ಅಕ್ಟೋಬರ್ 22 ರಿಂದ ಬೃಹತ್ ಇ-ಖಾತಾ ಜಾಗೃತಿ ಅಭಿಯಾನ
3,700 ಬೀದಿ ಬದಿ ವ್ಯಾಪಾರಿಗಳಿಗೆ ತಳ್ಳುವ ಗಾಡಿ ವಿತರಣೆ
ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ವಾರ್ಡ್‌ಗಳ ಮರುವಿಂಗಡಣೆ ಆಯೋಗವು ಆಗಸ್ಟ್ 3 ರಿಂದ ಕಾರ್ಯಾರಂಭ ಮಾಡಲಿದ್ದು, ವಾರ್ಡ್‌ಗಳ ಮರುರಚನೆ ಮತ್ತು ಗಡಿಗಳ ಗುರುತಿಸುವಿಕೆ ಕಾರ್ಯ ಆರಂಭಿಸಲಿದೆ ಎಂದು ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಮಂಗಳವಾರ ಜಿಬಿಎ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಈ ಆಯೋಗವು ತಾತ್ಕಾಲಿಕ ವಾರ್ಡ್‌ಗಳ ಗುರುತಿಸುವಿಕೆ, ಗಡಿಗಳ ನಿರ್ಧಾರ, ತಕರಾರು ಅರ್ಜಿಗಳ ಸ್ವೀಕಾರ ಸೇರಿದಂತೆ ಎಲ್ಲಾ ಕೆಲಸಗಳನ್ನು ಸೆಪ್ಟೆಂಬರ್ 1 ರವರೆಗೆ ಪೂರ್ಣಗೊಳಿಸಲಿದೆ. ಇದಾದ ಬಳಿಕ ಮೀಸಲಾತಿ ಪ್ರಕ್ರಿಯೆಯನ್ನು ಕೈಗೊಂಡು ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು. ಈ ಪ್ರಕ್ರಿಯೆ ಮುಗಿದ ತಕ್ಷಣ ಚುನಾವಣೆಗೆ ಸಿದ್ಧತೆ ಆರಂಭಿಸಿ, ವೇಳಾಪಟ್ಟಿಯನ್ನು ಪ್ರಕಟಿಸಿ ಸಾರ್ವಜನಿಕರಿಗೆ ಮಾಹಿತಿ ನೀಡುತ್ತೇವೆ” ಎಂದರು.
ಅಕ್ಟೋಬರ್ 22 ರಿಂದ ಇ-ಖಾತಾ ಜಾಗೃತಿ ಅಭಿಯಾನ
“ಬೆಂಗಳೂರಿನಲ್ಲಿ 24 ಲಕ್ಷ ‘ಎ’ ಮತ್ತು ‘ಬಿ’ ಖಾತೆಗಳಿದ್ದು, ಈಗಾಗಲೇ 6.5 ಲಕ್ಷ ಇ-ಖಾತೆಗಳನ್ನು ಜನರು ಪಡೆದಿದ್ದಾರೆ. ಆನ್‌ಲೈನ್‌ನಲ್ಲಿ ಆಸ್ತಿ ವಿವರಗಳು ನಿಖರವಾಗಿ ದೊರೆಯಬೇಕು ಎಂಬ ಉದ್ದೇಶದಿಂದ ಅಕ್ಟೋಬರ್ 22 ರಿಂದ ನವೆಂಬರ್ 1 ರವರೆಗೆ ಬೃಹತ್ ಇ-ಖಾತಾ ಜಾಗೃತಿ ಅಭಿಯಾನ ನಡೆಸಲು ತೀರ್ಮಾನಿಸಲಾಗಿದೆ” ಎಂದು ಡಿಸಿಎಂ ತಿಳಿಸಿದರು.
“ಈ ಅಭಿಯಾನದ ಯಶಸ್ಸಿಗಾಗಿ ಶಿಕ್ಷಕರು, ಬೆಸ್ಕಾಂ ಬಿಲ್ ಕಲೆಕ್ಟರ್‌ಗಳು, ಪಾಲಿಕೆ ಸಿಬ್ಬಂದಿಯ ಸಹಕಾರ ಕೋರಲಾಗಿದೆ. ಮನೆ ಮನೆಗೆ ತೆರಳಿ ಜಾಗೃತಿ ಮೂಡಿಸಲಾಗುವುದು. ಸಾರ್ವಜನಿಕರು ಮತ್ತು ರಾಜಕೀಯ ಪಕ್ಷಗಳ ಕಾರ್ಯಕರ್ತರು ಈ ಅಭಿಯಾನದಲ್ಲಿ ಭಾಗವಹಿಸಬಹುದಾದರೂ, ಜವಾಬ್ದಾರಿಯನ್ನು ನೀಡಲಾಗುವುದಿಲ್ಲ” ಎಂದರು.
ಜೊತೆಗೆ, “ಆಗಸ್ಟ್ 15 ರಿಂದ ‘ಬಿ’ ಖಾತೆಯಿಂದ ‘ಎ’ ಖಾತೆಗೆ ಮಾರ್ಪಾಡು ಮಾಡಲು ಅಗತ್ಯವಿರುವ ಮಾನದಂಡಗಳನ್ನು ಬಿಡುಗಡೆ ಮಾಡಲಾಗುವುದು. ಅರ್ಜಿ ಸಲ್ಲಿಸಲು ಅರ್ಹತೆ ಮತ್ತು ಪ್ರಕ್ರಿಯೆಯ ವಿವರಗಳನ್ನು ಒದಗಿಸಲಾಗುವುದು” ಎಂದು ತಿಳಿಸಿದರು.
ಹೆಬ್ಬಾಳ ಜಂಕ್ಷನ್ ಉದ್ಘಾಟನೆ
“ಹೆಬ್ಬಾಳ ಮೇಲ್ಸೆತುವೆ ಜಂಕ್ಷನ್, ಶಿವಾನಂದ ಸರ್ಕಲ್ ಜಂಕ್ಷನ್ ಮತ್ತು ಗಾಂಧಿಬಜಾರ್ ಬಳಿಯ ಬಹುಮಹಡಿ ಪಾರ್ಕಿಂಗ್ ಕಟ್ಟಡವನ್ನು ಆಗಸ್ಟ್ 15 ರೊಳಗೆ ಉದ್ಘಾಟಿಸಲು ಯೋಜಿಸಲಾಗಿದೆ. ಕೆ.ಆರ್. ಪುರಂ ಕಡೆಯಿಂದ ಬರುವ ಹೆಬ್ಬಾಳ ಮೇಲ್ಸೆತುವೆ ಕಾಮಗಾರಿಯನ್ನು ಶೀಘ್ರವಾಗಿ ಪೂರ್ಣಗೊಳಿಸಿ ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಲಾಗುವುದು” ಎಂದರು.
3,700 ಬೀದಿ ಬದಿ ವ್ಯಾಪಾರಿಗಳಿಗೆ ತಳ್ಳುವ ಗಾಡಿ
“ವಿವಿಧ ಯೋಜನೆಗಳಡಿ ಆಯ್ಕೆಯಾದ 10-15 ಸಾವಿರ ಫಲಾನುಭವಿಗಳಿಗೆ ಸೌಲಭ್ಯ ವಿತರಿಸಲಾಗುವುದು. 3,700 ಬೀದಿ ಬದಿ ವ್ಯಾಪಾರಿಗಳಿಗೆ ತಳ್ಳುವ ಗಾಡಿಗಳನ್ನು ವಿತರಿಸಲಾಗುತ್ತಿದೆ” ಎಂದು ಡಿಸಿಎಂ ತಿಳಿಸಿದರು.
ಪ್ರಶ್ನೋತ್ತರ
ಜಿಬಿಎಗೆ ಬಿಜೆಪಿಯ ವಿರೋಧದ ಬಗ್ಗೆ ಕೇಳಿದಾಗ, “ವಿಧಾನ ಪರಿಷತ್ತಿನಲ್ಲಿ ಒಪ್ಪಿಗೆ ನೀಡಿರುವ ಬಿಜೆಪಿ, ಸದನದಿಂದ ಹೊರನಡೆದರೆ ಒಪ್ಪಿಕೊಂಡಂತೆ. ರಾಜಕೀಯವಾಗಿ ದನಿ ಎತ್ತದಿದ್ದರೆ ತಪ್ಪಾಗುತ್ತದೆ ಎಂದು ಈ ರೀತಿ ಮಾಡುತ್ತಿದ್ದಾರೆ” ಎಂದರು.
ಸಿಎಂ, ಡಿಸಿಎಂ ದೆಹಲಿಗೆ ಆಗಾಗ ಹೋಗುವ ಬಗ್ಗೆ ಬಿಜೆಪಿ ಶಾಸಕ ವಿಜಯೇಂದ್ರ ಟೀಕಿಸಿದ್ದಕ್ಕೆ, “ನಾವು ರಾಯಭಾರಿಗಳ ಭೇಟಿಗೆ ಜುಲೈ 31 ರಂದು ದೆಹಲಿಗೆ ತೆರಳುತ್ತಿದ್ದೇವೆ. ಆಗಸ್ಟ್ 2 ರಂದು ಸಂವಿಧಾನ ರಕ್ಷಣೆ ಕುರಿತ ಕಾರ್ಯಕ್ರಮದಲ್ಲಿ ಭಾಗವಹಿಸುತ್ತೇವೆ” ಎಂದು ಸ್ಪಷ್ಟಪಡಿಸಿದರು.
ವಿಧಾನಸೌಧವನ್ನು ದೆಹಲಿಗೆ ವರ್ಗಾಯಿಸೋಣ ಎಂಬ ವಿಜಯೇಂದ್ರ ಹೇಳಿಕೆಗೆ, “ಅಯ್ಯೋ ಪಾಪ” ಎಂದು ಕುಟುಕಿದರು.
ರಾಹುಲ್ ಗಾಂಧಿ ರಾಜ್ಯಕ್ಕೆ ಭೇಟಿ ಕುರಿತು ಕೇಳಿದಾಗ, “ಈ ಬಗ್ಗೆ ಚರ್ಚೆ ನಡೆದಿದೆ. ಮುಖ್ಯಮಂತ್ರಿಗಳೊಂದಿಗೆ ಮಾತನಾಡಿದ ಬಳಿಕ ಮಾಹಿತಿ ನೀಡುತ್ತೇನೆ” ಎಂದರು.
ನಟಿ ರಮ್ಯಾ ವಿರುದ್ಧದ ಅವಹೇಳನಕಾರಿ ಹೇಳಿಕೆಗಳ ಬಗ್ಗೆ ಕೇಳಿದಾಗ, “ನಮ್ಮ ಪಕ್ಷದವರು ಯಾರಿಗೆ ಬೆಂಬಲ ಕೊಡುತ್ತಾರೋ, ಅವರಿಗೆ ನಾವೂ ಬೆಂಬಲ ನೀಡುತ್ತೇವೆ. ಈ ಬಗ್ಗೆ ಗೃಹ ಸಚಿವರು ಹೆಚ್ಚಿನ ಮಾಹಿತಿ ನೀಡುತ್ತಾರೆ” ಎಂದರು.