ಕೇಂದ್ರ ಜಲಶಕ್ತಿ ಸಚಿವರಿಗೆ ಬಿಜೆಪಿ ಸಂಸದ ಬೊಮ್ಮಾಯಿ ಮನವಿ
ನವದೆಹಲಿ: ಕೃಷ್ಣಾ ಮೇಲ್ಮಂಡೆ ಯೋಜನೆಯ 2ನೇ ಹಂತದಲ್ಲಿ ಆಲಮಟ್ಟಿ ಆಣೆಕಟ್ಟೆಯ ಎತ್ತರವನ್ನು 519 ಮೀಟರ್‌ನಿಂದ 524 ಮೀಟರ್‌ಗೆ ಹೆಚ್ಚಿಸುವ ವಿಷಯದಲ್ಲಿ ಮಹಾರಾಷ್ಟ್ರ ಸರ್ಕಾರದ ಅಡ್ಡಗಾಲಿಡುವಿಕೆಯನ್ನು ಕರ್ನಾಟಕದ ಬಿಜೆಪಿ ಸಂಸದರ ನಿಯೋಗ ಖಂಡಿಸಿದೆ. ಕೃಷ್ಣಾ ನ್ಯಾಯಾಧೀಕರಣದ ಆದೇಶದಂತೆ ಡ್ಯಾಮ್ ಎತ್ತರ ಹೆಚ್ಚಿಸುವುದು ಕರ್ನಾಟಕದ ಕಾನೂನುಬದ್ಧ ಹಕ್ಕು ಎಂದು ಒತ್ತಿಹೇಳಿರುವ ನಿಯೋಗ, ಕೇಂದ್ರ ಜಲಶಕ್ತಿ ಸಚಿವ ಸಿ.ಆರ್. ಪಾಟೀಲ್ ಅವರಿಗೆ ಈ ಕುರಿತು ಮನವರಿಕೆ ಮಾಡಿದೆ.
ಕೇಂದ್ರ ಸಚಿವರ ಭೇಟಿಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ, ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ನೇತೃತ್ವದ ಸಂಸದರ ತಂಡವು ಆಲಮಟ್ಟಿ ಡ್ಯಾಮ್ ಎತ್ತರ ಹೆಚ್ಚಳಕ್ಕೆ ವಿರೋಧ ವ್ಯಕ್ತಪಡಿಸಿದ್ದಕ್ಕೆ ಪ್ರತಿಕ್ರಿಯೆಯಾಗಿ, ಕರ್ನಾಟಕದ ಬಿಜೆಪಿ ಸಂಸದರ ನಿಯೋಗವು ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ವಿ. ಸೋಮಣ್ಣ ಮತ್ತು ಸಿ.ಆರ್. ಪಾಟೀಲ್ ಅವರನ್ನು ಭೇಟಿಯಾಗಿ ಈ ವಿಷಯವನ್ನು ಚರ್ಚಿಸಿತು. “ಮಹಾರಾಷ್ಟ್ರದ ವಿರೋಧವು ದುರುದ್ದೇಶದಿಂದ ಕೂಡಿದ್ದು, ಇದು ಖಂಡನೀಯ. ಕೃಷ್ಣಾ ನ್ಯಾಯಾಧೀಕರಣ-2 ರ ಆದೇಶದಂತೆ ಆಲಮಟ್ಟಿ ಡ್ಯಾಮ್ ಎತ್ತರವನ್ನು 524 ಮೀಟರ್‌ಗೆ ಹೆಚ್ಚಿಸಲು ಅನುಮತಿ ಇದೆ. ಈ ವಿಷಯದಲ್ಲಿ ಮಹಾರಾಷ್ಟ್ರದ ಅಡ್ಡಗಾಲಿಡುವಿಕೆ ಸರಿಯಲ್ಲ,” ಎಂದು ಬೊಮ್ಮಾಯಿ ಹೇಳಿದರು.
