ಅಹ್ಮದಾಬಾದ್ (ಗುಜರಾತ್): ಗುಜರಾತ್‌ನ ಅಹ್ಮದಾಬಾದ್‌ನಲ್ಲಿ ನೆಲೆಸಿರುವ ಕನ್ನಡಿಗರ ಭಾಷಾಭಿಮಾನಕ್ಕೆ ಮನಸೋತ ಕೇಂದ್ರ ಭಾರೀ ಕೈಗಾರಿಕೆ ಹಾಗೂ ಉಕ್ಕು ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು, ಅಹ್ಮದಾಬಾದ್ ಕರ್ನಾಟಕ ಸಂಘಕ್ಕೆ ಸ್ವಂತ ಕನ್ನಡ ಭವನ ನಿರ್ಮಾಣಕ್ಕೆ ಅಗತ್ಯವಿರುವ ನಿವೇಶನವನ್ನು ಕೊಡಿಸಿಕೊಡಲು ಗುಜರಾತ್ ಸರ್ಕಾರದೊಂದಿಗೆ ಶೀಘ್ರದಲ್ಲೇ ಚರ್ಚೆ ನಡೆಸುವುದಾಗಿ ಭರವಸೆ ನೀಡಿದ್ದಾರೆ.

ಅಹ್ಮದಾಬಾದ್ ಕರ್ನಾಟಕ ಸಂಘದ ಆಶ್ರಯದಲ್ಲಿ ಶನಿವಾರ ನಡೆದ ೭೦ನೇ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, “ಅಹ್ಮದಾಬಾದ್‌ನಲ್ಲಿ ಸಾವಿರಾರು ಕನ್ನಡ ಕುಟುಂಬಗಳು ದಶಕಗಳಿಂದ ನೆಲೆಸಿವೆ. ನಿಮ್ಮ ಕನ್ನಡ ಸೇವೆ ನೋಡಿ ನನಗೆ ಅಪಾರ ಸಂತೋಷವಾಗಿದೆ. ಸಂಘಕ್ಕೆ ಸ್ವಂತ ಭವನ ಬೇಕೆಂಬ ನಿಮ್ಮ ಬೇಡಿಕೆಯನ್ನು ಗುಜರಾತ್ ಸರ್ಕಾರದೊಂದಿಗೆ ಚರ್ಚಿಸಿ ಅತಿ ಶೀಘ್ರದಲ್ಲಿ ನಿವೇಶನ ಮತ್ತು ಭವನ ನಿರ್ಮಾಣಕ್ಕೆ ಅಗತ್ಯ ನೆರವು ಒದಗಿಸುತ್ತೇನೆ” ಎಂದು ಹೇಳಿದರು.
“ನಿಮ್ಮ ಭಾಷಾಭಿಮಾನಕ್ಕೆ ನಾನು ಮೂಕನಾಗಿದ್ದೇನೆ. ಅಹ್ಮದಾಬಾದ್‌ನಲ್ಲಿರುವಾಗ ಕರ್ನಾಟಕದಲ್ಲೇ ಇರುವಂತೆ ಭಾಸವಾಗುತ್ತಿದೆ. ‘ಎಲ್ಲಾದರೂ ಇರು ಎಂತಾದರೂ ಇರು, ನೀ ಕನ್ನಡವಾಗಿರು’ ಎಂಬ ರಾಷ್ಟ್ರಕವಿ ಕುವೆಂಪು ಅವರ ಸಂದೇಶಕ್ಕೆ ನೀವು ನಿಜವಾದ ಜೀವಾಂತ ಉದಾಹರಣೆ” ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ತಾಯ್ನಾಡನ್ನು ಮರೆಯದೇ, ದೂರದ ಊರಲ್ಲಿ ಬದುಕು ನಿರ್ವಹಿಸುತ್ತಲೇ ಕನ್ನಡಕ್ಕೆ ಸೇವೆ ಸಲ್ಲಿಸುತ್ತಿರುವ ಕನ್ನಡಿಗರ ಬಗ್ಗೆ ವಿಶೇಷ ಮೆಚ್ಚುಗೆ ವ್ಯಕ್ತಪಡಿಸಿದ ಸಚಿವರು, “ಈ ಹಿಂದೆ ಛತ್ತೀಸ್‌ಗಢದ ಬಿಲಾಯಿ ಉಕ್ಕು ಕಾರ್ಖಾನೆಗೆ ಭೇಟಿ ನೀಡಿದಾಗಲೂ ಅಲ್ಲಿನ ಕನ್ನಡ ಸಂಘದ ಸದಸ್ಯರನ್ನು ಭೇಟಿಯಾಗಿದ್ದೆ. ಕನ್ನಡಿಗರು ಕರ್ನಾಟಕ ಬಿಟ್ಟು ಎಲ್ಲೂ ಹೋಗುವುದಿಲ್ಲ ಎಂಬ ನನ್ನ ಹಳೆಯ ನಂಬಿಕೆ ಇಂದು ಬದಲಾಗಿದೆ. ದೇಶ-ವಿದೇಶದ ಮೂಲೆ ಮೂಲೆಯಲ್ಲೂ ಕನ್ನಡಿಗರು ನೆಲೆಸಿ ತಾಯಿಭಾಷೆಯ ಸೇವೆ ಮಾಡುತ್ತಿದ್ದಾರೆ” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಗುಜರಾತ್ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಜಸ್ಟೀಸ್ ಎನ್.ಎಸ್. ಸಂಜಯ್ ಗೌಡ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಸಂಘದ ಅಧ್ಯಕ್ಷ ಎಚ್.ವಿ. ಬೆಣ್ಣೂರ, ಪ್ರಧಾನ ಕಾರ್ಯದರ್ಶಿ ಸುಮನಲಾಲ್ ಕೊಡಿಯಾಲ್ ಬೇಲ್, ಗಾಂಧೀನಗರ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಕಮಲೀಶ ಜೋಶಿ ಮುಂತಾದವರು ಉಪಸ್ಥಿತರಿದ್ದರು.












