ದಾವಣಗೆರೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ರಾಜಕೀಯ ಸ್ವಾರ್ಥಕ್ಕಾಗಿ ಮತ್ತು ಅಧಿಕಾರದ ಕುರ್ಚಿ ಉಳಿಸಿಕೊಳ್ಳಲು ತಮ್ಮನ್ನು ಬೆಳೆಸಿದ ಅಹಿಂದ ವರ್ಗವನ್ನೇ ಹತ್ತಿಕ್ಕುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ತೀವ್ರ ಆರೋಪ ಮಾಡಿದರು.
ದಾವಣಗೆರೆಯಲ್ಲಿ ಭಾನುವಾರ ಬೆಳಗ್ಗೆ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, “ಅಹಿಂದ ಹೆಸರಿನಲ್ಲಿ ನಿರಂತರವಾಗಿ ಲೂಟಿ ನಡೆಯುತ್ತಿದೆ. ಸಾಮಾಜಿಕ ನ್ಯಾಯದ ಹೆಸರಲ್ಲಿ ಸಿದ್ದರಾಮಯ್ಯ ಅವರು ತಮ್ಮ ಸ್ವಾರ್ಥ ಸಾಧಿಸುತ್ತಿದ್ದಾರೆ” ಎಂದು ಖಾರವಾಗಿ ಟೀಕಿಸಿದರು.
ಮುಸ್ಲಿಂ ಮತಗಳ ಬಗ್ಗೆ ಬಹಿರಂಗ ಕರೆ
ದಾವಣಗೆರೆ ದಕ್ಷಿಣ ವಿಧಾನಸಭೆ ಉಪಚುನಾವಣೆಯಲ್ಲಿ ಸಿದ್ದರಾಮಯ್ಯ ಅವರು ಮುಸ್ಲಿಂ ಅಭ್ಯರ್ಥಿಗಳಿಗೆ ಮತ ಹಾಕಬೇಡಿ ಎಂದು ಬಹಿರಂಗವಾಗಿ ಕರೆ ನೀಡಿರುವುದನ್ನು ಉಲ್ಲೇಖಿಸಿದ ಕುಮಾರಸ್ವಾಮಿ, “ಅಹಿಂದ ವರ್ಗದಲ್ಲಿ ಪ್ರಮುಖ ಭಾಗವಾದ ಮುಸ್ಲಿಂ ಜನಾಂಗದ ಮತಗಳಿಂದಲೇ ರಾಜಕೀಯ ಶಕ್ತಿ ಪಡೆದ ಸಿದ್ದರಾಮಯ್ಯ, ಈಗ ಅವರಿಗೆ ವಿರುದ್ಧವಾಗಿ ಮತ ಹಾಕಬೇಡಿ ಎಂದು ಹೇಳುತ್ತಿದ್ದಾರೆ. ಇದು ಸಾಮಾಜಿಕ ನ್ಯಾಯವೇ?” ಎಂದು ಪ್ರಶ್ನಿಸಿದರು.
ಅಹಿಂದ ನಾಯಕನಾಗಿ ಲೂಟಿ ಆರೋಪ
ತಾನು ಅಹಿಂದ ವರ್ಗದ ನಾಯಕ ಎಂದು ಸಿದ್ದರಾಮಯ್ಯ ಹೇಳಿಕೊಳ್ಳುವುದನ್ನು ಟೀಕಿಸಿದ ಕುಮಾರಸ್ವಾಮಿ, “ವಾಲ್ಮೀಕಿ ನಿಗಮದಲ್ಲಿ ಲೂಟಿ ಆಗಿದೆ ಎಂದು ಸ್ವತಃ ಮುಖ್ಯಮಂತ್ರಿಗಳೇ ಒಪ್ಪಿಕೊಂಡಿದ್ದಾರೆ. ‘ಪ್ರತಿಪಕ್ಷಗಳು ಹೇಳಿದಷ್ಟು ದುಡ್ಡು ಹೊಡೆದಿಲ್ಲ, ಆದರೂ ಸ್ವಲ್ಪ ಹೊಡೆದಿದ್ದೇವೆ’ ಎಂದು ಅವರು ಹೇಳಿದ್ದಾರೆ. ದೇವರಾಜ್ ಅರಸು ನಿಗಮದ ಮೂಲಕ ನಡೆಯುತ್ತಿದ್ದ ಗಂಗಾ ಕಲ್ಯಾಣ ಯೋಜನೆಯನ್ನೂ ಲೂಟಿ ಮಾಡಲಾಗಿದೆ. ಒಬ್ಬರು-ಇಬ್ಬರಿಗೆ ಮಾತ್ರ ಸೌಲಭ್ಯ ಸಿಗುತ್ತಿದೆ” ಎಂದು ಕಿಡಿಕಾರಿದರು.
