ಬೆಂಗಳೂರು : ನಗರದ ಯಲಹಂಕದಲ್ಲಿ ಫೆಬ್ರವರಿ 10 ರಿಂದ 14 ರವರೆಗೆ ನಡೆಯಲಿರುವ ಏರೋ ಇಂಡಿಯಾ ಶೋಗೆ ಸಂಬಂಧಿಸಿದ ಎಲ್ಲಾ ವಿಪತ್ತು ನಿರ್ವಹಣಾ ಮುಂಜಾಗ್ರತಾ ಸಿದ್ಧತಾ ಕಾರ್ಯಗಳನ್ನು ತಪ್ಪದೇ ಮಾಡಿಕೊಳ್ಳಲು ಬೆಂಗಳೂರು ನಗರ ಜಿಲ್ಲಾಧಿಕಾರಿಗಳಾದ ಜಿ ಜಗದೀಶ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಇಂದು ತಮ್ಮ ಕಚೇರಿ ಸಭಾಂಗಣದಲ್ಲಿ ನಡೆದ ಏರೋ ಇಂಡಿಯಾ ಶೋನ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಆಂಬುಲೆನ್ಸ್ಗಳ ವ್ಯವಸ್ಥೆ, ಆಹಾರ ಸೌಲಭ್ಯ, ಜರ್ಮನ್ ಟೆಂಟ್, ಹೆಲಿಪ್ಯಾಡ್, ಸ್ವಚ್ಚತೆ, ನೀರಿನ ಸರಬರಾಜು, ಜನಸಂದಣಿ ನಿಯಂತ್ರಣ, ಸೇರಿದಂತೆ ತುರ್ತು ಪರಿಸ್ಥಿತಿಗಳಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಎಚ್ಚರಿಕೆಯಿಂದ ಕ್ರಮ ವಹಿಸಲು ಅಧಿಕಾರಿಗಳಿಗೆ ಅವರು ಸೂಚಿಸಿದರು.
ಏರೋ ಶೋ ನಡೆಯುವ ಸ್ಥಳದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಾಂಸದ ಅಂಗಡಿಗಳನ್ನು ಮುಚ್ಚಿಸಲು ಈಗಾಗಲೇ ಕ್ರಮ ವಹಿಸಲಾಗಿದೆಯೆ ಖಾತ್ರಿ ಪಡಿಸಿಕೊಳ್ಳಿ. ಈ ಪ್ರದೇಶಗಳಲ್ಲಿ ಘನತ್ಯಾಜ್ಯ ಬಿಸಾಡುವುದನ್ನು ತಪ್ಪಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಸಂಬಂಧಿಸಿದ ಗ್ರಾಮ ಪಂಚಾಯಿತಿಗಳು ಅಥವಾ ಸ್ಥಳೀಯ ಸಂಸ್ಥೆಗಳು ಕೂಡಲೇ ಕ್ರಮ ವಹಿಸಬೇಕು. ಏರ್ ಶೋನ ಸುತ್ತಮುತ್ತಲಿನ ಪ್ರದೇಶದ ಸಂಪೂರ್ಣ ಸ್ವಚ್ಛತೆ ಕಾಯ್ದುಕೊಂಡಲ್ಲಿ ಮಾತ್ರ ಹಕ್ಕಿಗಳಿಂದ ಆಗುವ ಅವಗಡಗಳನ್ನು ತಪ್ಪಿಸಲು ಸಾಧ್ಯ ಎಂದವರು ಅಭಿಪ್ರಾಯ ಪಟ್ಟರು.
ವಿಪತ್ತು ನಿರ್ವಹಣೆಯ ಕುರಿತು ಏರ್ ಲಿಫ್ಟ್ ಹಾಗೂ ಇತರೆ ವಿಪತ್ತುಗಳ ತುರ್ತು ಸಂದರ್ಭದಲ್ಲಿ ಕೈಗೊಳ್ಳಬೇಕಾದ ನಿರ್ವಹಣಾ ಕಾರ್ಯಗಳ ಅಣಕು ಪ್ರದರ್ಶನದಲ್ಲಿ ಪ್ರತಿಯೊಬ್ಬ ಅಧಿಕಾರಿಯು ತಪ್ಪದೇ ಭಾಗವಹಿಸಬೇಕೆಂದು ಜಿಲ್ಲಾಧಿಕಾರಿಗಳು ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾಕ್ಟರ್ ರವೀಂದ್ರನಾಥ್ ಎನ್.ಮೇಟಿ, ಬೆಂಗಳೂರು ಉತ್ತರ ಉಪವಿಭಾಗಾಧಿಕಾರಿ ಪ್ರಮೋದ್ ಪಾಟೀಲ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಉಪ ನಿರ್ದೇಶಕರಾದ ಪಲ್ಲವಿ ಹೊನ್ನಾಪುರ, ಯಲಹಂಕ ತಹಶೀಲ್ದಾರ್ ಶ್ರೇಯಶ್ ಜಿ.ಎಸ್., ಬಿಬಿಎಂಪಿ ಸಲಹೆಗಾರ ಬಸವರಾಜು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದರು.