ಬೆಂಗಳೂರು: ರಾಜ್ಯ ಕಾರ್ಮಿಕರ ಸಚಿವ ಶ್ರೀ ಸಂತೋಷ್ ಲಾಡ್ ಅವರು ಇಂದು ವಿಕಾಸಸೌಧದಲ್ಲಿ ಕಾರ್ಮಿಕರ ಕ್ಷೇಮ ಮತ್ತು ಕಲ್ಯಾಣಕ್ಕೆ ಸಂಬಂಧಿಸಿದ ವಿಷಯಗಳ ಕುರಿತು ಉನ್ನತಮಟ್ಟದ ಸಭೆ ನಡೆಸಿದರು. ಈ ಸಭೆಯಲ್ಲಿ ಕಾರ್ಮಿಕರು, ಕಾರ್ಮಿಕ ಸಂಘಟನೆಗಳ ಪ್ರತಿನಿಧಿಗಳು, ಕೈಗಾರಿಕೆಗಳ ಉನ್ನತಾಧಿಕಾರಿಗಳು, ಮಾನವ ಸಂಪನ್ಮೂಲ ವ್ಯವಸ್ಥಾಪಕರು ಮತ್ತು ಉದ್ಯೋಗದಾತರು ಭಾಗವಹಿಸಿದ್ದರು.
ಸಭೆಯಲ್ಲಿ ಉದ್ಯೋಗ ಮತ್ತು ಕಾರ್ಮಿಕರ ಕ್ಷೇಮಕ್ಕೆ ಸಂಬಂಧಿಸಿದ ಅನೇಕ ಪ್ರಮುಖ ವಿಷಯಗಳನ್ನು ಚರ್ಚಿಸಲಾಗಿದೆ. ಹಾಜರಿದ್ದ ಪ್ರತಿನಿಧಿಗಳು ತಮ್ಮ ತಮ್ಮ ಕ್ಷೇತ್ರದ ಅನುಭವಗಳನ್ನು ಹಂಚಿಕೊಳ್ಳುವ ಮೂಲಕ ಕಾರ್ಮಿಕರ ಹಿತಾಸಕ್ತಿಗೆ ಅನೇಕ ಸಲಹೆಗಳನ್ನು ನೀಡಿದರು.
ಕಾರ್ಮಿಕ ಸಚಿವರಾದ ಸಂತೋಷ್ ಲಾಡ್ ಅವರು, ಈ ಸಲಹೆಗಳನ್ನು ಗಮನದಿಂದ ಆಲಿಸಿ, ಕಾರ್ಮಿಕರ ಕಲ್ಯಾಣಕ್ಕೆ ಸರ್ಕಾರದಿಂದ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. “ನೀವು ನೀಡಿದ ಪ್ರಸ್ತಾವನೆಗಳಿಗೆ ಸರಿಯಾದ ರೀತಿಯಲ್ಲಿ ಸ್ಪಂದಿಸಲಾಗುತ್ತದೆ,” ಎಂದು ಅವರು ಹೇಳಿದರು.
ಸಭೆಯಲ್ಲಿ ಕಾರ್ಮಿಕ ಆಯುಕ್ತ ಡಾ. ಎಚ್.ಎನ್. ಗೋಪಾಲಕೃಷ್ಣ, ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಂಡಳಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭಾರತಿ, ಜಂಟಿ ಕಾರ್ಮಿಕ ಆಯುಕ್ತ ರವಿಕುಮಾರ್, ಅಪರ ಕಾರ್ಮಿಕ ಆಯುಕ್ತ ಡಾ. ಮಂಜುನಾಥ್ ಹಾಗೂ ಕಾರ್ಖಾನೆಗಳು ಮತ್ತು ಬಾಯ್ಲರ್ ಸಂಸ್ಥೆಗಳ ನಿರ್ದೇಶಕ ಶ್ರೀನಿವಾಸ್ ಅವರು ಉಪಸ್ಥಿತರಿದ್ದರು.