ಬೆಂಗಳೂರು: 79ನೇ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಕೇಂದ್ರ ಸರ್ಕಾರವು ಉತ್ತರ ಕರ್ನಾಟಕದ ಧಾರವಾಡದ ಇಟ್ಟಿಗಟ್ಟಿಯಲ್ಲಿ ಎಲೆಕ್ಟ್ರಾನಿಕ್ ಘಟಕಗಳಿಗಾಗಿ ವಿಶೇಷ ಆರ್ಥಿಕ ವಲಯ (SEZ) ಘೋಷಿಸಿ, ಈ ಭಾಗಕ್ಕೆ ವಿಶಿಷ್ಟ ಕೊಡುಗೆ ನೀಡಿದೆ.
ಏಕಸ್ ಇನ್ಫ್ರಾದ ಹುಬ್ಬಳ್ಳಿ ಡ್ಯೂರಬಲ್ ಗೂಡ್ಸ್ ಕ್ಲಸ್ಟರ್ ಪ್ರೈವೇಟ್ ಲಿಮಿಟೆಡ್‌ನಿಂದ ಪ್ರಸ್ತಾಪಿತವಾದ ಈ ಯೋಜನೆಯನ್ನು ಕೇಂದ್ರ ಸರ್ಕಾರವು ಅಧಿಕೃತವಾಗಿ ಗೆಜೆಟ್‌ನಲ್ಲಿ ಪ್ರಕಟಿಸಿದೆ. ಒಟ್ಟು 391 ಎಕರೆ ಭೂಮಿಯನ್ನು ಒಳಗೊಂಡಿರುವ ಈ ಕ್ಲಸ್ಟರ್‌ನಲ್ಲಿ 28 ಎಕರೆ ಭೂಮಿಯನ್ನು ಎಲೆಕ್ಟ್ರಾನಿಕ್ಸ್ SEZ ಆಗಿ ಗುರುತಿಸಲಾಗಿದೆ.
ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಉತ್ತರ ಕರ್ನಾಟಕದಲ್ಲಿ ಎಲೆಕ್ಟ್ರಾನಿಕ್ಸ್ ಉದ್ಯಮದ ಅಗತ್ಯತೆಯನ್ನು ಗಮನಿಸಿ, ಈ SEZ ಘೋಷಣೆಗೆ ಕೇಂದ್ರ ಸರ್ಕಾರದ ಗಮನ ಸೆಳೆದಿದ್ದರು. ಅವರ ಮನವಿಗೆ ಸ್ಪಂದಿಸಿದ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ವಾಣಿಜ್ಯ ಹಾಗೂ ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಅವರು ಈ ಯೋಜನೆಗೆ ಅನುಮೋದನೆ ನೀಡಿ, ಅಧಿಕೃತ ಪ್ರಕಟಣೆ ಹೊರಡಿಸಿದ್ದಾರೆ.
ಈ ವಿಶೇಷ ಆರ್ಥಿಕ ವಲಯವು ಹುಬ್ಬಳ್ಳಿ-ಧಾರವಾಡದ ಕೈಗಾರಿಕಾ ಪ್ರದೇಶದಲ್ಲಿ ಎಲೆಕ್ಟ್ರಾನಿಕ್ ಉತ್ಪನ್ನಗಳ ಉತ್ಪಾದನೆಗೆ ಉತ್ತೇಜನ ನೀಡಲಿದೆ. ಭವಿಷ್ಯದಲ್ಲಿ ಹೊಸ ಎಲೆಕ್ಟ್ರಾನಿಕ್ಸ್ ಉದ್ಯಮಗಳ ಆಗಮನದೊಂದಿಗೆ SEZ ವಿಸ್ತರಣೆಗೆ ಅವಕಾಶವಿದೆ ಎಂದು ಸಚಿವ ಜೋಶಿ ತಿಳಿಸಿದ್ದಾರೆ.
ಈ ಕ್ರಮವು ಹುಬ್ಬಳ್ಳಿಯನ್ನು ಜಾಗತಿಕ ಎಲೆಕ್ಟ್ರಾನಿಕ್ಸ್ ಉತ್ಪಾದನೆಯ ಕೇಂದ್ರವಾಗಿ ಪರಿವರ್ತಿಸಲಿದೆ. ಕೌಶಲ್ಯಪೂರ್ಣ ಕಾರ್ಮಿಕರ ತಂಡ, ತ್ವರಿತ ಕೈಗಾರಿಕಾ ಬೆಳವಣಿಗೆ, ಗುಣಮಟ್ಟದ ಉದ್ಯೋಗ ಸೃಷ್ಟಿ ಮತ್ತು ಆರ್ಥಿಕ ಪ್ರಗತಿಗೆ ಈ SEZ ರೂಪುರೇಷೆಯಾಗಲಿದೆ ಎಂದು ಜೋಶಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಧನ್ಯವಾದ ಸಲ್ಲಿಕೆ: ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಹಾಗೂ ಕರ್ನಾಟಕ ಸರ್ಕಾರದ ವಾಣಿಜ್ಯ, ಕೈಗಾರಿಕೆ ಮತ್ತು ಮೂಲಸೌಕರ್ಯ ಸಚಿವ ಎಂ.ಬಿ. ಪಾಟೀಲ್ ಅವರಿಗೆ ಸಚಿವ ಪ್ರಲ್ಹಾದ ಜೋಶಿ ಧನ್ಯವಾದ ಅರ್ಪಿಸಿದ್ದಾರೆ.