ಸರ್ಕಾರ ದಾವಣಗೆರೆಯಲ್ಲಿ ಮೊಕ್ಕಂ ಹೂಡಿದೆ
ಉಪಚುನಾವಣೆಯನ್ನು ಹೇಗಾದರೂ ಗೆಲ್ಲಬೇಕು ಎಂಬ ಉದ್ದೇಶದಿಂದ ಇಡೀ ಸರ್ಕಾರ ಆಡಳಿತವನ್ನು ಗಾಳಿಗೆ ಬಿಟ್ಟು ದಾವಣಗೆರೆಯಲ್ಲಿ ಮೊಕ್ಕಂ ಹೂಡಿದೆ ಎಂದು ಆರೋಪಿಸಿದ ಅವರು, “ವಿಧಾನಸೌಧ ಸಂಪೂರ್ಣ ಖಾಲಿ ಆಗಿದೆ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಸಚಿವರು ಮತ್ತು ಎಐಸಿಸಿ ರಾಜ್ಯ ಉಸ್ತುವಾರಿ ಕೂಡ ಇಲ್ಲಿಯೇ ತಳವೂರಿದ್ದಾರೆ” ಎಂದು ಲೇವಡಿ ಮಾಡಿದರು.
ಗ್ಯಾರಂಟಿಗಳೇ ಏಕೈಕ ಬಂಡವಾಳ
ಕಾಂಗ್ರೆಸ್ ಸರ್ಕಾರಕ್ಕೆ ಗ್ಯಾರಂಟಿ ಯೋಜನೆಗಳನ್ನು ಬಿಟ್ಟರೆ ಬೇರೆ ಯಾವುದೇ ಬಂಡವಾಳವಿಲ್ಲ ಎಂದು ಕುಮಾರಸ್ವಾಮಿ ಹೇಳಿದರು. “ಗೃಹಲಕ್ಷ್ಮಿ ಹಣವನ್ನು ಬಾಕಿ ಉಳಿಸಿಕೊಂಡು ಚುನಾವಣೆ ಸಮೀಪಿಸಿದಾಗ ಮಹಿಳೆಯರ ಖಾತೆಗೆ ಜಮೆ ಮಾಡುತ್ತಿದ್ದಾರೆ. ಕಳೆದ ಮೂರು ವರ್ಷಗಳಲ್ಲಿ ಸರ್ಕಾರದ ಸಾಧನೆ ಶೂನ್ಯ. ಗ್ಯಾರಂಟಿಗಳನ್ನು ಬಿಟ್ಟರೆ ಬೇರೆ ಏನೂ ಸಾಧನೆ ಇಲ್ಲ” ಎಂದರು.

ಕಾಂತರಾಜು ಮತ್ತು ಜಯಪ್ರಕಾಶ ಹೆಗಡೆ ವರದಿಗಳ ಬಗ್ಗೆ ಪ್ರಶ್ನೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತನ್ನ ಮೇಲೆ ನಿರಂತರ ಆರೋಪ ಮಾಡುತ್ತಿರುವುದನ್ನು ಉಲ್ಲೇಖಿಸಿದ ಕುಮಾರಸ್ವಾಮಿ, “ಕಾಂತರಾಜು ಆಯೋಗದ ವರದಿ ಮತ್ತು ಜಯಪ್ರಕಾಶ ಹೆಗಡೆ ವರದಿಯನ್ನು ಏಕೆ ಇನ್ನೂ ಕೋಲ್ಡ್ ಸ್ಟೋರೇಜ್‌ನಲ್ಲಿ ಇಟ್ಟುಕೊಂಡಿದ್ದೀರಿ? ಅಹಿಂದ ನಾಯಕ ಎಂದು ಹೇಳಿಕೊಳ್ಳುವ ನೀವು ಈ ವರದಿಗಳನ್ನು ಬಿಡುಗಡೆ ಮಾಡಿ ಅವಕಾಶ ವಂಚಿತ ಸಮುದಾಯಗಳಿಗೆ ಅನುಕೂಲ ಮಾಡಿಕೊಡುವುದು ಏಕೆ ಸಾಧ್ಯವಾಗುತ್ತಿಲ್ಲ?” ಎಂದು ತೀಕ್ಷ್ಣ ಪ್ರಶ್ನೆ ಮಾಡಿದರು.
