ಬೆಂಗಳೂರು:ಬೆಂಗಳೂರು ನಗರದಲ್ಲಿ ಎಲ್ಲೆಂದರಲ್ಲಿ ಕಸ ಎಸೆಯುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಮತ್ತು ರಸ್ತೆ ಗುಂಡಿಗಳನ್ನು ಮುಚ್ಚಲು ಗಡುವು ನಿಗದಿಪಡಿಸಲು ಸೂಚನೆ ನೀಡಲಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಜೊತೆಗೆ, ಬಿಬಿಎಂಪಿ ಆಯುಕ್ತರಿಗೆ ನಗರ ಸಂಚಾರ ವೇಳಾಪಟ್ಟಿ ಸಿದ್ಧಪಡಿಸಲು ಸೂಚಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಮಂಗಳವಾರ ನಡೆದ ಜಿಬಿಎ ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಡಿಸಿಎಂ ಶಿವಕುಮಾರ್, “ನಗರದ ರಸ್ತೆ ಬದಿಗಳು ಸೇರಿದಂತೆ ಎಲ್ಲೆಂದರಲ್ಲಿ ಕಸ ಎಸೆಯುವವರನ್ನು ಗುರುತಿಸಿ, ಅವರ ವಿರುದ್ಧ ಕಠಿಣ ಕ್ರಮಕ್ಕೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ವಾಹನಗಳಲ್ಲಿ ಕಸ ತಂದು ಎಸೆಯುವ ಪ್ರಕರಣಗಳು ನಡೆಯುತ್ತಿವೆ. ಇದನ್ನು ತಡೆಯಲು ಬೆಂಗಳೂರು ಜಿಲ್ಲಾಧಿಕಾರಿ, ಪೊಲೀಸ್ ಕಮಿಷನರ್, ಮತ್ತು ಸಂಚಾರಿ ಪೊಲೀಸರೊಂದಿಗೆ ಚರ್ಚೆ ನಡೆಸಲಾಗಿದೆ,” ಎಂದರು.
ರಸ್ತೆ ಗುಂಡಿಗಳನ್ನು ಗಡುವಿನೊಳಗೆ ಮುಚ್ಚುವಂತೆ ಆದೇಶಿಸಿರುವ ಅವರು, “ಗಡುವಿನ ವೇಳಾಪಟ್ಟಿಯನ್ನು ತಯಾರಿಸಿ ನನಗೆ ಸಲ್ಲಿಸಬೇಕು. ಸಂಚಾರಿ ಪೊಲೀಸರು ರಸ್ತೆ ಗುಂಡಿಗಳ ಬಗ್ಗೆ ಮಾಹಿತಿ ನೀಡಬೇಕು ಮತ್ತು ಸಾರ್ವಜನಿಕರ ವಿಶ್ವಾಸ ಗಳಿಸುವ ಕೆಲಸ ಮಾಡಬೇಕು,” ಎಂದು ಸೂಚಿಸಿದ್ದಾರೆ.
ಬೋಗಸ್ ಬಿಲ್‌ಗೆ ಅಧಿಕಾರಿಗಳೇ ಜವಾಬ್ದಾರ
“ಪಾಲಿಕೆ ಆಯುಕ್ತರು ಪ್ರತಿದಿನ ಬೆಳಿಗ್ಗೆ ನಗರ ಸಂಚಾರದ ಬಗ್ಗೆ ವರದಿ ನೀಡಬೇಕು. ಯಾವುದೇ ಕಾಮಗಾರಿಯನ್ನು ಕೈಗೊಂಡರೂ ಗುಣಮಟ್ಟ ಕಾಪಾಡಬೇಕು. ಬೋಗಸ್ ಬಿಲ್‌ಗಳನ್ನು ಸೃಷ್ಟಿಸಿದರೆ, ಅದಕ್ಕೆ ಅಧಿಕಾರಿಗಳೇ ಜವಾಬ್ದಾರರಾಗಿರುತ್ತಾರೆ. ಯಾವುದೇ ಇಂಜಿನಿಯರ್‌ಗಳನ್ನು ಕುರುಡಾಗಿ ನಂಬಬಾರದು ಎಂದು ತಿಳಿಸಿದ್ದೇನೆ,” ಎಂದು ಡಿಸಿಎಂ ಎಚ್ಚರಿಕೆ ನೀಡಿದರು.
ಮಾಲೂರು ಮರುಮತ ಎಣಿಕೆ ಆದೇಶಕ್ಕೆ ಆಶ್ಚರ್ಯ
ಮಾಲೂರು ವಿಧಾನಸಭಾ ಕ್ಷೇತ್ರದ ಮರುಮತ ಎಣಿಕೆ ಕುರಿತಾದ ನ್ಯಾಯಾಲಯದ ತೀರ್ಪಿನ ಬಗ್ಗೆ ಪ್ರತಿಕ್ರಿಯಿಸಿದ ಶಿವಕುಮಾರ್, “ನ್ಯಾಯಾಲಯದ ಆದೇಶ ಆಶ್ಚರ್ಯ ತಂದಿದೆ. ಆದರೆ, ಈ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ. ಮರುಮತ ಎಣಿಕೆ ನಡೆದರೂ ನಂಜೇಗೌಡ ಅವರು ಮತ್ತೆ ಗೆಲುವು ಸಾಧಿಸುವ ವಿಶ್ವಾಸವಿದೆ,” ಎಂದು ಹೇಳಿದರು.