ಹುಬ್ಬಳ್ಳಿ,: ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಅನ್ನು ತಾಲಿಬಾನಿಗೆ ಹೋಲಿಸುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ನಾಚಿಕೆಯಾಗಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಕಿಡಿಕಾರಿದ್ದಾರೆ. ಕಾಂಗ್ರೆಸ್‌ನವರು ಟಿಪ್ಪು ಸುಲ್ತಾನನನ್ನು ಹೀರೋ ಎಂದು ಬಿಂಬಿಸಿದ್ದರು, ಈಗ ಎಸ್‌ಡಿಪಿಐ ಜೊತೆಗೆ ಸೇರಿ ರಾಜಕೀಯ ಮಾಡುತ್ತಿರುವುದು ನಿಜವಾದ ತಾಲಿಬಾನಿಗಳೊಂದಿಗೆ ಗೆಳೆತನ ಮಾಡುತ್ತಿರುವುದಕ್ಕೆ ಸಾಕ್ಷಿಯಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದ ಬೊಮ್ಮಾಯಿ, ಆರ್‌ಎಸ್‌ಎಸ್‌ಗೆ 100 ವರ್ಷ ತುಂಬಿರುವ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕೆಂಪು ಕೋಟೆಯಲ್ಲಿ ಮಾಡಿದ ಅಭಿನಂದನಾರ್ಹ ಭಾಷಣಕ್ಕೆ ಕಾಂಗ್ರೆಸ್ ತೀವ್ರವಾಗಿ ವಿರೋಧ ವ್ಯಕ್ತಪಡಿಸುತ್ತಿದೆ. “ಕಾಂಗ್ರೆಸ್‌ಗೆ ಇದರಿಂದ ಇರಿಸುಮುರಿಸು ಉಂಟಾಗಿದೆ. ಸ್ವಾತಂತ್ರ್ಯ ಹೋರಾಟದ ಸಂಪೂರ್ಣ ಶ್ರೇಯಸ್ಸನ್ನು ಕಾಂಗ್ರೆಸ್ ತನ್ನದಾಗಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಆದರೆ, ಸ್ವಾತಂತ್ರ್ಯಕ್ಕಾಗಿ ರೈತರು, ಕೂಲಿಕಾರರು, ಎಲ್ಲ ವರ್ಗದ ಜನರು ಒಗ್ಗೂಡಿ ತಮ್ಮ ಸರ್ವಸ್ವವನ್ನು ತ್ಯಾಗ ಮಾಡಿದ್ದಾರೆ. ಅನಾಮಧೇಯ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗವನ್ನು ಕಾಂಗ್ರೆಸ್‌ನವರು ತಮ್ಮದೆಂದು ತೆಗೆದುಕೊಳ್ಳಲು ಹವಣಿಸುತ್ತಿದ್ದಾರೆ,” ಎಂದು ಅವರು ಟೀಕಿಸಿದರು.
ಮಹಾತ್ಮಾ ಗಾಂಧೀಜಿ ಸ್ವಾತಂತ್ರ್ಯದ ನಂತರ ಕಾಂಗ್ರೆಸ್ ಪಕ್ಷವನ್ನು ವಿಸರ್ಜನೆ ಮಾಡಬೇಕೆಂದು ಸೂಚಿಸಿದ್ದರೂ, ಕಾಂಗ್ರೆಸ್‌ನವರು ಸ್ವಾರ್ಥ ಮತ್ತು ಅಧಿಕಾರದ ದಾಹಕ್ಕಾಗಿ ಪಕ್ಷವನ್ನು ಮುಂದುವರೆಸಿದ್ದಾರೆ ಎಂದು ಬೊಮ್ಮಾಯಿ ಆರೋಪಿಸಿದರು. “ಕಳೆದ 78 ವರ್ಷಗಳಲ್ಲಿ ಕಾಂಗ್ರೆಸ್ ಆಡಳಿತವು ದೇಶವನ್ನು ಹಿನ್ನಡೆಗೆ ಕೊಂಡೊಯ್ದಿದೆ. ಇಂದು ಕಾಂಗ್ರೆಸ್ ನಾಯಕರ ದೇಶವಿರೋಧಿ ಹೇಳಿಕೆಗಳು ಇವರು ನಿಜವಾದ ಸ್ವಾತಂತ್ರ್ಯ ಹೋರಾಟಗಾರರ ಪಕ್ಷಕ್ಕೆ ಸೇರಿದವರೇ ಎಂಬ ಸಂಶಯ ಮೂಡಿಸುತ್ತವೆ,” ಎಂದು ಅವರು ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆರ್‌ಎಸ್‌ಎಸ್ ವಿರುದ್ಧ ನೀಡುತ್ತಿರುವ ಹೇಳಿಕೆಗಳು ರಾಹುಲ್ ಗಾಂಧಿಯನ್ನು ಮೆಚ್ಚಿಸಲು ಮಾಡುವ ಪ್ರಯತ್ನ ಎಂದು ಬೊಮ್ಮಾಯಿ ಕಿಡಿಕಾರಿದರು. “ಸಿದ್ದರಾಮಯ್ಯ ಅವರು ಮೂಲ ಕಾಂಗ್ರೆಸಿಗರಲ್ಲ. ರಾಜನಿಗಿಂತ ತಾವೇ ಹೆಚ್ಚು ನಿಷ್ಠಾವಂತರು ಎಂದು ತೋರಿಸಿಕೊಳ್ಳಲು ಈ ರೀತಿಯ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಆರ್‌ಎಸ್‌ಎಸ್ ದೇಶ ಕಟ್ಟುವ ಕೆಲಸದಲ್ಲಿ ತೊಡಗಿದೆ. ಎಲ್ಲ ಭಾರತೀಯರು ಒಗ್ಗಟ್ಟಾಗಿ ಈ ಕಾರ್ಯದಲ್ಲಿ ಭಾಗಿಯಾಗಬೇಕು,” ಎಂದು ಅವರು ಕರೆ ನೀಡಿದರು.