ಬೆಂಗಳೂರು: “ಉದ್ಯಮಿಗಳು ನಮ್ಮ ಸಹೋದರ, ಸಹೋದರಿಯರು. ಬೆಂಗಳೂರು ನಿಮ್ಮ ನಗರ, ಇದರ ಘನತೆಗೆ ಧಕ್ಕೆ ತಾರದಿರಿ ಎಂದು ಉದ್ಯಮಿಗಳಿಗೆ ಹೇಳಿದ್ದೇನೆ. ಟೀಕೆ ಮಾಡಿದವರನ್ನು ದೂರವಿಡಲು ಆಗದು, ಅವರ ಸಲಹೆ-ಸೂಚನೆಗಳನ್ನು ಕೇಳಬೇಕು” ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ಕಬ್ಬನ್ ಪಾರ್ಕ್‌ನಲ್ಲಿ ಭಾನುವಾರ ನಡೆದ ‘ಬೆಂಗಳೂರು ನಡಿಗೆ’ ಕಾರ್ಯಕ್ರಮದಲ್ಲಿ ನಾಗರಿಕರೊಂದಿಗಿನ ಸಂವಾದದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಉದ್ಯಮಿಗಳ ಜೊತೆಗಿನ ಭೇಟಿಯ ಬಗ್ಗೆ ಪ್ರತಿಕ್ರಿಯಿಸಿದರು. “ನೀವು ಟೀಕಿಸಿದರೆ ಬೆಂಗಳೂರಿನ ಬಗ್ಗೆ ಅಂತರರಾಷ್ಟ್ರೀಯ ಸುದ್ದಿಯಾಗುತ್ತದೆ ಎಂದು ಉದ್ಯಮಿಗಳಿಗೆ ತಿಳಿಸಿದ್ದೇನೆ. ಮೋಹನ್ ದಾಸ್ ಪೈ, ಕಿರಣ್ ಮಜುಂದಾರ್ ಷಾ ಸೇರಿದಂತೆ ಹಲವರೊಂದಿಗೆ ಚರ್ಚಿಸಿದ್ದೇವೆ. ಎಲ್ಲರೂ ಬೆಂಗಳೂರಿನ ಅಭಿವೃದ್ಧಿಗೆ ಅತ್ಯುತ್ತಮ ಸಲಹೆಗಳನ್ನು ನೀಡಿದ್ದಾರೆ. ಕಂಪನಿಗಳು ವೈಯಕ್ತಿಕವಾಗಿ ತೀರ್ಮಾನ ತೆಗೆದುಕೊಳ್ಳಬಹುದು, ಆದರೆ ಪ್ರಜಾಪ್ರಭುತ್ವ ಮತ್ತು ಅಧಿಕಾರಶಾಹಿ ವ್ಯವಸ್ಥೆಯಲ್ಲಿ ಕಾನೂನು ಚೌಕಟ್ಟಿನಲ್ಲಿ ಕೆಲಸ ಮಾಡಬೇಕು. ಹೀಗಾಗಿ, ಅವರನ್ನು ಮುಖ್ಯ ಸಲಹಾ ಸಮಿತಿಗೆ ಸೇರ್ಪಡೆಗೊಳಿಸಿದ್ದೇವೆ. ಅವರೂ ತೆರಿಗೆ ಪಾವತಿದಾರರು, ಬೆಂಗಳೂರಿನ ನಾಗರಿಕರಾಗಿ ಅವರ ಮಾತು ಕೇಳಬೇಕು” ಎಂದರು.
ರೆಡ್ ಲೈನ್ ಮೆಟ್ರೋ: ಕೇಂದ್ರ ಸಚಿವರಿಗೆ ಮನವಿ
ರೆಡ್ ಲೈನ್ ಮೆಟ್ರೋಗೆ ಕೇಂದ್ರ ಸರ್ಕಾರ ಇನ್ನೂ ಅನುಮತಿ ನೀಡಿಲ್ಲ. ಈ ಬಗ್ಗೆ ಬಿಎಮ್‌ಆರ್‌ಸಿಎಲ್‌ನ ಡಿಪಿಆರ್ ಕುರಿತು ಕೇಳಿದಾಗ, ಶಿವಕುಮಾರ್, “ಜನರ ಅನುಕೂಲಕ್ಕಾಗಿ ಮೆಟ್ರೋ ಮಾರ್ಗ ವಿಸ್ತರಣೆ ಅಗತ್ಯ. ಡಬಲ್ ಡೆಕ್ಕರ್ ಮಾಡಲು ಯೋಜನೆ ಇದೆ. ಕೇಂದ್ರ ಸಚಿವರು ಅ. 30ರಂದು ಬೆಂಗಳೂರಿಗೆ ಆಗಮಿಸಲಿದ್ದಾರೆ. ಈ ವಿಷಯದ ಬಗ್ಗೆ ಮನವಿ ಸಲ್ಲಿಸಲಾಗುವುದು. ಕೇಂದ್ರದಿಂದ ಶೇ. 12-13ರಷ್ಟು ಹಣ ಬರುತ್ತಿದೆ, ಉಳಿದದ್ದನ್ನು ನಾವೇ ಭರಿಸುತ್ತಿದ್ದೇವೆ” ಎಂದರು.
