ಬೆಂಗಳೂರು: ಆನ್‌ಲೈನ್ ಮೂಲಕ ಮನೆಕೆಲಸದವರನ್ನು ಹುಡುಕುವಾಗ ವಂಚನೆಗೆ ಒಳಗಾಗಿರುವ ಘಟನೆಯೊಂದು ಕುಂಬಳಗೋಡು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಸುಲೇಖಾ ಆಪ್ ಮೂಲಕ ಮನೆಕೆಲಸದವರನ್ನು ಹುಡುಕಿದ್ದ ರಶ್ಮಿ ಮತ್ತು ಅನೂಪ್ ದಂಪತಿಯಿಂದ 30 ಸಾವಿರ ರೂಪಾಯಿ ವಂಚನೆಗೊಳಗಾಗಿದ್ದಾರೆ ಎಂದು ದೂರಲಾಗಿದೆ.
ರಶ್ಮಿ, ಸೇಲ್ಸ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ಅವರ ಪತಿ ಅನೂಪ್ ಖಾಸಗಿ ಕಾಲೇಜಿನಲ್ಲಿ ಪ್ರೊಫೆಸರ್ ಆಗಿದ್ದಾರೆ. ಈ ದಂಪತಿಗೆ ಒಂದೂವರೆ ವರ್ಷದ ಮಗುವಿದ್ದು, ಮಗುವನ್ನು ನೋಡಿಕೊಳ್ಳಲು ಆನ್‌ಲೈನ್‌ನಲ್ಲಿ ಮನೆಕೆಲಸದವರನ್ನು ಹುಡುಕಿದ್ದರು. ಈ ವೇಳೆ ಸಮೀಕ್ಷ ಮೇಡ್ ಸರ್ವೀಸ್ ಆಪ್‌ನಲ್ಲಿ ಸಚಿನ್ ಎಂಬಾತನ ಜೊತೆ ಸಂಪರ್ಕವಾಗಿತ್ತು. ಸಚಿನ್, ಬಿಮಲಾ ಎಂಬ ಯುವತಿಯ ಪ್ರೊಫೈಲ್ ಅನ್ನು ರಶ್ಮಿಯವರ ಮೊಬೈಲ್‌ಗೆ ಕಳುಹಿಸಿದ್ದ. ಪ್ರೊಫೈಲ್‌ಗೆ ಒಪ್ಪಿಗೆ ನೀಡಿದ ರಶ್ಮಿ ಮತ್ತು ಅನೂಪ್, ತಿಂಗಳಿಗೆ 16,000 ರೂ. ಸಂಬಳದ ಆಧಾರದ ಮೇಲೆ ಒಟ್ಟು 30,000 ರೂ. ಮುಂಗಡವಾಗಿ ಪಾವತಿಸಲು ಸಚಿನ್ ಕೇಳಿಕೊಂಡಿದ್ದ.
ಬಿಮಲಾ ಎಂಬ ಯುವತಿ ದಂಪತಿಯ ಅಪಾರ್ಟ್‌ಮೆಂಟ್‌ಗೆ ಕೆಲಸಕ್ಕೆ ಬಂದಿದ್ದಾಳೆ. ಕೆಲಸದಾಕೆ ಬಂದಿದ್ದಾಳೆ ಎಂದು ಭಾವಿಸಿ, ರಶ್ಮಿ ಆನ್‌ಲೈನ್ ಮೂಲಕ ಎರಡು ತಿಂಗಳ ಸಂಬಳವನ್ನು ಮುಂಗಡವಾಗಿ ಪಾವತಿಸಿದ್ದಾರೆ. ಆದರೆ, ಸಂಬಳ ಪಾವತಿಯಾದ ಕೆಲವೇ ನಿಮಿಷಗಳಲ್ಲಿ ಕೆಲಸಕ್ಕೆ ಬಂದಿದ್ದ ಯುವತಿ ಮಾಯವಾಗಿದ್ದಾಳೆ. ಈ ಘಟನೆಯ ಸಂದರ್ಭದಲ್ಲಿ ರಶ್ಮಿ ಮನೆಯಲ್ಲಿ ತಮ್ಮ ಮಗುವಿನ ಜೊತೆ ಒಬ್ಬರೇ ಇದ್ದರು.
“ಹಣ ಹೋದರೆ ಹೋಗಲಿ, ಒಂದು ವೇಳೆ ಮನೆಯಲ್ಲಿ ಕಳ್ಳತನವಾಗಿದ್ದರೆ ಅಥವಾ ಮಗುವನ್ನು ಎತ್ತಿಕೊಂಡು ಹೋಗಿದ್ದರೆ ಏನು ಗತಿಯಾಗುತ್ತಿತ್ತು?” ಎಂದು ದಂಪತಿ ಭಯದಿಂದಲೇ ಇದ್ದಾರೆ. ಈ ಘಟನೆಯ ಬಗ್ಗೆ ರಶ್ಮಿ ಕುಂಬಳಗೋಡು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಪ್ರಕರಣದ ತನಿಖೆಯನ್ನು ಆರಂಭಿಸಿದ್ದು, ಆನ್‌ಲೈನ್ ಮೂಲಕ ಕೆಲಸಗಾರರನ್ನು ಹುಡುಕುವವರು ಎಚ್ಚರಿಕೆಯಿಂದಿರಬೇಕೆಂದು ಸಲಹೆ ನೀಡಿದ್ದಾರೆ.