ಬೆಂಗಳೂರು : ಅಮೇರಿಕಾದ ಬೋಸ್ಟನ್ ನಗರದಲ್ಲಿ ಆಗಸ್ಟ್ 4ರಿಂದ 6ರವರೆಗೆ ನಡೆಯಲಿರುವ “ಶಾಸಕಾಂಗ ಶೃಂಗಸಭೆ-2025”ರಲ್ಲಿ ಕರ್ನಾಟಕ ವಿಧಾನ ಪರ “‘ರಾಜ್ಯ ಶಾಸಕರ ರಾಷ್ಟ್ರೀಯ ಸಮಾವೇಶ” ಮತ್ತು “ರಾಷ್ಟ್ರೀಯ ಶಾಸಕರ ಸಮಾವೇಶ” ಭಾರತ ಸಂಸ್ಥೆಗಳ ಆಶ್ರಯದಲ್ಲಿ ಆಯೋಜಿತವಾಗಿದ್ದು, ಈ ಶೃಂಗಸಭೆಯಲ್ಲಿ ಭಾರತದ ಸಂಸದರು, ವಿವಿಧ ರಾಜ್ಯಗಳ ವಿಧಾನಸಭೆ ಮತ್ತು ವಿಧಾನ ಪರಿಷತ್ ಸದಸ್ಯರು, ಸಚಿವರು, ರಾಜಕೀಯ ತಜ್ಞರು, ನೀತಿ ನಿರೂಪಕರು ಹಾಗೂ ಗಣ್ಯರು ಭಾಗವಹಿಸಲಿದ್ದಾರೆ.
ಗೋಷ್ಠಿಗಳು ಮತ್ತು ವಿಚಾರ ಸಂಕಿರಣ: ಮೂರು ದಿನಗಳ ಈ ಶೃಂಗಸಭೆಯಲ್ಲಿ ಪ್ರಜಾತಂತ್ರವನ್ನು ಗಟ್ಟಿಗೊಳಿಸುವಲ್ಲಿ ಶಾಸನ ಸಭೆಗಳ ಪಾತ್ರ, ಶಾಸನ ಸಭೆಗಳ ಪಕ್ಷಾತೀತ ನಿರ್ವಹಣೆ, ಶಾಸನ ಸಭೆಗಳಿಗೆ ಆರ್ಥಿಕ ಸ್ವಾಯತ್ತತೆ ಸೇರಿದಂತೆ ಹಲವು ವಿಷಯಗಳ ಕುರಿತು ಗೋಷ್ಠಿಗಳು, ವಿಚಾರ ಸಂಕಿರಣಗಳು ಮತ್ತು ಸಂವಾದಗಳು ಜರುಗಲಿವೆ. ಜಾಗತಿಕ ಪ್ರಸ್ತುತ ರಾಜಕೀಯ ವಿದ್ಯಮಾನಗಳು, ಯುವಕರ ಪಾತ್ರ, ಆಧುನಿಕ ತಂತ್ರಜ್ಞಾನದ ಆಧಾರಿತ ಬೆಳವಣಿಗೆಗಳ ಬಗ್ಗೆ ಚರ್ಚೆಗಳು ನಡೆಯಲಿವೆ.
ಕರ್ನಾಟಕದಿಂದ ಭಾಗವಹಿಸುವವರು: ಈ ಶೃಂಗಸಭೆಯಲ್ಲಿ ಸಭಾಪತಿ ಬಸವರಾಜ ಹೊರಟ್ಟಿಯವರೊಂದಿಗೆ ಉಪಸಭಾಪತಿ ಎಂ.ಕೆ. ಪ್ರಾಣೇಶ್, ವಿರೋಧ ಪಕ್ಷದ ನಾಯಕ ಛಲವಾದಿ ಟಿ. ನಾರಾಯಣಸ್ವಾಮಿ, ಸಭಾನಾಯಕ ಹಾಗೂ ಸಣ್ಣ ನೀರಾವರಿ ಸಚಿವ ಎನ್.ಎಸ್. ಭೋಸ್‌ರಾಜು, ವಿರೋಧ ಪಕ್ಷದ ಮುಖ್ಯ ಸಚೇತಕ ಎನ್. ರವಿಕುಮಾರ್, ಸರ್ಕಾರಿ ಮುಖ್ಯ ಸಚೇತಕ ಸಲೀಂ ಅಹ್ಮದ್, ವಿಧಾನ ಪರಿಷತ್ ಸದಸ್ಯರಾದ ಭಾರತಿ ಶೆಟ್ಟಿ, ಭಲ್ಕೀಸ್ ಬಾನು, ಹೇಮಲತಾ ನಾಯಕ್ ಮತ್ತು ಮಂಜುನಾಥ ಭಂಡಾರಿ ಭಾಗವಹಿಸಲಿದ್ದಾರೆ.
ಶೃಂಗಸಭೆಯ ಉದ್ದೇಶ: ಸುಮಾರು 15,000ಕ್ಕೂ ಹೆಚ್ಚು ಜಾಗತಿಕ ರಾಜಕೀಯ ಧುರೀಣರು ಮತ್ತು ನೀತಿ ನಿರೂಪಕರು ಭಾಗವಹಿಸಲಿರುವ ಈ ಶೃಂಗಸಭೆಯಲ್ಲಿ ಕರ್ನಾಟಕದ ತಂಡವು ಪ್ರಸ್ತುತ ರಾಜಕೀಯ ಬೆಳವಣಿಗೆಗಳು ಮತ್ತು ರಾಜ್ಯದ ಅಭಿವೃದ್ಧಿಯಲ್ಲಿ ಶಾಸಕಾಂಗದ ಪಾತ್ರದ ಕುರಿತು ಚರ್ಚೆಗಳಲ್ಲಿ ಸಕ್ರಿಯವಾಗಿ ತೊಡಗಲಿದೆ. ಈ ಶೃಂಗಸಭೆಯ ಚರ್ಚೆಗಳು ಮತ್ತು ವಿಚಾರ ಮಂಥನಗಳಿಂದ ಕರ್ನಾಟಕ ವಿಧಾನ ಪರಿಷತ್‌ನ ಅಧಿವೇಶನಗಳಲ್ಲಿ ಧನಾತ್ಮಕ ಬದಲಾವಣೆಗಳನ್ನು ತರುವ ನಿರೀಕ್ಷೆಯಿದೆ ಎಂದು ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದ್ದಾರೆ.
ಕರ್ನಾಟಕಕ್ಕೆ ಲಾಭ: ಈ ಶೃಂಗಸಭೆಯಿಂದ ಪಡೆದ ಜ್ಞಾನ ಮತ್ತು ಅನುಭವವನ್ನು ಕರ್ನಾಟಕದ ಶಾಸನ ಸಭೆಗಳಲ್ಲಿ ಅಳವಡಿಸಿಕೊಳ್ಳುವ ಮೂಲಕ ರಾಜ್ಯದ ಆಡಳಿತ ಮತ್ತು ಅಭಿವೃದ್ಧಿಯಲ್ಲಿ ಗುಣಮಟ್ಟದ ಸುಧಾರಣೆಯನ್ನು ತರುವ ಗುರಿಯನ್ನು ಕರ್ನಾಟಕದ ತಂಡ ಹೊಂದಿದೆ.