ದೆಹಲಿ ಶೃಂಗಸಭೆಯಲ್ಲಿ ಅಧ್ಯಕ್ಷ ಡಾ. ರಾಮ್ ಪ್ರಸಾತ್ ಮನೋಹರ್ ಪ್ರತಿಪಾದನೆ
ನವದೆಹಲಿ/ಬೆಂಗಳೂರು : ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನವನ್ನು ನಗರದ ನೀರು ಸರಬರಾಜು ಮತ್ತು ನಿರ್ವಹಣೆಯಲ್ಲಿ ಅಳವಡಿಸಿಕೊಂಡು ಬೆಂಗಳೂರು ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ (ಬಿಡಬ್ಲ್ಯುಎಸ್ಎಸ್ಬಿ) ಜಾಗತಿಕ ಮಟ್ಟದಲ್ಲಿ ಮಾದರಿಯಾಗಿ ನಿಲ್ಲುತ್ತಿದೆ ಎಂದು ಮಂಡಳಿ ಅಧ್ಯಕ್ಷ ಹಾಗೂ ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕರಾದ ಡಾ. ವಿ. ರಾಮ್ ಪ್ರಸಾತ್ ಮನೋಹರ್ (ಐಎಎಸ್) ಹೇಳಿದರು.
ನವದೆಹಲಿಯ ಭಾರತ್ ಮಂಟಪದಲ್ಲಿ ನಡೆಯುತ್ತಿರುವ ‘ಇಂಡಿಯಾ ಎಐ ಇಂಪ್ಯಾಕ್ಟ್ ಶೃಂಗಸಭೆ-2026’ರಲ್ಲಿ ಭಾಗವಹಿಸಿ ಮಾತನಾಡಿದ ಅವರು, “ಮಾಡೆಲ್ ಟೂ ಮಾಸಸ್: ಹವಾಮಾನ ವೈಪರೀತ್ಯ ಎದುರಿಸಲು ಎಐ ಬಳಕೆ” (From Models to the Masses: Deploying AI for Climate Resilience) ಎಂಬ ಸಂವಾದದಲ್ಲಿ ಬೆಂಗಳೂರು ಜಲಮಂಡಳಿಯ ಸ್ಮಾರ್ಟ್ ತಂತ್ರಜ್ಞಾನ ಆಧಾರಿತ ಪರಿವರ್ತನೆಯನ್ನು ವಿವರಿಸಿದರು.
ಪಂಪಿಂಗ್ ಸ್ಟೇಷನ್ಗಳು ಮತ್ತು ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳ (ಎಸ್ಟಿಪಿ) ನಿರ್ವಹಣೆಯಲ್ಲಿ ಅಳವಡಿಸಲಾದ ‘ಐಪಂಪ್ನೆಟ್’ (iPUMPNET) ವ್ಯವಸ್ಥೆಯ ಯಶಸ್ಸನ್ನು ಪ್ರಸ್ತಾಪಿಸಿದ ಅವರು, ಎಐ ಆಧಾರಿತ ಪಂಪ್ಗಳ ಮೂಲಕ ಕಾರ್ಯಕ್ಷಮತೆಯನ್ನು ಹೆಚ್ಚಿಸಿ ವಾರ್ಷಿಕವಾಗಿ 40 ಕೋಟಿ ರೂಪಾಯಿಗೂ ಹೆಚ್ಚು ವಿದ್ಯುತ್ ವೆಚ್ಚವನ್ನು ಉಳಿಸುತ್ತಿರುವುದನ್ನು ತಿಳಿಸಿದರು. ಇದು ಆರ್ಥಿಕ ಲಾಭದ ಜೊತೆಗೆ ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡಿ ಪರಿಸರ ಸಂರಕ್ಷಣೆಗೂ ಸಹಕಾರಿಯಾಗಿದೆ ಎಂದರು.
ನೀರು ಸೋರಿಕೆ (ನಾನ್-ರೆವೆನ್ಯೂ ವಾಟರ್ – ಎನ್ಆರ್ಡಬ್ಲ್ಯು) ಮತ್ತು ಅನಧಿಕೃತ ಸಂಪರ್ಕಗಳ ಸಮಸ್ಯೆಯನ್ನು ಪರಿಹರಿಸಲು ಎಐ ಚಾಲಿತ ರೋಬೋಟಿಕ್ಸ್ ತಂತ್ರಜ್ಞಾನವನ್ನು ಬಳಸುತ್ತಿರುವುದನ್ನು ಅವರು ಉಲ್ಲೇಖಿಸಿದರು. ಇದರಿಂದ ಸೋರಿಕೆಯಾಗುತ್ತಿದ್ದ ಅಮೂಲ್ಯ ನೀರನ್ನು ಉಳಿಸಿ ನಾಗರಿಕರಿಗೆ ಸರಿಯಾಗಿ ತಲುಪಿಸಲು ಸಾಧ್ಯವಾಗುತ್ತಿದೆ ಎಂದು ವಿವರಿಸಿದರು.
