ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕರಾರಸಾನಿ) ತನ್ನ ಸಿಬ್ಬಂದಿಗಳ ಕಲ್ಯಾಣಕ್ಕಾಗಿ ಮಹತ್ವದ ಕ್ರಮ ಕೈಗೊಂಡಿದ್ದು, ಅಪಘಾತದಲ್ಲಿ ಗಾಯಗೊಂಡ ಮತ್ತು ಮೃತಪಟ್ಟ ಸಿಬ್ಬಂದಿಗಳಿಗೆ ಹಾಗೂ ಇತರ ಕಾರಣಗಳಿಂದ ಮೃತಪಟ್ಟವರ ಅವಲಂಬಿತರಿಗೆ ಒಟ್ಟು 5.35 ಕೋಟಿ ರೂಪಾಯಿ ಪರಿಹಾರವನ್ನು ವಿತರಿಸಿದೆ. ಈ ಕಾರ್ಯಕ್ರಮವು ಶನಿವಾರ (ಏಪ್ರಿಲ್ 26, 2025) ಕರಾರಸಾನಿಯ ಕೇಂದ್ರ ಕಛೇರಿಯಲ್ಲಿ ನಡೆಯಿತು.
ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಮತ್ತು ಕರಾರಸಾನಿಯ ಉಪಾಧ್ಯಕ್ಷ ಮೊಹಮ್ಮದ್ ರಿಜ್ವಾನ್ ನವಾಬ್ ಅವರು ಪರಿಹಾರ ಮೊತ್ತದ ಚೆಕ್‌ಗಳನ್ನು ವಿತರಿಸಿದರು. ಮೊದಲ ಬಾರಿಗೆ, ಅಪಘಾತದಲ್ಲಿ ಕಾಲು ಕಳೆದುಕೊಂಡ ಚಾಲಕ-ಕಂ-ನಿರ್ವಾಹಕ ಸುನಿಲ್ ಕುಮಾರ್ ಬಿ.ಡಿ. (ಅರಕಲಗೂಡು ಘಟಕ, ಹಾಸನ ವಿಭಾಗ) ಅವರಿಗೆ 25 ಲಕ್ಷ ರೂ. ಪರಿಹಾರ ನೀಡಲಾಯಿತು. ಇವರಿಗೆ 4.85 ಲಕ್ಷ ರೂ. ವೈದ್ಯಕೀಯ ವೆಚ್ಚವನ್ನು ಭರಿಸಲಾಗಿದ್ದು, ಲಘು ಹುದ್ದೆಯಲ್ಲಿ ಕಾರ್ಯನಿರ್ವಹಿಸಲು ಅವಕಾಶ ಕಲ್ಪಿಸಲಾಗಿದೆ.
ಅಪಘಾತದಲ್ಲಿ ಮೃತಪಟ್ಟ ಇಬ್ಬರು ಸಿಬ್ಬಂದಿಗಳ ಕುಟುಂಬಕ್ಕೆ ತಲಾ 1 ಕೋಟಿ ರೂ. ಒಟ್ಟು 2 ಕೋಟಿ ರೂ. ಪರಿಹಾರ ವಿತರಿಸಲಾಯಿತು. ಇದುವರೆಗೆ 26 ಸಿಬ್ಬಂದಿಗಳ ಅವಲಂಬಿತರಿಗೆ 26 ಕೋಟಿ ರೂ. ಅಪಘಾತ ವಿಮಾ ಪರಿಹಾರ ನೀಡಲಾಗಿದೆ. ಇದಲ್ಲದೆ, ಹೃದಯಾಘಾತ, ಕ್ಯಾನ್ಸರ್, ಸ್ಟ್ರೋಕ್ ಮುಂತಾದ ಕಾರಣಗಳಿಂದ ಮೃತಪಟ್ಟ 31 ಸಿಬ್ಬಂದಿಗಳ ಅವಲಂಬಿತರಿಗೆ ತಲಾ 10 ಲಕ್ಷ ರೂ. ಒಟ್ಟು 3.10 ಕೋಟಿ ರೂ. ಪರಿಹಾರ ವಿತರಿಸಲಾಯಿತು. ಒಟ್ಟಾರೆ, 125 ಸಿಬ್ಬಂದಿಗಳ ಅವಲಂಬಿತರಿಗೆ 12.50 ಕೋಟಿ ರೂ. ಪರಿಹಾರ ನೀಡಲಾಗಿದೆ.
ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, “ಸಿಬ್ಬಂದಿಗಳ ಜೀವ ಅಮೂಲ್ಯ. ಅವರನ್ನು ಮರಳಿ ಕರೆತರಲು ಸಾಧ್ಯವಿಲ್ಲ. ಆದರೆ, ಅವರ ಅವಲಂಬಿತರ ಜೀವನವನ್ನು ಆರ್ಥಿಕವಾಗಿ ಭದ್ರಗೊಳಿಸಲು ಸಾರಿಗೆ ಸುರಕ್ಷಾ ಯೋಜನೆ ಜಾರಿಗೊಳಿಸಿದ್ದೇವೆ. ಸಿಬ್ಬಂದಿಗಳ ಶ್ರಮದಿಂದ ನಿಗಮ ಉನ್ನತ ಸ್ಥಾನದಲ್ಲಿದೆ. ಈಗಾಗಲೇ ನಾಲ್ಕು ನಿಗಮಗಳಲ್ಲಿ 1000 ಜನರಿಗೆ ಅನುಕಂಪದ ಆಧಾರದ ಮೇಲೆ ಉದ್ಯೋಗ ನೀಡಿದ್ದೇವೆ,” ಎಂದರು.
ಪರಿಹಾರ ಮೊತ್ತವನ್ನು ಮಕ್ಕಳ ಶಿಕ್ಷಣ, ಮನೆ ನಿರ್ಮಾಣ ಮತ್ತು ಶುಭ ಕಾರ್ಯಗಳಿಗೆ ಸದುಪಯೋಗಪಡಿಸಿಕೊಳ್ಳುವಂತೆ ಸೂಚಿಸಿದ ಅವರು, “ಬಡ್ಡಿ ವ್ಯಾಮೋಹಕ್ಕೆ ಒಳಗಾಗಿ ಹಣವನ್ನು ಯಾರಿಗೂ ನೀಡಬೇಡಿ. ಸೂಕ್ತವಾಗಿ ಬಳಸಿಕೊಳ್ಳಿ,” ಎಂದು ಕಿವಿಮಾತು ಹೇಳಿದರು.
ಕರಾರಸಾನಿಯ ವ್ಯವಸ್ಥಾಪಕ ನಿರ್ದೇಶಕ ಅನ್ಬುಕುಮಾರ್ ವಿ. ಮಾತನಾಡಿ, “ಸಿಬ್ಬಂದಿಗಳ ಕಲ್ಯಾಣಕ್ಕಾಗಿ ಹಲವು ಯೋಜನೆಗಳನ್ನು ಜಾರಿಗೊಳಿಸಿದ್ದೇವೆ. ‘ಕೆಎಸ್‌ಆರ್‌ಟಿಸಿ ಆರೋಗ್ಯ’ ಯೋಜನೆಯಡಿ 300ಕ್ಕೂ ಹೆಚ್ಚು ಆಸ್ಪತ್ರೆಗಳಲ್ಲಿ 56,000ಕ್ಕೂ ಅಧಿಕ ಸಿಬ್ಬಂದಿ/ಅವಲಂಬಿತರು ಉಚಿತ ಚಿಕಿತ್ಸೆ ಪಡೆದಿದ್ದಾರೆ. ಪರಿಹಾರ ಮೊತ್ತವನ್ನು ಜವಾಬ್ದಾರಿಯುತವಾಗಿ ಬಳಸಿಕೊಳ್ಳಿ,” ಎಂದರು.
ಕಾರ್ಯಕ್ರಮದಲ್ಲಿ ಬೆಂಗಳೂರು ಮೆಟ್ರೋ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಆರ್. ರಾಮಚಂದ್ರನ್, ನಿರ್ದೇಶಕ (ಸಿಬ್ಬಂದಿ ಮತ್ತು ಜಾಗೃತಿ) ಡಾ. ನಂದಿನಿದೇವಿ ಸೇರಿದಂತೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.