ನವದೆಹಲಿ:
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ ಪಿಎಂ ಇ-ಡ್ರೈವ್ ಯೋಜನೆಯಡಿಯಲ್ಲಿ ಎಲೆಕ್ಟ್ರಿಕ್ ಚಾರ್ಜಿಂಗ್ ಮೂಲಸೌಕರ್ಯವನ್ನು ನಿರ್ವಹಿಸಿ ವೇಗವಾಗಿ ಅನುಷ್ಠಾನಗೊಳಿಸಲು ಕೇಂದ್ರ ಬೃಹತ್ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ. ಕುಮಾರಸ್ವಾಮಿ ನೇತೃತ್ವದಲ್ಲಿ ನವದೆಹಲಿಯಲ್ಲಿರುವ ಸಚಿವಾಲಯದಲ್ಲಿ ಅಂತರ ಸಚಿವಾಲಯ ಸಮನ್ವಯ ಸಭೆ ನಡೆಯಿತು.
ಈ ಮಹತ್ವದ ಸಭೆಯಲ್ಲಿ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ, ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಹಾಗೂ ಬೃಹತ್ ಕೈಗಾರಿಕೆ ಸಚಿವಾಲಯದ ಉನ್ನತ ಅಧಿಕಾರಿಗಳು ಭಾಗವಹಿಸಿದರು.
ಪಿಎಂ ಇ-ಡ್ರೈವ್ ಯೋಜನೆಯು ಭಾರತದಲ್ಲಿ ವಾಯು ಮಾಲಿನ್ಯವನ್ನು ಕಡಿಮೆ ಮಾಡಿ, ವಿದ್ಯುತ್ ಚಾಲಿತ ವಾಹನಗಳ ಬಳಕೆಯನ್ನು ಉತ್ತೇಜಿಸುವ ಮೂಲಕ ಸಾಂಪ್ರದಾಯಿಕ ಇಂಧನಗಳ ಅವಲಂಬನೆಯನ್ನು ತಗ್ಗಿಸುವ ಗುರಿಯನ್ನು ಹೊಂದಿದೆ. ಈ ಯೋಜನೆಯನ್ನು ರಾಷ್ಟ್ರೀಯ ಮಹತ್ವದ ಯೋಜನೆ ಎಂದು ಸಚಿವರು ಪರಿಗಣಿಸಿದ್ದು, ಎಲ್ಲ ಸಂಬಂಧಿತ ಇಲಾಖೆಗಳಿಂದ ಸಮನ್ವಯಾತ್ಮಕ ಶ್ರಮ ಅಗತ್ಯವಿದೆ ಎಂದು ಅವರು ಹೇಳಿದರು.
72,000 ಚಾರ್ಜಿಂಗ್ ಕೇಂದ್ರಗಳಿಗೆ ₹2,000 ಕೋಟಿ
ಯೋಜನೆಯಡಿಯಲ್ಲಿ ₹2,000 ಕೋಟಿ ವೆಚ್ಚದಲ್ಲಿ ದೇಶಾದ್ಯಂತ 72,000 ಸಾರ್ವಜನಿಕ ಎಲೆಕ್ಟ್ರಿಕ್ ಚಾರ್ಜಿಂಗ್ ಸ್ಟೇಷನ್‌ಗಳನ್ನು ಸ್ಥಾಪಿಸುವ ಉದ್ದೇಶವಿದೆ. ರಾಷ್ಟ್ರೀಯ ಹೆದ್ದಾರಿ ಕಾರಿಡಾರ್‌ಗಳು, ಮೆಟ್ರೋ ನಗರಗಳು, ವಿಮಾನ ನಿಲ್ದಾಣಗಳು, ರೈಲ್ವೆ ನಿಲ್ದಾಣಗಳು, ಟೋಲ್ ಗೇಟ್‌ಗಳು, ಇಂಧನ ಪಂಪ್‌ಗಳು ಮತ್ತು ಕೈಗಾರಿಕಾ ಪ್ರದೇಶಗಳು ಸೇರಿದಂತೆ ಹೆಚ್ಚಿನ ವಾಹನ ಸಂಚಾರವಿರುವ ತಾಣಗಳಲ್ಲಿ ಈ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಲಾಗುವುದು.