ಅಂತರ್ಜಲ ಮರುಪೂರಣ ಕಾರ್ಯಕ್ರಮಕ್ಕೆ ವೈಜ್ಞಾನಿಕ ಆಧಾರ ನೀಡಲು ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ಜೊತೆಗಿನ ಸಹಯೋಗದ ಬಗ್ಗೆಯೂ ಅವರು ಮಾಹಿತಿ ನೀಡಿದರು. ನಗರದಾದ್ಯಂತ 40 ಕೆರೆಗಳನ್ನು ಸಂಸ್ಕರಿಸಿದ ನೀರಿನಿಂದ ತುಂಬಿಸುತ್ತಿರುವುದರ ಜೊತೆಗೆ ಎಐ ಆಧಾರಿತ ಐಒಟಿ ಸೆನ್ಸಾರ್ಗಳ ಮೂಲಕ ನೈಜ ಸಮಯದಲ್ಲಿ ಅಂತರ್ಜಲ ಮಟ್ಟ ಮತ್ತು ಪರಿಸರ ಪರಿಣಾಮಗಳನ್ನು ಪರಿಶೀಲಿಸುತ್ತಿರುವುದನ್ನು ತಿಳಿಸಿದರು.

ಬೃಹತ್ ಬಳಕೆದಾರರಿಗೆ ನಿಖರ ಬಿಲ್ಗಳನ್ನು ನೀಡಲು ಎಐ ಆಧಾರಿತ ಸ್ಮಾರ್ಟ್ ವಾಟರ್ ಮೀಟರ್ಗಳ ಅಳವಡಿಕೆಯ ಪ್ರಸ್ತಾಪವಿದೆ. ಇದಲ್ಲದೆ, ನಗರದ ನೀರು ಸರಬರಾಜು ವ್ಯವಸ್ಥೆಯ ಅತ್ಯಾಧುನಿಕ ‘ಎಐ ಸಮಗ್ರ ಸ್ಕಾಡಾ ನಿರ್ವಹಣಾ ವ್ಯವಸ್ಥೆ’ಯನ್ನು (AI-Integrated Comprehensive SCADA) ಸದ್ಯದಲ್ಲೇ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಉದ್ಘಾಟಿಸಲಿದ್ದಾರೆ ಎಂದು ಅವರು ಘೋಷಿಸಿದರು.
ಈ ಕ್ರಾಂತಿಕಾರಿ ತಂತ್ರಜ್ಞಾನಗಳ ಅಳವಡಿಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ದೂರದೃಷ್ಟಿಯ ನಾಯಕತ್ವ ಮತ್ತು ರಾಜ್ಯ ಸರ್ಕಾರದ ಇಚ್ಛಾಶಕ್ತಿ ಪ್ರಮುಖ ಕಾರಣ ಎಂದು ಡಾ. ರಾಮ್ ಪ್ರಸಾತ್ ಮನೋಹರ್ ಶ್ಲಾಘಿಸಿದರು. ತಂತ್ರಜ್ಞಾನವನ್ನು ಜನಸಾಮಾನ್ಯರ ಒಳಿತಿಗಾಗಿ ಬಳಸುವ ಬದ್ಧತೆಯಿಂದ ಬೆಂಗಳೂರು ನೀರಿನ ಭದ್ರತೆಯಲ್ಲಿ ಮುಂಚೂಣಿಯಲ್ಲಿದೆ ಎಂದು ಹೇಳಿದರು.
ಶೃಂಗಸಭೆಯ ಸಂವಾದದಲ್ಲಿ ಗೂಗಲ್ ಡೀಪ್ಮೈಂಡ್, ಐಐಟಿ ದೆಹಲಿ ಮತ್ತು ಸಿಇಇಡಬ್ಲ್ಯೂ (CEEW) ಸೇರಿದಂತೆ ಜಾಗತಿಕ ತಜ್ಞರು ಭಾಗವಹಿಸಿದ್ದರು.