ತೇಜಸ್ವಿ ಸೂರ್ಯಗೆ ಭೇಟಿಗೆ ಸಮಯ
ತಮ್ಮ ಕೆಲಸಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗುತ್ತಿರುವ ಬಗ್ಗೆ ಕೇಳಿದಾಗ, “ಸಂಸದ ತೇಜಸ್ವಿ ಸೂರ್ಯ ಹೊರತು ಯಾರೂ ವಿರೋಧಿಸುತ್ತಿಲ್ಲ. ಟೀಕೆಗೆ ನಾನು ವಿರೋಧವಿಲ್ಲ. ಆದರೆ, ಪರ್ಯಾಯ ಮಾರ್ಗಗಳನ್ನೂ ಸೂಚಿಸಬೇಕು. ಅವರ ಸಲಹೆ ಒಳ್ಳೆಯದಿದ್ದರೆ ಪರಿಗಣಿಸುತ್ತೇವೆ. ತೇಜಸ್ವಿ ಸೂರ್ಯ ಅವರು ಸಾರ್ವಜನಿಕರ ಪರವಾಗಿ ಭೇಟಿಯಾಗುವುದಾಗಿ ಹೇಳಿದ್ದಾರೆ. ಮಂಗಳವಾರ ಭೇಟಿಗೆ ಸಮಯ ನೀಡಿದ್ದೇನೆ. ಸೂಕ್ತ ಸಲಹೆಗಳಿದ್ದರೆ ಸ್ವೀಕರಿಸುತ್ತೇವೆ” ಎಂದರು. ಒಬ್ಬ ನಾಗರಿಕ ಟನಲ್ ಯೋಜನೆಯನ್ನು ಬೆಂಬಲಿಸಿದ್ದಾರೆ ಎಂದೂ ತಿಳಿಸಿದರು.
ನೂರು ಕಾಂಗ್ರೆಸ್ ಕಚೇರಿಗಳಿಗೆ ಶಂಕುಸ್ಥಾಪನೆ
ಕಾಂಗ್ರೆಸ್‌ನ 100 ಕಚೇರಿಗಳ ಶಂಕುಸ್ಥಾಪನೆಗೆ ರಾಹುಲ್ ಗಾಂಧಿಯವರನ್ನು ಆಹ್ವಾನಿಸಿರುವ ಬಗ್ಗೆ ಕೇಳಿದಾಗ, “ಮಹಾತ್ಮ ಗಾಂಧಿಯವರು ಸ್ವಾತಂತ್ರ್ಯ ಹೋರಾಟದ ನೇತೃತ್ವ ವಹಿಸಿ, ಕಾಂಗ್ರೆಸ್ ಪಕ್ಷ 100 ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಈ ಯೋಜನೆ ಕೈಗೊಂಡಿದ್ದೇವೆ. ಕಾಂಗ್ರೆಸ್ ಕಚೇರಿಗಳು ಕಾರ್ಯಕರ್ತರಿಗೆ ದೇವಾಲಯದಂತೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಶಾಲೆ, ಕನ್ವೆನ್ಷನ್ ಸೆಂಟರ್‌ಗಳು, ವಿಶ್ವವಿದ್ಯಾಲಯಗಳನ್ನು ನಿರ್ಮಿಸಿದ್ದಾರೆ. ಇದೀಗ ರಾಜ್ಯದಾದ್ಯಂತ 100 ಕಾಂಗ್ರೆಸ್ ಕಚೇರಿಗಳನ್ನು ನಿರ್ಮಿಸಲಾಗುತ್ತಿದೆ. ರಾಹುಲ್ ಗಾಂಧಿಯವರು ಶಂಕುಸ್ಥಾಪನೆಗೆ ಬರಲಿದ್ದಾರೆ. ಬಿಹಾರ ಚುನಾವಣೆಯ ನಂತರ ದಿನಾಂಕ ಘೋಷಣೆಯಾಗಲಿದೆ” ಎಂದರು.
