ಬೆಂಗಳೂರು: ನಗರದ ಅತಿ ದಟ್ಟಣೆಯ ಸಂಚಾರಿ ಕೇಂದ್ರವಾದ ಈಜೀಪುರದಲ್ಲಿ ನಿರ್ಮಾಣವಾಗುತ್ತಿರುವ 2.38 ಕಿ.ಮೀ. ಉದ್ದದ ಮೇಲ್ಸೇತುವೆ ಕಾಮಗಾರಿಗೆ ವೇಗ ನೀಡಲು ಅಗತ್ಯವಿರುವ ಜಾಗವನ್ನು ತ್ವರಿತವಾಗಿ ಭೂಸ್ವಾಧೀನಪಡಿಸಿಕೊಳ್ಳಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬೆಂ.ಘ.ತ್ಯಾ.ನಿ) ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಸೋಮವಾರ ಬೆಂ.ಘ.ತ್ಯಾ.ನಿ ಕಛೇರಿಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, “ಮೇಲ್ಸೇತುವೆಗೆ ಅಗತ್ಯವಿರುವ ಸೆಂಟ್ ಜಾನ್ಸ್ ಆಸ್ಪತ್ರೆಗೆ ಸೇರಿದ ಎರಡು ಕಡೆ ಜಾಗ, ಕೇಂದ್ರ ಸರ್ಕಾರದ ಕೇಂದ್ರೀಯ ಸದನ ಮತ್ತು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್ (IIA) ಸ್ವತ್ತುಗಳನ್ನು ತಕ್ಷಣ ಭೂಸ್ವಾಧೀನಪಡಿಸಿಕೊಳ್ಳಬೇಕು. ಸಂಬಂಧಪಟ್ಟ ಎಲ್ಲ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಸಮಸ್ಯೆಗಳನ್ನು ಕೂಡಲೇ ಬಗೆಹರಿಸಿ ಜಾಗವನ್ನು ವಶಕ್ಕೆ ಪಡೆಯಿರಿ” ಎಂದು ಆದೇಶಿಸಿದರು.
ಈಜೀಪುರ ಸಿಗ್ನಲ್ ಬಳಿ ರಸ್ತೆ ಅಗಲೀಕರಣ ಹಾಗೂ ಪಾದಚಾರಿ ಮಾರ್ಗ ನಿರ್ಮಾಣಕ್ಕಾಗಿ 230 ಚದರ ಮೀಟರ್ ಖಾಸಗಿ ಜಾಗವನ್ನು ಕಾನೂನುಬದ್ಧವಾಗಿ ತ್ವರಿತವಾಗಿ ವಶಪಡಿಸಿಕೊಳ್ಳುವಂತೆಯೂ ಅವರು ಸೂಚಿಸಿದರು.
ಸೆಂಟ್ ಜಾನ್ಸ್ ಆವರಣದಲ್ಲಿ ರೆವಿನ್ಯೂ ಮಾಸ್ಟರ್ ಪ್ಲಾನ್ (RMP) ಪ್ರಕಾರ ರಸ್ತೆಗೆ ಮೀಸಲಿಟ್ಟಿರುವ ಭಾಗವನ್ನು ಗುರುತಿಸಲು ನ್ಯಾಯಾಲಯ ಆದೇಶ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ನಗರ ಯೋಜನಾ ವಿಭಾಗ ಹಾಗೂ ಯೋಜನಾ ವಿಭಾಗದ ಅಭಿಯಂತರರು ಸ್ಥಳಕ್ಕೆ ಭೇಟಿ ನೀಡಿ ಜಂಟಿ ಪರಿಶೀಲನೆ ನಡೆಸಿ ರಸ್ತೆ ಭಾಗವನ್ನು ಗುರುತಿಸಬೇಕು ಎಂದು ಮಹೇಶ್ವರ್ ರಾವ್ ಅವರು ತಿಳಿಸಿದರು.
ಕಾಮಗಾರಿ ಪ್ರಗತಿ: 584 ಸೆಗ್ಮೆಂಟ್‌ಗಳು ಸಿದ್ಧ, 454 ಜೋಡಣೆ
ಸಭೆಯಲ್ಲಿ ಮುಖ್ಯ ಅಭಿಯಂತರ ಡಾ. ರಾಘವೇಂದ್ರ ಪ್ರಸಾದ್ ಅವರು ಕಾಮಗಾರಿಯ ಪ್ರಗತಿಯ ಬಗ್ಗೆ ವಿವರಿಸಿ, “2.38 ಕಿ.ಮೀ. ಉದ್ದದ ಮೇಲ್ಸೇತುವೆಗೆ ಒಟ್ಟು 762 ಸೆಗ್ಮೆಂಟ್‌ಗಳ ಅಗತ್ಯವಿದೆ. ಈಗಾಗಲೇ 584 ಸೆಗ್ಮೆಂಟ್‌ಗಳ ಕಾಸ್ಟಿಂಗ್ ಪೂರ್ಣಗೊಂಡಿದ್ದು, ಉಳಿದ 178 ಸೆಗ್ಮೆಂಟ್‌ಗಳ ಕೆಲಸ ತೀವ್ರಗತಿಯಲ್ಲಿ ಸಾಗುತ್ತಿದೆ. ಕಾಸ್ಟಿಂಗ್ ಆಗಿರುವ 584 ಸೆಗ್ಮೆಂಟ್‌ಗಳಲ್ಲಿ 454ನ್ನು ಈಗಾಗಲೇ ಮೇಲ್ಸೇತುವೆಯಲ್ಲಿ ಜೋಡಿಸಲಾಗಿದೆ” ಎಂದು ತಿಳಿಸಿದರು.
“ಸೆಂಟ್ ಜಾನ್ಸ್ ಸ್ವತ್ತನ್ನು ತ್ವರಿತವಾಗಿ ಭೂಸ್ವಾಧೀನಪಡಿಸಿಕೊಂಡರೆ ಕಾಮಗಾರಿಗೆ ಇನ್ನಷ್ಟು ವೇಗ ಸಿಗಲಿದ್ದು, ಯೋಜನೆಯನ್ನು ಬೇಗನೆ ಪೂರ್ಣಗೊಳಿಸಲು ಸಾಧ್ಯವಾಗುತ್ತದೆ” ಎಂದೂ ಅವರು ಹೇಳಿದರು.
ಸಭೆಯಲ್ಲಿ ದಕ್ಷಿಣ ನಗರ ಪಾಲಿಕೆ ಆಯುಕ್ತ ರಮೇಶ್ ಕೆ.ಎನ್, ಉಪಾಯುಕ್ತೆ ಗಾಯತ್ರಿ ನಾಯ್ಕ್, ಕಾನೂನು ಕೋಶ ಮುಖ್ಯಸ್ಥ ಚಂದ್ರಶೇಖರ್ ಪಾಟೀಲ್, ನಗರ ಯೋಜನಾ ವಿಭಾಗದ ಅಪರ ನಿರ್ದೇಶಕ ಗಿರೀಶ್, ಮುಖ್ಯ ಅಭಿಯಂತರ ರವಿ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.
ಈಜೀಪುರ ಮೇಲ್ಸೇತುವೆ ಪೂರ್ಣಗೊಂಡರೆ ಓಲ್ಡ್ ಏರ್‌ಪೋರ್ಟ್ ರಸ್ತೆ, 100 ಅಡಿ ರಸ್ತೆ ಮತ್ತು ಸರೈಲ್ವೆ ಸಮಾನಾಂತರ ರಸ್ತೆಯ ನಡುವಿನ ದಟ್ಟಣೆಯ ಸಂಚಾರಕ್ಕೆ ಶಾಶ್ವತ ಪರಿಹಾರ ದೊರೆಯಲಿದೆ ಎಂಬುದು ನಗರವಾಸಿಗಳ ನಿರೀಕ್ಷೆಯಾಗಿದೆ.











