ಒಂದು ವಾರದೊಳಗೆ ಭೂಸ್ವಾಧೀನ ಪರಿಹಾರ ಮೊತ್ತ ಘೋಷಣೆ
ವಿಜಯಪುರ: ಆಲಮಟ್ಟಿ ಅಣೆಕಟ್ಟಿನ ಎತ್ತರವನ್ನು 518 ಮೀಟರ್‌ನಿಂದ 524 ಮೀಟರ್‌ಗೆ ಏರಿಸುವ ಬಗ್ಗೆ ರಾಜ್ಯ ಸರ್ಕಾರಕ್ಕೆ ಸಂಪೂರ್ಣ ಬದ್ಧತೆ ಇದೆ ಎಂದು ಉಪಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಮುಂದಿನ ಒಂದು ವಾರದೊಳಗೆ ಭೂಸ್ವಾಧೀನಕ್ಕೆ ನಿಗದಿಪಡಿಸಿರುವ ಪರಿಹಾರ ಮೊತ್ತವನ್ನು ಘೋಷಿಸಲಾಗುವುದು ಎಂದು ಅವರು ಘೋಷಿಸಿದರು.
ಶನಿವಾರ ಆಲಮಟ್ಟಿ ಅಣೆಕಟ್ಟಿನಲ್ಲಿ ಕೃಷ್ಣಾ ನದಿಗೆ ಬಾಗಿನ ಅರ್ಪಣೆ ಸಮಾರಂಭದ ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶಿವಕುಮಾರ್, “ಮುಖ್ಯಮಂತ್ರಿಗಳು, ಯೋಜನೆ ವ್ಯಾಪ್ತಿಯ ಜನಪ್ರತಿನಿಧಿಗಳ ಜೊತೆ ಸಭೆ ನಡೆಸಿ ಭೂಸ್ವಾಧೀನಕ್ಕೆ ಬೆಲೆ ನಿಗದಿ ತೀರ್ಮಾನಿಸಲಾಗುವುದು. ಯಾವುದೇ ಮೇಲ್ಮನವಿಗೆ ಅವಕಾಶವಿಲ್ಲದಂತೆ ಒಂದೇ ಹಂತದ ಒಪ್ಪಿತ ಭೂಸ್ವಾಧೀನಕ್ಕೆ ಜನಪ್ರತಿನಿಧಿಗಳು ಮತ್ತು ಮುಖಂಡರು ಒಪ್ಪಿಗೆ ನೀಡಬೇಕು. ಪುನರ್ವಸತಿಗೆ ಸಂಬಂಧಿಸಿದಂತೆ ಪ್ರತ್ಯೇಕ ತೀರ್ಮಾನ ಕೈಗೊಳ್ಳಲಾಗುವುದು. ಸಮುದ್ರಕ್ಕೆ ಹರಿಯುತ್ತಿರುವ ನೀರನ್ನು ರಾಜ್ಯದ ಜನರಿಗೆ ನೀರಾವರಿಗೆ ಬಳಸಿಕೊಳ್ಳುವುದು ನಮ್ಮ ಸಂಕಲ್ಪ. ಈ ಯೋಜನೆಯನ್ನು ಈ ಅವಧಿಯಲ್ಲೇ ಪೂರ್ಣಗೊಳಿಸಲು ಬದ್ಧರಾಗಿದ್ದೇವೆ” ಎಂದರು.
