ಬೆಂಗಳೂರು: ಆಲಮಟ್ಟಿ ಅಣೆಕಟ್ಟಿನ ಎತ್ತರ ಹೆಚ್ಚಳ ವಿಷಯದಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಪತ್ರಕ್ಕೆ ಪ್ರತಿಕ್ರಿಯೆಯಾಗಿ, ಕರ್ನಾಟಕದ ಮುಖ್ಯಮಂತ್ರಿಗಳು ಎರಡು ದಿನಗಳಲ್ಲಿ ಪತ್ರ ಬರೆಯಲಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಈ ವಿಷಯವನ್ನು ಚರ್ಚಿಸಲು ಪ್ರಧಾನಮಂತ್ರಿ ಹಾಗೂ ಕೇಂದ್ರ ಜಲಶಕ್ತಿ ಸಚಿವರ ಭೇಟಿಗೆ ಸಮಯ ಕೇಳುವುದಾಗಿ ಅವರು ಹೇಳಿದರು.
ಮಂಗಳವಾರ, ಬೆಂಗಳೂರಿನ ಸುಮ್ಮನಹಳ್ಳಿ ಮಾಗಡಿ ರಸ್ತೆಯಲ್ಲಿರುವ ನಾಡಪ್ರಭು ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರದ ಜಮೀನು ಮತ್ತು ಜೂನ್ 27ರಂದು ನಡೆಯಲಿರುವ ಕೆಂಪೇಗೌಡ ಜಯಂತಿ ಕಾರ್ಯಕ್ರಮಕ್ಕಾಗಿ ಡಾ. ಬಾಬು ಜಗಜೀವನ್ ರಾಮ್ ಸಂಶೋಧನಾ ಸಂಸ್ಥೆಯ ಸಭಾಂಗಣವನ್ನು ಡಿಸಿಎಂ ಶಿವಕುಮಾರ್ ವೀಕ್ಷಿಸಿದರು. ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಆಲಮಟ್ಟಿ ಅಣೆಕಟ್ಟು ವಿಷಯದಲ್ಲಿ ತಮ್ಮ ಅಭಿಪ್ರಾಯವನ್ನು ಈಗಾಗಲೇ ಮುಖ್ಯಮಂತ್ರಿಗಳಿಗೆ ಕಳುಹಿಸಿರುವುದಾಗಿ ತಿಳಿಸಿದರು. “ಮುಖ್ಯಮಂತ್ರಿಗಳ ಪತ್ರವನ್ನು ಎಲ್ಲಾ ಸಂಸದರಿಗೆ ಕಳುಹಿಸುತ್ತೇವೆ. ಈ ವಿಷಯದಲ್ಲಿ ಒಗ್ಗಟ್ಟಿನಿಂದ ಒತ್ತಾಯ ಮಾಡಬೇಕು,” ಎಂದು ಶಿವಕುಮಾರ್ ಒತ್ತಿ ಹೇಳಿದರು.
ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಪತ್ರದ ಬಗ್ಗೆ ಪ್ರತಿಕ್ರಿಯಿಸಿದ ಶಿವಕುಮಾರ್, “ಫಡ್ನವೀಸ್ ಬುದ್ಧಿವಂತ ನಾಯಕ. ಈ ಹಿಂದೆ ಅವರು ಈ ಯೋಜನೆಗೆ ಬೆಂಬಲ ನೀಡಿದ್ದರು. ಈಗ ಈ ಪತ್ರ ಬರೆದಿರುವುದು ಆಶ್ಚರ್ಯಕರ. ಮಳೆ ಹೆಚ್ಚಾದಾಗ ಪ್ರವಾಹ ಬಂದರೆ, ಅದನ್ನು ನಿಭಾಯಿಸುವುದು ಅವರ ಕರ್ತವ್ಯ,” ಎಂದು ಟೀಕಿಸಿದರು.
ಕೆಂಪೇಗೌಡ ಜಯಂತಿ ಆಚರಣೆಗೆ ಸಿದ್ಧತೆ
ಕೆಂಪೇಗೌಡ ಜಯಂತಿ ಕಾರ್ಯಕ್ರಮದ ಬಗ್ಗೆ ಮಾತನಾಡಿದ ಶಿವಕುಮಾರ್, “ಈ ವರ್ಷ ಜೂನ್ 27ರಂದು ಕೆಂಪೇಗೌಡ ಜಯಂತಿಯನ್ನು ಈ ಸ್ಥಳದಲ್ಲಿ ಆಚರಿಸಲು ತೀರ್ಮಾನಿಸಿದ್ದೇವೆ. ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಜಮೀನು ನಿಗದಿಪಡಿಸಿದ್ದು, ಶಂಕುಸ್ಥಾಪನೆಯೊಂದಿಗೆ ಕಾರ್ಯಕ್ರಮ ಆಯೋಜಿಸುತ್ತೇವೆ. ಇಲ್ಲಿ ಕೆಂಪೇಗೌಡರ ಇತಿಹಾಸವನ್ನು ಸಾರುವ ವಸ್ತುಪ್ರದರ್ಶನ ಕೇಂದ್ರವನ್ನು ನಿರ್ಮಿಸಲಾಗುವುದು,” ಎಂದು ಹೇಳಿದರು.