ಭಾರತ ಸುಸ್ಥಿರ ಸಾರಿಗೆ ಕ್ಷೇತ್ರದಲ್ಲಿ ಮಾದರಿಯಾಗುತ್ತಿದೆ
ಸಾರಿಗೆ ಕ್ಷೇತ್ರದಲ್ಲಿ ಶುದ್ಧತೆ, ಕೈಗೆಟುಕುವಿಕೆ ಮತ್ತು ಸೌಲಭ್ಯವನ್ನೇ ಗುರಿಯಾಗಿಟ್ಟುಕೊಂಡ ಈ ಯೋಜನೆ, ಭಾರತವನ್ನು ಜಾಗತಿಕ ಮಟ್ಟದಲ್ಲಿ ಮಾದರಿಯಾಗಿಸುವಲ್ಲಿ ನೆರವಾಗಲಿದೆ. ಇದು ಕೇವಲ ಮೂಲಸೌಕರ್ಯ ನಿರ್ಮಾಣವಷ್ಟೇ ಅಲ್ಲದೆ, ದೇಶದ ಇಂಧನ ಭದ್ರತೆ ಹಾಗೂ ಹಸಿರು ಆರ್ಥಿಕತೆಯ ಅಭಿವೃದ್ಧಿಗೆ ಬುನಾದಿಯಾಗಲಿದೆ ಎಂದು ಕುಮಾರಸ್ವಾಮಿ ಹೇಳಿದರು.
ನೋಡೆಲ್ ಏಜೆನ್ಸಿಯಾಗಿ ಬಿಎಚ್‌ಇಎಲ್
ಈ ಯೋಜನೆಯ ಯಶಸ್ವಿ ಅನುಷ್ಠಾನಕ್ಕಾಗಿ ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್ (ಬಿಎಚ್‌ಇಎಲ್) ಅನ್ನು ನೋಡಲ್ ಏಜೆನ್ಸಿಯಾಗಿ ನೇಮಕ ಮಾಡಲಾಗಿದ್ದು, ಇವಿ ಬಳಕೆದಾರರಿಗೆ ಒಂದೇ ವೇದಿಕೆಯನ್ನು ಒದಗಿಸುವ ಡಿಜಿಟಲ್ ಸೂಪರ್ ಅಪ್ಲಿಕೇಶನ್ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಲಿದೆ.
ಈ ಅಪ್ಲಿಕೇಶನ್ ಮೂಲಕ ನೈಜ ಸಮಯದ ಸ್ಲಾಟ್ ಬುಕಿಂಗ್, ಪಾವತಿ ವ್ಯವಸ್ಥೆ, ಚಾರ್ಜರ್ ಲಭ್ಯತೆ ಮತ್ತು ಪ್ರಗತಿ ಡ್ಯಾಶ್‌ಬೋರ್ಡ್‌ಗಳ ಮಾಹಿತಿಯನ್ನು ಒದಗಿಸಲಾಗುವುದು. ವಿವಿಧ ರಾಜ್ಯಗಳು ಮತ್ತು ಸಚಿವಾಲಯಗಳೊಂದಿಗೆ ಸಮನ್ವಯ ಸಾಧಿಸಿ ಚಾರ್ಜಿಂಗ್ ಸ್ಥಾಪನೆಗೆ ಅಗತ್ಯವಿರುವ ಪ್ರಸ್ತಾವನೆಗಳನ್ನು ಬಿಎಚ್‌ಇಎಲ್ ಸಂಗ್ರಹಿಸಿ ಮೌಲ್ಯಮಾಪನ ಮಾಡಲಿದೆ.