ರೈತರಿಗೆ ಉದಾರ ಪರಿಹಾರ
ಮುಳುಗಡೆ ಜಮೀನುಗಳಿಗೆ ಉದಾರ ಮನಸ್ಸಿನಿಂದ ಪರಿಹಾರ ನೀಡಬೇಕು ಎಂದು ಶಿವಕುಮಾರ್ ಒತ್ತಿಹೇಳಿದರು. “ಕಾಲುವೆಗಳು ಹಾದುಹೋಗುವ ಪ್ರದೇಶಗಳ ರೈತರಿಗೆ ಇದರಿಂದ ಅನುಕೂಲವಾಗಲಿದೆ. ಆದ್ದರಿಂದ, ‘ಇಂತಿಷ್ಟು ಪರಿಹಾರ ಬೇಕು’ ಎಂಬ ಬೇಡಿಕೆ ಇಲ್ಲ ಎಂದು ಶಾಸಕರಾದ ಯಶವಂತರಾಯ ಗೌಡ ಪಾಟೀಲ, ಶಿವಾನಂದ ಪಾಟೀಲ ಮತ್ತು ಎಂ.ಬಿ. ಪಾಟೀಲ ಅವರು ತಮ್ಮ ಸಲಹೆಗಳನ್ನು ನೀಡಿದ್ದಾರೆ” ಎಂದು ತಿಳಿಸಿದರು.
ಕೇಂದ್ರದ ಮೇಲೆ ಒತ್ತಡ, ಜನರ ಸಹಕಾರ ಅಗತ್ಯ
ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕುತ್ತಿರುವುದರಿಂದ ಯಾವುದೇ ಕ್ಷಣದಲ್ಲಿ ಅಧಿಸೂಚನೆ ಹೊರಬೀಳಬಹುದು ಎಂದ ಶಿವಕುಮಾರ್, “ಕಲಬುರ್ಗಿ, ಯಾದಗಿರಿ, ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಯ ಜನರು ಸಹಕಾರ ನೀಡಬೇಕು. ಎಲ್ಲ ಪಕ್ಷದ ಶಾಸಕರ ಜೊತೆ ಚರ್ಚಿಸಿ ಅಭಿಪ್ರಾಯ ಸಂಗ್ರಹಿಸಲಾಗಿದೆ. ಕೇಂದ್ರ ಜಲಶಕ್ತಿ ಸಚಿವರಿಗೆ ಮುಖ್ಯಮಂತ್ರಿಗಳು, ನಾನು ಮತ್ತು ಸಣ್ಣ ನೀರಾವರಿ ಸಚಿವರು ಮನವಿ ಸಲ್ಲಿಸಿದ್ದೇವೆ. ನಾನು ಐದು ಬಾರಿ ಭೇಟಿಯಾಗಿ ಪ್ರಸ್ತಾವನೆ ಸಲ್ಲಿಸಿದ್ದೇನೆ. ಪ್ರಧಾನಮಂತ್ರಿಗಳ ಗಮನಕ್ಕೂ ಈ ವಿಷಯ ತರಲಾಗಿದೆ” ಎಂದರು.
ತಾಂತ್ರಿಕ ಕಾರಣಕ್ಕೆ ಸಭೆ ಮುಂದೂಡಿಕೆ
“ಈ ವಿಷಯಕ್ಕೆ ಸಂಬಂಧಿಸಿದಂತೆ ಎರಡು ಬಾರಿ ಸಂಬಂಧಪಟ್ಟ ರಾಜ್ಯಗಳ ಸಭೆ ಕರೆಯಲಾಗಿತ್ತು. ಆದರೆ, ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರದವರು ಒಮ್ಮೆ ತಲಾ ಸಭೆಯನ್ನು ಮುಂದೂಡಿದ್ದಾರೆ. ಕೇಂದ್ರ ಜಲಶಕ್ತಿ ಸಚಿವರು, ‘ಗಾಬರಿಯಾಗಬೇಡಿ, ತಾಂತ್ರಿಕ ಕಾರಣಕ್ಕೆ ಸಭೆ ಮುಂದೂಡಲಾಗಿದೆ. ಮತ್ತೊಮ್ಮೆ ಸಭೆ ಕರೆಯುವುದಾಗಿ’ ಆಶ್ವಾಸನೆ ನೀಡಿದ್ದಾರೆ. ಮಹಾರಾಷ್ಟ್ರದವರು ಈ ಹಿಂದೆ ಯಾವುದೇ ತಕರಾರು ಇಲ್ಲ ಎಂದು ತಿಳಿಸಿದ್ದಾರೆ ಎಂದು ಎಂ.ಬಿ. ಪಾಟೀಲರು ಹೇಳಿದ್ದಾರೆ” ಎಂದು ಶಿವಕುಮಾರ್ ವಿವರಿಸಿದರು.
ರೈತರಿಗೆ ಎಚ್ಚರಿಕೆ
ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ಸುಮಾರು 20 ಸಾವಿರ ರೈತರು ನ್ಯಾಯಾಲಯದ ಮೊರೆ ಹೋಗಿದ್ದಾರೆ. “ಕೆಲವು ವಕೀಲರು ರೈತರನ್ನು ತಪ್ಪು ದಾರಿಗೆ ಎಳೆಯಲು ಪ್ರಯತ್ನಿಸುತ್ತಿದ್ದಾರೆ. ಇದರಿಂದ ಯಾರಿಗೂ ಅನುಕೂಲವಾಗದು ಎಂದು ರೈತರು ಅರಿಯಬೇಕು” ಎಂದು ಶಿವಕುಮಾರ್ ಎಚ್ಚರಿಕೆ ನೀಡಿದರು.
ಬೊಮ್ಮಾಯಿ ಸರ್ಕಾರದ ತೀರ್ಮಾನಕ್ಕೆ ರೈತರಿಂದ ಆಕ್ಷೇಪ
ಬಸವರಾಜ ಬೊಮ್ಮಾಯಿ ಸರ್ಕಾರದ ಅವಧಿಯಲ್ಲಿ ಭೂಸ್ವಾಧೀನಕ್ಕೆ ನಿಗದಿಪಡಿಸಿದ್ದ ಪರಿಹಾರ ಮೊತ್ತಕ್ಕೆ ರೈತರಿಗೆ ಅನುಕೂಲವಾಗುತ್ತಿಲ್ಲ ಎಂದು ಜನಪ್ರತಿನಿಧಿಗಳು ಒತ್ತಡ ಹಾಕಿ ತೀರ್ಮಾನವನ್ನು ನಿಲ್ಲಿಸಿದ್ದರು. ಇತ್ತೀಚೆಗೆ ಆಲಮಟ್ಟಿ ಭಾಗದ ಜನಪ್ರತಿನಿಧಿಗಳು, ಸಚಿವರು ಮತ್ತು ರೈತರ ಸಭೆ ನಡೆಸಿ, ಈ ತೀರ್ಮಾನವನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗಿದೆ ಎಂದು ಶಿವಕುಮಾರ್ ತಿಳಿಸಿದರು.
ಬಜೆಟ್‌ನಲ್ಲಿ ಘೋಷಣೆ, ಸರ್ಕಾರದ ಬದ್ಧತೆ
“ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳ ಯೋಜನೆಯನ್ನು ಬಜೆಟ್‌ನಲ್ಲಿ ಘೋಷಿಸಿ, ನಮ್ಮ ಸರ್ಕಾರ ಬದ್ಧತೆಯನ್ನು ತೋರಿದೆ. ಈ ವರ್ಷ 100 ಟಿಎಂಸಿಗಿಂತ ಹೆಚ್ಚು, ಕೆಲವೊಮ್ಮೆ 400 ಟಿಎಂಸಿಗೂ ಅಧಿಕ ನೀರು ಸಮುದ್ರಕ್ಕೆ ಸೇರಿದ ಉದಾಹರಣೆ ಇದೆ. ವರುಣನ ಕೃಪೆಯಿಂದ ಆಲಮಟ್ಟಿ ತುಂಬಿದ್ದು, ಎಲ್ಲರಿಗೂ ಸಂತಸ ತಂದಿದೆ” ಎಂದು ಶಿವಕುಮಾರ್ ಹೇಳಿದರು.