ಬೆಂಗಳೂರು: ಮನೆ ಮನೆಗೆ ಇ-ಖಾತೆಯನ್ನು ತಲುಪಿಸುವ ಗುರಿಯೊಂದಿಗೆ ಆಯೋಜಿಸಲಾದ ಇ-ಖಾತಾ ಮೇಳವು ಅತ್ಯಂತ ಅರ್ಥಪೂರ್ಣ ಕಾರ್ಯಕ್ರಮವಾಗಿದೆ ಎಂದು ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ನಗರಾಭಿವೃದ್ಧಿ ಮತ್ತು ನಗರ ಯೋಜನಾ ಸಚಿವರಾದ ಶ್ರೀ ಬಿ.ಎಸ್. ಸುರೇಶ್ (ಭೈರತಿ) ಹೇಳಿದ್ದಾರೆ.
ಹೆಬ್ಬಾಳ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಆರ್.ಟಿ.ನಗರದ ಎಚ್.ಎಮ್.ಟಿ. ಮೈದಾನದಲ್ಲಿ ಜುಲೈ 22 ಮತ್ತು 23, 2025ರಂದು ಆಯೋಜಿಸಲಾದ ಬೃಹತ್ ಇ-ಖಾತಾ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಇ-ಖಾತೆಯು ಆಸ್ತಿ ಮತ್ತು ನಿವೇಶನಗಳ ಮಾಲೀಕತ್ವಕ್ಕೆ ಸಂಬಂಧಿಸಿದ ಅಧಿಕೃತ ದಾಖಲೆಯಾಗಿದೆ ಎಂದು ತಿಳಿಸಿದರು.
ಹೆಬ್ಬಾಳ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 50,000 ಸ್ವತ್ತುಗಳ ಪೈಕಿ 13,000 ಸ್ವತ್ತುಗಳಿಗೆ ಈಗಾಗಲೇ ಅಂತಿಮ ಇ-ಖಾತೆಯನ್ನು ನೀಡಲಾಗಿದೆ. ನಾಗರಿಕರು ಈ ಮೇಳದ ಸದುಪಯೋಗವನ್ನು ಪಡೆದು, ಅಗತ್ಯ ದಾಖಲೆಗಳನ್ನು ಸಲ್ಲಿಸಿ ಸುಲಭವಾಗಿ ಇ-ಖಾತೆ ಪಡೆಯುವಂತೆ ಶಾಸಕರು ಕೋರಿದರು.
ಪೂರ್ವ ವಲಯದ ಆಯುಕ್ತೆ ಶ್ರೀಮತಿ ಸ್ನೇಹಲ್ ಆರ್. ಮಾತನಾಡಿ, ಇ-ಖಾತಾ ಮೇಳದ ಮೂಲಕ ಪೂರ್ವ ವಲಯದಲ್ಲಿ ಸುಲಭವಾಗಿ ಇ-ಖಾತೆ ವಿತರಣೆಗೆ ವ್ಯವಸ್ಥೆ ಮಾಡಲಾಗಿದೆ ಎಂದರು. ಪೂರ್ವ ವಲಯದಲ್ಲಿ ಒಟ್ಟು 3,45,858 ಸ್ವತ್ತುಗಳ ಪೈಕಿ 55,917 ಸ್ವತ್ತುಗಳಿಗೆ ಅಂತಿಮ ಇ-ಖಾತೆಯನ್ನು ಈಗಾಗಲೇ ವಿತರಿಸಲಾಗಿದೆ ಎಂದು ಅವರು ವಿವರಿಸಿದರು.
ಈ ಮೇಳದ ಸೌಲಭ್ಯವನ್ನು ಹೆಚ್ಚಿನ ಜನರಿಗೆ ಒದಗಿಸುವ ಉದ್ದೇಶದಿಂದ, ಜುಲೈ 23ರಂದೂ ಆರ್.ಟಿ.ನಗರದ ಎಚ್.ಎಮ್.ಟಿ. ಮೈದಾನದಲ್ಲಿ ಕಾರ್ಯಕ್ರಮವನ್ನು ಮುಂದುವರಿಸಲಾಗುವುದು. ಇ-ಖಾತೆ ಪಡೆಯಬೇಕಿರುವ ನಾಗರಿಕರು ಅಗತ್ಯ ದಾಖಲೆಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಇ-ಖಾತೆ ಪಡೆಯುವಂತೆ ಆಯುಕ್ತೆ ಸ್ನೇಹಲ್ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಮಾಜಿ ಉಪ ಮಹಾಪೌರರು, ಜಂಟಿ ಆಯುಕ್ತೆ ಸರೋಜ, ಉಪ ಆಯುಕ್ತ ರಾಜು, ಕಂದಾಯ ಅಧಿಕಾರಿ ಶ್ರೀನಿವಾಸ್ ಮೂರ್ತಿ, ಕಾರ್ಯಪಾಲಕ ಎಂಜಿನಿಯರ್ ಚಂದ್ರಶೇಖರ್, ಮಾಜಿ ಪಾಲಿಕೆ ಸದಸ್ಯರು, ಸ್ಥಳೀಯ ಮುಖಂಡರು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.