂರ್ತಿ ವಿಶ್ವಾಸ್ ಮಾತನಾಡಿ, “ಇದು ದೊಡ್ಡ ಜವಾಬ್ದಾರಿಯ ಕೆಲಸ. ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರ ಮಾರ್ಗದರ್ಶನದಲ್ಲಿ, ಡಾ. ಪುನೀತ್ ರಾಜ್‌ಕುಮಾರ್ ಅವರ ಹೆಸರನ್ನು ಉಳಿಸಲು ದಿನರಾತ್ರಿ ಶ್ರಮಿಸುತ್ತಿದ್ದೇವೆ. ಈ ಶಾಲೆಯಿಂದ ಮಕ್ಕಳು ಉತ್ತಮ ನಾಗರಿಕರಾಗಿ ಬೆಳೆಯುವ ನಂಬಿಕೆ ಇದೆ,” ಎಂದರು.
ಸುನೀತಾ ಗೌಡ, “‘ಜೂನಿಯರ್ ಟೋಸ್’ ಕೇಂದ್ರಗಳು ಮಕ್ಕಳನ್ನು ಧೈರ್ಯದಿಂದ ಕನಸು ಕಾಣಲು, ಸೃಜನಾತ್ಮಕವಾಗಿ ಯೋಚಿಸಲು ಮತ್ತು ಆತ್ಮವಿಶ್ವಾಸದಿಂದ ಮುನ್ನಡೆಯಲು ಸಬಲೀಕರಣಗೊಳಿಸುತ್ತವೆ. ನಾಯಕತ್ವ, ಸಾಂಸ್ಕೃತಿಕ ಮೌಲ್ಯಗಳು ಮತ್ತು ಜವಾಬ್ದಾರಿಯುತ ಪೌರತ್ವವನ್ನು ಉತ್ತೇಜಿಸುವ ಗುರಿಯನ್ನು ಹೊಂದಿದ್ದೇವೆ,” ಎಂದು ತಿಳಿಸಿದರು.
‘ಜೂನಿಯರ್ ಟೋಸ್ ಇಂಟರ್ನ್ಯಾಷನಲ್ ಪ್ರೀಸ್ಕೂಲ್’ ಕ್ರಾಂತಿಕಾರಿ ಪ್ರಾಥಮಿಕ ಶಿಕ್ಷಣ ಯೋಜನೆಯಾಗಿದ್ದು, ಡಾ. ಬಿಂದು ರಾಣಾ ಅವರ ಅತ್ಯಾಧುನಿಕ ಪಠ್ಯಕ್ರಮದೊಂದಿಗೆ ಮಕ್ಕಳಲ್ಲಿ ನಾಯಕತ್ವ, ಸೃಜನಶೀಲತೆ ಮತ್ತು ಉದ್ಯಮಶೀಲತೆಯನ್ನು ಬೆಳೆಸುವ ಗುರಿಯನ್ನು ಹೊಂದಿದೆ. 2 ರಿಂದ 6 ವರ್ಷದ ಮಕ್ಕಳಿಗೆ ಆಧುನಿಕ ಸೌಲಭ್ಯಗಳು, ಅನುಭವಿ ಶಿಕ್ಷಕರು ಮತ್ತು ವಿನೂತನ ಪಠ್ಯಕ್ರಮಗಳೊಂದಿಗೆ ಶಿಕ್ಷಣ ನೀಡಲಾಗುವುದು.
ಪ್ರಸ್ತುತ ಬೆಂಗಳೂರು ಮತ್ತು ಮೈಸೂರಿನಲ್ಲಿ ಆರಂಭಗೊಂಡಿರುವ ಈ ಶಿಕ್ಷಣ ಸಂಸ್ಥೆಯನ್ನು ಭವಿಷ್ಯದಲ್ಲಿ ದೇಶಾದ್ಯಂತ ವಿಸ್ತರಿಸುವ ಯೋಜನೆಯಿದೆ. ಈ ಮೂಲಕ ಎಲ್ಲಾ ಭಾರತೀಯ ಮಕ್ಕಳಿಗೆ ವಿನೂತನ ಶಿಕ್ಷಣ ದೊರೆಯುವಂತಾಗಬೇಕು ಎಂಬುದು ಸಂಸ್ಥಾಪಕರ ಆಶಯವಾಗಿದೆ.