ಬೆಂಗಳೂರು: ಕಬ್ಬನ್ ಪಾರ್ಕ್ ಮತ್ತು ಲಾಲ್‌ಬಾಗ್ ಕರ್ನಾಟಕ ಹಾಗೂ ದೇಶದ ಹೆಗ್ಗುರುತುಗಳಾಗಿವೆ. ಕಬ್ಬನ್ ಪಾರ್ಕ್‌ನ ಉನ್ನತೀಕರಣಕ್ಕೆ ಬಿಡಿಎಯಿಂದ 5 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಘೋಷಿಸಿದ್ದಾರೆ.
ಭಾನುವಾರ ಕಬ್ಬನ್ ಪಾರ್ಕ್‌ನಲ್ಲಿ ‘ಬೆಂಗಳೂರು ನಡಿಗೆ’ ಕಾರ್ಯಕ್ರಮದಡಿ ನಾಗರಿಕರೊಂದಿಗೆ ಸಂವಾದದ ವೇಳೆ ಡಿಸಿಎಂ ಮಾತನಾಡಿದರು. “ನಾಗರಿಕರ ಮನವಿಯಂತೆ ಕಬ್ಬನ್ ಪಾರ್ಕ್‌ನ ಉನ್ನತೀಕರಣಕ್ಕೆ ಹೆಚ್ಚುವರಿ ಅನುದಾನವನ್ನು ತೋಟಗಾರಿಕೆ ಇಲಾಖೆಯಿಂದ ನೀಡಲಾಗುವುದು. ಈ ಉದ್ಯಾನದ ಆವರಣದಲ್ಲಿ ಯಾವುದೇ ನಿರ್ಮಾಣ ಕೆಲಸಗಳಿಗೆ ಸರ್ಕಾರ ಅವಕಾಶ ನೀಡುವುದಿಲ್ಲ. ಉದ್ಯಾನದ ರಕ್ಷಣೆಗೆ ಏನು ಕ್ರಮಗಳು ಬೇಕೋ ಅವುಗಳನ್ನು ಕೈಗೊಳ್ಳುತ್ತೇವೆ” ಎಂದರು.
ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ: “ಕಬ್ಬನ್ ಪಾರ್ಕ್‌ನಲ್ಲಿ ಸರ್ಕಾರದ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಬಗ್ಗೆ ಚಿಂತನೆ ನಡೆಸಲಾಗುವುದು. ಈ ಉದ್ಯಾನವನ್ನು ಅತ್ಯುತ್ತಮವಾಗಿ ನಿರ್ವಹಿಸಲಾಗಿದೆ. ನಾನು ವಿದ್ಯಾರ್ಥಿ ನಾಯಕನಾಗಿದ್ದಾಗಲೂ ಇಲ್ಲಿ ಸಮಯ ಕಳೆಯುತ್ತಿದ್ದೆ. ಮದುವೆಯಾದಾಗಲೂ ನನ್ನ ಪತ್ನಿಯನ್ನು ಇಲ್ಲಿಗೆ ಕರೆತಂದು ತೋರಿಸಿದ್ದೆ” ಎಂದು ಶಿವಕುಮಾರ್ ಸ್ಮರಿಸಿದರು.
ಟ್ರೀ ಪಾರ್ಕ್ ಸ್ಥಾಪನೆ: “ಅರಣ್ಯ ಇಲಾಖೆಯ ಜೊತೆ ಚರ್ಚಿಸಿ, ನಗರದಾದ್ಯಂತ ಅರಣ್ಯ ಇಲಾಖೆ ಜಾಗಗಳಲ್ಲಿ ಕಬ್ಬನ್ ಪಾರ್ಕ್ ಮತ್ತು ಲಾಲ್‌ಬಾಗ್ ಮಾದರಿಯ ಉದ್ಯಾನಗಳನ್ನು ಅಭಿವೃದ್ಧಿಪಡಿಸಿ ‘ಟ್ರೀ ಪಾರ್ಕ್’ ಸ್ಥಾಪಿಸಲಾಗುವುದು. ಯಾವುದೇ ಮರಗಳನ್ನು ಕಡಿಯದೆ, ಕಾಡಿನ ಸಂರಕ್ಷಣೆಗೂ ಒತ್ತು ನೀಡಲಾಗುವುದು. ಲಾಲ್‌ಬಾಗ್‌ಗೆ ಈಗಾಗಲೇ 10 ಕೋಟಿ ರೂ. ಅನುದಾನ ಘೋಷಿಸಲಾಗಿದೆ” ಎಂದರು.