ಕೃಷ್ಣಾ ನ್ಯಾಯಾಧೀಕರಣದ ಆದೇಶದ ಜೊತೆಗೆ, ಕೇಂದ್ರ ಹಾಗೂ ಮೂರು ರಾಜ್ಯಗಳ ಜಂಟಿ ಸಮೀಕ್ಷೆ ಮತ್ತು ಹೈಡ್ರಾಲಾಜಿಕಲ್ ಅಧ್ಯಯನವು ಡ್ಯಾಮ್ ಎತ್ತರ ಹೆಚ್ಚಿಸಿದರೆ ಮಹಾರಾಷ್ಟ್ರದ ಸಾಂಗ್ಲಿ ಮತ್ತು ಕೊಲ್ಲಾಪುರದಲ್ಲಿ ಪ್ರವಾಹದ ಭೀತಿ ಇಲ್ಲ ಎಂದು ಸ್ಪಷ್ಟಪಡಿಸಿದೆ. 2005ರಲ್ಲಿ ಸಂಭವಿಸಿದ ಪ್ರವಾಹದ ಸಂದರ್ಭದಲ್ಲಿ ಕೇಂದ್ರ ಜಲ ಆಯೋಗವೂ ಇದೇ ರೀತಿಯ ವರದಿಯನ್ನು ನೀಡಿತ್ತು. “ನ್ಯಾಯಾಧೀಕರಣದ ಆದೇಶವು ಸುಪ್ರೀಂ ಕೋರ್ಟ್‌ನ ಡಿಕ್ರಿಯಂತೆ ಬಂಧನಕಾರಿಯಾಗಿದೆ. ಆಲಮಟ್ಟಿ ಡ್ಯಾಮ್ ಎತ್ತರ ಹೆಚ್ಚಿಸುವುದು ಕರ್ನಾಟಕದ ಹಕ್ಕು. ಈ ಕುರಿತು ಕೇಂದ್ರ ಸಚಿವರಿಗೆ ಸವಿವರವಾಗಿ ಮನವರಿಕೆ ಮಾಡಿದ್ದೇವೆ,” ಎಂದು ಬೊಮ್ಮಾಯಿ ತಿಳಿಸಿದರು.
ಕೇಂದ್ರ ಸಚಿವ ಸಿ.ಆರ್. ಪಾಟೀಲ್ ಅವರು, ಈ ವಿಷಯವು ಸುಪ್ರೀಂ ಕೋರ್ಟ್‌ನಲ್ಲಿ ಗೆಜೆಟ್ ಅಧಿಸೂಚನೆಯಾಗಿ ಪರಿಗಣನೆಯಲ್ಲಿದ್ದು, ನ್ಯಾಯಾಲಯದ ಆದೇಶಕ್ಕೆ ಅನುಗುಣವಾಗಿ ಕಾನೂನುಬದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ. ಕರ್ನಾಟಕ ಸರ್ಕಾರವು ಸುಪ್ರೀಂ ಕೋರ್ಟ್‌ನಲ್ಲಿ ಈ ವಿಷಯವನ್ನು ಶೀಘ್ರವಾಗಿ ವಿಚಾರಣೆಗೆ ತರಲು ಮತ್ತು ಗೆಜೆಟ್ ಅಧಿಸೂಚನೆ ಹೊರಡಿಸಲು ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡಬೇಕು ಎಂದು ಬೊಮ್ಮಾಯಿ ಸಲಹೆ ನೀಡಿದರು.
ಅಂತಾರಾಜ್ಯ ಜಲ ವಿವಾದ ಕಾಯ್ದೆಯ ಸೆಕ್ಷನ್ 3 ರ ಪ್ರಕಾರ, ನ್ಯಾಯಾಧೀಕರಣದ ಆದೇಶವು ಸುಪ್ರೀಂ ಕೋರ್ಟ್‌ನ ಡಿಕ್ರಿಯಂತೆ ಮಾನ್ಯವಾಗಿರುತ್ತದೆ ಎಂದು ಬೊಮ್ಮಾಯಿ ಉದಾಹರಣೆಯಾಗಿ ಕಾವೇರಿ ಜಲ ವಿವಾದವನ್ನು ಉಲ್ಲೇಖಿಸಿದರು. “ಕಾವೇರಿ ವಿಷಯದಲ್ಲಿ ಸುಪ್ರೀಂ ಕೋರ್ಟ್ 10-12 ವರ್ಷಗಳ ನಂತರ ಗೆಜೆಟ್ ಅಧಿಸೂಚನೆ ಹೊರಡಿಸಿತು. ಇದೇ ರೀತಿ ಆಲಮಟ್ಟಿ ವಿಷಯದಲ್ಲೂ ಕಾನೂನು ಪ್ರಕ್ರಿಯೆಯನ್ನು ಮುಂದುವರಿಸಲಾಗುವುದು,” ಎಂದು ಅವರು ಸ್ಪಷ್ಟಪಡಿಸಿದರು.
ನಿಯೋಗದಲ್ಲಿ ಬಿಜೆಪಿ ಸಂಸದರಾದ ಗೋವಿಂದ ಕಾರಜೋಳ, ಪಿ.ಸಿ. ಗದ್ದಿಗೌಡರ, ರಮೇಶ ಜಿಗಜಿಣಗಿ ಮತ್ತು ಕೇಂದ್ರ ಜಲಶಕ್ತಿ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.