ಬೆಂಗಳೂರು, ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಯೋಜನೆಯ ಶೇ. 40 ರಷ್ಟು ಕಾಮಗಾರಿ ಈಗಾಗಲೇ ಪೂರ್ಣಗೊಂಡಿದ್ದು, ಈ ಯೋಜನೆಯನ್ನು ನಿಲ್ಲಿಸುವ ಯಾವುದೇ ಪ್ರಶ್ನೆಯೇ ಇಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸ್ಪಷ್ಟಪಡಿಸಿದ್ದಾರೆ.
ಶನಿವಾರ ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಯೋಜನೆಗೆ ಸಂಬಂಧಿಸಿದಂತೆ ಉದ್ಭವಿಸಿರುವ ವಿವಾದಗಳಿಗೆ ಉತ್ತರಿಸಿದರು. ಹೇಮಾವತಿ ಲಿಂಕ್ ಕೆನಾಲ್ ಯೋಜನೆಯನ್ನು ವಿರೋಧಿಸಿ ನಡೆಯುತ್ತಿರುವ ಬೃಹತ್ ಪ್ರತಿಭಟನೆಗಳ ಬಗ್ಗೆ ಕೇಳಿದ ಪ್ರಶ್ನೆಗೆ, “ಅಲ್ಲಿರುವವರು, ಇಲ್ಲಿರುವವರು ಎಲ್ಲರೂ ನಮ್ಮ ರೈತರೇ. ಎಲ್ಲರ ಹಿತವನ್ನು ನಾವು ಕಾಪಾಡುತ್ತೇವೆ” ಎಂದು ಭರವಸೆ ನೀಡಿದರು.
ಬಿಜೆಪಿ ಶಾಸಕ ಸುರೇಶ್ ಗೌಡ ಅವರ ಪ್ರತಿಭಟನೆ ಕುರಿತು ಮಾತನಾಡಿದ ಡಿಸಿಎಂ, “ಶಾಸಕರಾದ ಕೃಷ್ಣಪ್ಪ ಮತ್ತು ಸುರೇಶ್ ಗೌಡ ಅವರಿಗೆ ಈ ಯೋಜನೆಯ ವಿವರಗಳು ತಿಳಿದಿವೆ. ಅವರು ಈ ಬಗ್ಗೆ ಈ ಹಿಂದೆ ಮಾತನಾಡಿದ್ದಾರೆ. ಆದರೂ ಈಗ ಪ್ರತಿಭಟನೆ ಮಾಡುತ್ತಿದ್ದಾರೆ. ಇದನ್ನು ನಾನು ತಪ್ಪು ಎಂದು ಹೇಳುವುದಿಲ್ಲ. ಎಲ್ಲಾ ಶಾಸಕರಿಗೂ ಈ ವಿಷಯದ ಬಗ್ಗೆ ಮಾನಸಿಕವಾಗಿ ಅರಿವಿದೆ” ಎಂದು ತಿಳಿಸಿದರು.
ಕೇಂದ್ರ ಸಚಿವ ವಿ. ಸೋಮಣ್ಣ ಅವರು ಈ ಯೋಜನೆಗೆ ಸಂಬಂಧಿಸಿದಂತೆ ಪತ್ರ ಬರೆದಿರುವ ಬಗ್ಗೆ ಕೇಳಿದಾಗ, “ಅವರು ದೊಡ್ಡವರು, ಕೇಂದ್ರ ಸಚಿವರು. ಅವರ ಮಾರ್ಗದರ್ಶನವನ್ನು ಕೂಡ ನಾವು ಗೌರವಿಸಿ ಕೇಳುತ್ತೇವೆ” ಎಂದು ಡಿ.ಕೆ. ಶಿವಕುಮಾರ್ ಹೇಳಿದರು.
ಈ ಯೋಜನೆಯನ್ನು ಮುಂದುವರಿಸುವ ಸರ್ಕಾರದ ನಿರ್ಧಾರವು ರೈತರ ಹಿತಾಸಕ್ತಿಗಳನ್ನು ರಕ್ಷಿಸುವುದರ ಜೊತೆಗೆ ಯೋಜನೆಯ ಗುರಿಗಳನ್ನು ಸಾಧಿಸುವತ್ತ ಗಮನಹರಿಸಿದೆ ಎಂದು ಡಿಸಿಎಂ ಒತ್ತಿ ಹೇಳಿದರು.