ಹೈಕೋರ್ಟ್ ಸ್ಥಳಾಂತರಕ್ಕೆ ಪರಿಶೀಲನೆ: ಡಿಸಿಎಂ ಮಾತನಾಡಿ, “ನ್ಯಾಯಮಿತ್ರ ಸಹಕಾರಿ ಬ್ಯಾಂಕ್ ಕಾರ್ಯಕ್ರಮದಲ್ಲಿ ಹೈಕೋರ್ಟ್ ಸ್ಥಳಾಂತರಕ್ಕೆ 15-20 ಎಕರೆ ಜಾಗಕ್ಕೆ ಮನವಿ ಬಂದಿತ್ತು. ಈ ಬಗ್ಗೆ ಸರ್ಕಾರ ಮತ್ತು ನ್ಯಾಯಾಲಯದವರೊಂದಿಗೆ ಚರ್ಚಿಸಿ, ನಗರದ ಒಳಗೆ ಸೂಕ್ತ ಸ್ಥಳವನ್ನು ಗುರುತಿಸಲಾಗುವುದು. ಐತಿಹಾಸಿಕ ಕಟ್ಟಡವಾದ ಕಾರಣ, ಅದರಲ್ಲಿ ಯಾವುದೇ ಬದಲಾವಣೆ ಸಾಧ್ಯವಿಲ್ಲ. ರೇಸ್‌ಕೋರ್ಸ್ ಜಾಗದ ಬಗ್ಗೆ ಕಾನೂನಾತ್ಮಕ ತೊಡಕುಗಳಿವೆ. ಇದನ್ನು ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು” ಎಂದರು.
ಕಬ್ಬನ್ ಪಾರ್ಕ್ ರಕ್ಷಣೆಗೆ ಕ್ರಮ: “ಕಬ್ಬನ್ ಪಾರ್ಕ್‌ನಲ್ಲಿ ಹೈಟೆಕ್ ಕ್ಯಾಮೆರಾಗಳನ್ನು ಅಳವಡಿಸಿ, ಒಳಬರುವವರ ಮತ್ತು ಹೊರಹೋಗುವವರ ದಾಖಲೆ ಇಡಲಾಗುವುದು. ಆಯುಕ್ತರ ಕಚೇರಿಯಲ್ಲಿ ಇದರ ವೀಕ್ಷಣೆಗೆ ವ್ಯವಸ್ಥೆ ಕಲ್ಪಿಸಲು ಸೂಚನೆ ನೀಡಲಾಗಿದೆ” ಎಂದು ಶಿವಕುಮಾರ್ ತಿಳಿಸಿದರು.
ನಾಗರಿಕರ ಸಮಸ್ಯೆಗಳಿಗೆ ಸ್ಪಂದನೆ: “ಬೆಂಗಳೂರು ಆಡಳಿತಕ್ಕಾಗಿ 5 ಪಾಲಿಕೆಗಳನ್ನು ರಚಿಸಲಾಗಿದೆ. ಆಸ್ತಿ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಭದ್ರಗೊಳಿಸಲಾಗುತ್ತಿದೆ. ಬೀದಿ ದೀಪ, ಪಾದಚಾರಿ ಮೇಲ್ಸೇತುವೆ, ರಸ್ತೆ ಸಮಸ್ಯೆಗಳು, ಬೀದಿ ನಾಯಿಗಳ ಸಮಸ್ಯೆ, ಇಂದಿರಾಗಾಂಧಿ ಮಕ್ಕಳ ಗ್ರಂಥಾಲಯದ ಉನ್ನತೀಕರಣ, ಆಯುರ್ವೇದ ಉದ್ಯಾನ ಸ್ಥಾಪನೆ ಸೇರಿದಂತೆ ವಿವಿಧ ಮನವಿಗಳನ್ನು ಕಾಲಮಿತಿಯಲ್ಲಿ ಬಗೆಹರಿಸಲಾಗುವುದು” ಎಂದರು.
