ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಯಕನಟನಾಗಿ ಅಭಿನಯಿಸಿರುವ ‘ದಿ ಡೆವಿಲ್’ ಚಿತ್ರ ಡಿಸೆಂಬರ್ 11ರಂದು ಬಿಡುಗಡೆಯಾಗಿ ರಾಜ್ಯಾದ್ಯಂತ ಅದ್ಭುತ ಯಶಸ್ಸು ಕಂಡಿದ್ದು, ಎರಡನೇ ವಾರಕ್ಕೆ ಕಾಲಿಟ್ಟರೂ ಅದೇ ಉತ್ಸಾಹದೊಂದಿಗೆ ಪ್ರದರ್ಶನ ಕಾಣುತ್ತಿದೆ.
ಶ್ರೀ ಜೈ ಮಾತ ಕಂಬೈನ್ಸ್ ಬ್ಯಾನರ್‌ನಲ್ಲಿ ಅದ್ದೂರಿಯಾಗಿ ನಿರ್ಮಾಣವಾದ ಈ ಚಿತ್ರವನ್ನು ಪ್ರಕಾಶ್ ವೀರ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿದ್ದಾರೆ. ಬಿಡುಗಡೆಯ ಮೊದಲ ದಿನದಿಂದಲೇ ಬೆಳಗ್ಗೆ 6:30ರ ಮೊದಲ ಶೋಗಳಿಂದ ಅಭಿಮಾನಿಗಳು ಥಿಯೇಟರ್‌ಗಳ ಮುಂದೆ ಸಾಲುಗಟ್ಟಿ ನಿಂತು ಚಿತ್ರ ವೀಕ್ಷಿಸಿ ಸಂಭ್ರಮಾಚರಣೆ ನಡೆಸಿದ್ದರು. ಅದ್ಭುತ ಆರಂಭ ಕಂಡ ಚಿತ್ರ ಗಳಿಕೆಯಲ್ಲೂ ದಾಖಲೆ ಬರೆದಿದ್ದು, ಫ್ಯಾಮಿಲಿ ಪ್ರೇಕ್ಷಕರು ಹಾಗೂ ಮಹಿಳಾ ಪ್ರೇಕ್ಷಕರು ಥಿಯೇಟರ್‌ಗಳತ್ತ ದೊಡ್ಡ ಸಂಖ್ಯೆಯಲ್ಲಿ ಆಕರ್ಷಿತರಾಗಿದ್ದಾರೆ.
ಚಿತ್ರದ ಕಥಾವಸ್ತು, ಅನಿರೀಕ್ಷಿತ ತಿರುವುಗಳು ಹಾಗೂ ದರ್ಶನ್ ಅವರ ದ್ವಿಪಾತ್ರಾಭಿನಯಕ್ಕೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ಮಹಿಳಾ ಪ್ರೇಕ್ಷಕರು ವಿಶೇಷವಾಗಿ ಚಿತ್ರಕ್ಕೆ ಉತ್ತಮ ವಿಮರ್ಶೆಗಳನ್ನು ನೀಡುತ್ತಿದ್ದಾರೆ. ಇದರ ಜೊತೆಗೆ ಚಿತ್ರದ ಟ್ರೇಲರ್ ಸಹ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡಿಂಗ್‌ನಲ್ಲಿ ಮೊದಲ ಸ್ಥಾನ ಪಡೆದು ಗಮನ ಸೆಳೆದಿದೆ.
ಕರ್ನಾಟಕದಾದ್ಯಂತ ಚಿತ್ರಕ್ಕೆ ಅಪಾರ ಮೆಚ್ಚುಗೆ ವ್ಯಕ್ತವಾಗುತ್ತಿರುವ ಬಗ್ಗೆ ನಿರ್ದೇಶಕ ಪ್ರಕಾಶ್ ವೀರ್ ಹಾಗೂ ಕಾರ್ಯಕಾರಿ ನಿರ್ಮಾಪಕಿ ತಶ್ವಿನಿ ವೀರ್ ಅವರು ಕನ್ನಡ ಚಿತ್ರಪ್ರೇಮಿಗಳಿಗೆ ತುಂಬು ಹೃದಯದ ಧನ್ಯವಾದಗಳನ್ನು ತಿಳಿಸಿದ್ದಾರೆ. ಈ ಯಶಸ್ಸು ಚಿತ್ರತಂಡಕ್ಕೆ ಹೊಸ ಉತ್ಸಾಹ ತುಂಬಿದ್ದು, ಮುಂದಿನ ದಿನಗಳಲ್ಲೂ ಚಿತ್ರದ ಓಟ ಮುಂದುವರೆಯಲಿದೆ ಎಂಬ ನಿರೀಕ್ಷೆ ಇದೆ.