ಅಕ್ರಮ ಬ್ಯಾನರ್ ತೆರವು
ಅಕ್ರಮ ಬ್ಯಾನರ್‌ಗಳ ಬಗ್ಗೆ ಕೇಳಿದಾಗ, “ಯಾರೇ ಬ್ಯಾನರ್‌ಗಳನ್ನು ಅಳವಡಿಸಿದರೂ ತೆರವುಗೊಳಿಸುತ್ತೇವೆ. ಸರ್ಕಾರಿ ಕಾರ್ಯಕ್ರಮವಾದ್ದರಿಂದ ಜನರಿಗೆ ತಿಳಿಯಲಿ ಎಂದು ಕೆಲವು ಫ್ಲೆಕ್ಸ್‌ಗಳನ್ನು ಅಳವಡಿಸಿದ್ದೇವೆ. ಆದರೆ, ಅಕ್ರಮ ಬ್ಯಾನರ್‌ಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಶಾಸಕ ರಿಜ್ವಾನ್, ಹ್ಯಾರೀಸ್ ಯಾರೇ ಇರಲಿ, ಕೇಸ್ ದಾಖಲಿಸಲಾಗುವುದು” ಎಂದರು.
ಬೆಂಗಳೂರು ನಡಿಗೆ ವಿಸ್ತರಣೆ
“ನಗರದ ದೊಡ್ಡ ಉದ್ಯಾನಗಳಲ್ಲಿ ‘ಬೆಂಗಳೂರು ನಡಿಗೆ’ ಕಾರ್ಯಕ್ರಮವನ್ನು ವಿಸ್ತರಿಸಲಾಗುವುದು. ನಾನು ಬೆಂಗಳೂರಿನಲ್ಲಿದ್ದಾಗ ಪ್ರತಿ ಶನಿವಾರ-ಭಾನುವಾರ ಈ ಕಾರ್ಯಕ್ರಮ ನಡೆಯಲಿದೆ. ಸರ್ಕಾರವನ್ನು ಜನರ ಬಳಿಗೆ ಕೊಂಡೊಯ್ಯುವ ಕೆಲಸ ಮಾಡುತ್ತಿದ್ದೇವೆ” ಎಂದು ತಿಳಿಸಿದರು.
ಕುಮಾರಸ್ವಾಮಿಗೆ ತಿರುಗೇಟು
ಕಾಂಗ್ರೆಸ್ ಸರ್ಕಾರ ಖಾತೆ ಹೆಸರಿನಲ್ಲಿ ಲೂಟಿ ಮಾಡುತ್ತಿದೆ ಎಂಬ ಕುಮಾರಸ್ವಾಮಿಯವರ ಆರೋಪಕ್ಕೆ, “ಲೂಟಿ ಮಾಡಿದ ಹಣ ಜೇಬಿನಲ್ಲಿದ್ದರೆ ಕುಮಾರಸ್ವಾಮಿ ಎತ್ತಿಕೊಂಡು ಹೋಗಲಿ” ಎಂದು ತಿರುಗೇಟು ನೀಡಿದರು. “ಎ, ಬಿ ಖಾತೆಗಳ ಬಗ್ಗೆ ಟೀಕೆ ಮಾತ್ರವಿದೆ, ಸಲಹೆ ಇಲ್ಲ. ಬಿಜೆಪಿ ಅವಧಿಯಲ್ಲಿ ಬಿ ಖಾತೆ ರೂಪಿಸಲಾಗಿತ್ತು. ಜನರು ಆಸ್ತಿ ಖರೀದಿಸಿದ್ದಾರೆ, ಆದರೆ ಬ್ಯಾಂಕ್‌ಗಳಿಂದ ಸಾಲ ಸಿಗುತ್ತಿಲ್ಲ. ಆ ಜಾಗದ ಕಟ್ಟಡಗಳನ್ನು ಒಡೆಯಲು ಆಗುತ್ತದೆಯೇ? ನಾವು ಆಸ್ತಿಗಳನ್ನು ಗಟ್ಟಿಗೊಳಿಸುವ ಕೆಲಸ ಮಾಡುತ್ತಿದ್ದೇವೆ” ಎಂದರು.
ಸಚಿವ ಸಂಪುಟ ವಿಸ್ತರಣೆ
ಸಚಿವ ಸಂಪುಟ ವಿಸ್ತರಣೆ ಕುರಿತು ಕೇಳಿದಾಗ, “ಈ ಬಗ್ಗೆ ಮುಖ್ಯಮಂತ್ರಿಗಳು ಪ್ರತಿಕ್ರಿಯಿಸುತ್ತಾರೆ” ಎಂದು ತಿಳಿಸಿದರು.