ಒಳ ಮೀಸಲಾತಿ ವಿಚಾರದಲ್ಲಿ ಮುಖ್ಯಮಂತ್ರಿಗಳು ಮೌನ ವಹಿಸಿರುವುದನ್ನು ಖಂಡಿಸಿದ ಅವರು, “ಎಲ್ಲವನ್ನು ಬಿಟ್ಟು ಗ್ಯಾರಂಟಿಗಳ ಬಗ್ಗೆ ಮಾತ್ರ ಜಾಗಟೆ ಹೊಡೆಯುತ್ತಿದ್ದೀರಿ. ಗ್ಯಾರಂಟಿಗಳಿಂದ ಶಾಶ್ವತವಾಗಿ ಅಧಿಕಾರದಲ್ಲಿ ಉಳಿಯಲು ಸಾಧ್ಯವಿಲ್ಲ” ಎಂದು ಸ್ಪಷ್ಟಪಡಿಸಿದರು.
ತಲಾದಾಯ ಚೆನ್ನಾಗಿದ್ದರೆ ಗ್ಯಾರಂಟಿ ಏಕೆ?
ರಾಜ್ಯದ ತಲಾದಾಯ ಎರಡನೇ ಸ್ಥಾನದಲ್ಲಿದೆ ಎಂದು ಸರ್ಕಾರ ಹೇಳುತ್ತಿದ್ದರೂ ಗ್ಯಾರಂಟಿ ಯೋಜನೆಗಳನ್ನು ಏಕೆ ನೀಡುತ್ತಿದ್ದೀರಿ ಎಂದು ಪ್ರಶ್ನಿಸಿದ ಕುಮಾರಸ್ವಾಮಿ, “ತಲಾದಾಯ ಚೆನ್ನಾಗಿದ್ದರೆ ಉಚಿತ ಕೊಡುಗೆಗಳ ಅಗತ್ಯ ಏಕೆ? ಜನರನ್ನು ಪರಾವಲಂಬಿಗಳನ್ನಾಗಿ ಮಾಡುತ್ತಿದ್ದೀರಿ. ಪರಿಶಿಷ್ಟರ ಹಣವನ್ನು ಕಿತ್ತು ಗ್ಯಾರಂಟಿಗಳಿಗೆ ಬಳಸುತ್ತಿದ್ದೀರಿ. ದಲಿತ ಮತ್ತು ಅಲ್ಪಸಂಖ್ಯಾತ ಮಕ್ಕಳ ವಿದ್ಯಾರ್ಥಿ ವೇತನ ಸಕಾಲಕ್ಕೆ ನೀಡಲು ಸಾಧ್ಯವಾಗುತ್ತಿಲ್ಲ. ಲಕ್ಷಾಂತರ ಮನೆಗಳು ಕಟ್ಟಿದ್ದೀರಿ ಎಂದು ಹೇಳುತ್ತೀರಿ, ದಾವಣಗೆರೆಯಲ್ಲಿ ಎಷ್ಟು ಮನೆಗಳು ಕಟ್ಟಿದ್ದೀರಿ? ಲೆಕ್ಕ ಕೊಡಿ” ಎಂದು ಆರೋಪಿಸಿದರು.
ಮಾಧ್ಯಮಗೋಷ್ಠಿಯಲ್ಲಿ ಮಾಜಿ ಸಚಿವರಾದ ರಮೇಶ್ ಜಾರಕಿಹೊಳಿ, ಮುರುಗೇಶ್ ನಿರಾಣಿ, ಮಾಜಿ ಸಂಸದ ಜಿ.ಎಂ. ಸಿದ್ದೇಶ್ವರ್, ಶಾಸಕ ಬಿ.ಪಿ. ಹರೀಶ್, ವಿಧಾನಪರಿಷತ್ ಸದಸ್ಯ ಬೋಜೇಗೌಡ ಮತ್ತು ಉಪಚುನಾವಣೆ ಅಭ್ಯರ್ಥಿ ಶ್ರೀನಿವಾಸ ದಾಸ್ ಕರಿಯಪ್ಪ ಸೇರಿದಂತೆ ಹಲವು ನಾಯಕರು ಉಪಸ್ಥಿತರಿದ್ದರು.












