ಬೆಂಗಳೂರು: ಈರುಳ್ಳಿ ಬೆಲೆ ಕುಸಿತದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಪ್ರೈಸ್ ಡೆಫಿಷಿಯನ್ಸಿ ಪ್ರೊಕ್ಯೂರ್‌ಮೆಂಟ್ ಸ್ಕೀಂ (ಪಿಡಿಪಿಎಸ್) ಅಡಿಯಲ್ಲಿ ಈರುಳ್ಳಿ ಖರೀದಿಗೆ ಪ್ರಯತ್ನ ನಡೆಸಲಾಗುವುದು ಎಂದು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್ ತಿಳಿಸಿದ್ದಾರೆ.
ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಭಾರೀ ಮಳೆಯಿಂದಾಗಿ ಕಟಾವಿಗೆ ಸಿದ್ಧವಾಗಿದ್ದ ಈರುಳ್ಳಿ ಬೆಳೆಗೆ ಅಪಾರ ಹಾನಿಯಾಗಿದೆ. ಕಳೆದ ವರ್ಷದ ಸರಾಸರಿ ಮಾರುಕಟ್ಟೆ ಬೆಲೆಗೆ ಹೋಲಿಸಿದರೆ, ಈ ವರ್ಷ ಈರುಳ್ಳಿಯ ಮಾರಾಟ ದರ ಉತ್ಪಾದನಾ ವೆಚ್ಚಕ್ಕಿಂತ ಕಡಿಮೆಯಾಗಿದೆ ಎಂದು ಅಧಿಕಾರಿಗಳ ವರದಿಯಿಂದ ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ, ಪಿಡಿಪಿಎಸ್ ಯೋಜನೆಯಡಿ ಈರುಳ್ಳಿ ಖರೀದಿಗೆ ಅನುಮತಿ ಕೋರಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುತ್ತಿದೆ ಎಂದು ಸಚಿವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ರಾಜ್ಯದಲ್ಲಿ ಮುಂಗಾರು ಮತ್ತು ಹಿಂಗಾರು ಸೇರಿ ಒಟ್ಟು 2.05 ಲಕ್ಷ ಹೆಕ್ಟೇರ್‌ನಲ್ಲಿ ಈರುಳ್ಳಿ ಬೆಳೆಯಲಾಗುತ್ತಿದ್ದು, ವಾರ್ಷಿಕ ಉತ್ಪಾದನೆ 27 ಲಕ್ಷ ಮೆಟ್ರಿಕ್ ಟನ್‌ಗಳಷ್ಟಿದೆ. ವಿಜಯಪುರ, ಚಿತ್ರದುರ್ಗ, ಬಾಗಲಕೋಟೆ, ವಿಜಯನಗರ, ಬೆಳಗಾವಿ, ಧಾರವಾಡ, ಕೊಪ್ಪಳ ಮತ್ತು ಗದಗ ಜಿಲ್ಲೆಗಳು ಈರುಳ್ಳಿ ಬೆಳೆಯ ಪ್ರಮುಖ ಕೇಂದ್ರಗಳಾಗಿವೆ.
ಅತಿಯಾದ ಮಳೆಯಿಂದ ಕಟಾವಿಗೆ ಸಿದ್ಧವಾಗಿದ್ದ ಈರುಳ್ಳಿ ಬೆಳೆ ಹಾನಿಗೊಳಗಾಗಿದ್ದು, ದಿಢೀರ್ ಬೆಲೆ ಕುಸಿತದಿಂದ ರೈತರು ತೀವ್ರ ನಷ್ಟ ಅನುಭವಿಸುತ್ತಿದ್ದಾರೆ. ಕೆಲವೆಡೆ ಜಮೀನಿನಲ್ಲೇ ಬೆಳೆ ನಾಶವಾಗಿದೆ. ಈ ಕುರಿತು ಸಂಬಂಧಿತ ಇಲಾಖೆ ಅಧಿಕಾರಿಗಳು ಸಭೆ ನಡೆಸಿ ಚರ್ಚಿಸಿದ್ದು, ಮಾರುಕಟ್ಟೆ ಮಧ್ಯಪ್ರವೇಶ ಯೋಜನೆ (ಎಂಐಎಸ್) ಅಡಿಯಲ್ಲಿ ಖರೀದಿಗೆ ತೋಟಗಾರಿಕೆ ಇಲಾಖೆ ಶಿಫಾರಸು ಮಾಡಿತ್ತು. ಆದರೆ, ಪಿಡಿಪಿಎಸ್ ಯೋಜನೆಯಡಿ ಖರೀದಿ ಹೆಚ್ಚು ಸೂಕ್ತ ಎಂಬ ಅಭಿಪ್ರಾಯ ವ್ಯಕ್ತವಾದ ಕಾರಣ, ಈ ಯೋಜನೆಯಡಿ ಅನುಮತಿ ಕೋರಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುತ್ತಿದೆ ಎಂದು ಸಚಿವ ಶಿವಾನಂದ ಪಾಟೀಲ್ ಸ್ಪಷ್ಟಪಡಿಸಿದ್ದಾರೆ.
ಈ ಕ್ರಮವು ರೈತರಿಗೆ ಆರ್ಥಿಕ ನೆರವು ಒದಗಿಸಲು ಮತ್ತು ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ಸ್ಥಿರತೆ ಕಾಪಾಡಲು ಸಹಕಾರಿಯಾಗಲಿದೆ ಎಂದು ಸರ್ಕಾರ ಭಾವಿಸಿದೆ.