ಕಬ್ಬನ್ ಪಾರ್ಕ್ ವಿಸ್ತೀರ್ಣ ಕಾಪಾಡಿಕೆ: “ಕಬ್ಬನ್ ಪಾರ್ಕ್‌ನ 330 ಎಕರೆ ವಿಸ್ತೀರ್ಣ ಈಗ 196 ಎಕರೆಗೆ ಕುಗ್ಗಿದೆ. ಇದನ್ನು ಉಳಿಸಲು ಎಲ್ಲರೂ ಕೈಜೋಡಿಸಬೇಕು. ಪಾರ್ಕ್‌ನೊಳಗಿನ ಗುತ್ತಿಗೆ ಕಟ್ಟಡಗಳನ್ನು ತೆರವುಗೊಳಿಸಿ, ವಾಣಿಜ್ಯೀಕರಣ ತಡೆಯಲಾಗುವುದು” ಎಂದು ಡಿಸಿಎಂ ಭರವಸೆ ನೀಡಿದರು.
ನಾಗರಿಕರ ದೂರುಗಳಿಗೆ ಕ್ರಮ: ಚುನಾವಣೆಯಲ್ಲಿ ಹಣಕ್ಕೆ ಟಿಕೆಟ್ ನೀಡುವ ಆರೋಪಕ್ಕೆ ಪ್ರತಿಕ್ರಿಯಿಸಿದ ಶಿವಕುಮಾರ್, “ಇಂತಹ ಆರೋಪಗಳ ಬಗ್ಗೆ ಮಾಹಿತಿ ಇದ್ದರೆ ತಕ್ಷಣ ತನಿಖೆಗೆ ಆದೇಶಿಸುವೆ” ಎಂದರು. ಬೆಸ್ಕಾಂನಿಂದ ಅಕ್ರಮ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕ ನೀಡಿರುವ ದೂರಿನ ಬಗ್ಗೆಯೂ ಕೂಡಲೇ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ರೈತರ ಬೆಂಬಲಕ್ಕೆ ಭರವಸೆ: ದೇವನಹಳ್ಳಿ ಮತ್ತು ನೈಸ್ ರಸ್ತೆ ಸಂತ್ರಸ್ತ ರೈತರ ಪರವಾಗಿ ನಿಲ್ಲುವಂತೆ ಮನವಿ ಸಲ್ಲಿಸಿದ ರೈತ ಮುಖಂಡರಿಗೆ, ಶಿವಕುಮಾರ್ ಸಕಾರಾತ್ಮಕವಾಗಿ ಸ್ಪಂದಿಸಿದರು.
ನಾಗರಿಕರ ಸಮಸ್ಯೆಗಳಿಗೆ ಮುಕ್ತ ವೇದಿಕೆ: “ಜೆ.ಪಿ. ಪಾರ್ಕ್, ಕೋರಮಂಗಲ, ಕೆ.ಆರ್. ಪುರಂ, ಕೆಂಗೇರಿಯಲ್ಲಿ ನೂರಾರು ಮನವಿಗಳನ್ನು ಆಲಿಸಲಾಗಿದೆ. ಹೆಚ್ಚಿನ ಜನರು ಭಾಗವಹಿಸಿದಷ್ಟೂ ಶೀಘ್ರವಾಗಿ ಸಮಸ್ಯೆಗಳನ್ನು ಬಗೆಹರಿಸಬಹುದು. ಸರ್ಕಾರ ತಪ್ಪು ಮಾಡಿದ್ದರೆ ತಿದ್ದಿಕೊಳ್ಳಲು ಸಿದ್ಧವಿದೆ” ಎಂದು ಡಿಸಿಎಂ ಹೇಳಿದರು.











