ಕನ್ನಡ ಚಿತ್ರರಂಗದ ಪ್ರತಿಭಾವಂತ ನಟಿ ಚೈತ್ರಾ ಜೆ ಆಚಾರ್, ಕರಾವಳಿಯ ಸೊಗಡಿನ ಪ್ರೇಮಕಥೆಯಾದ ‘ಮಾರ್ನಮಿ’ ಚಿತ್ರದಲ್ಲಿ ನಾಯಕಿಯಾಗಿ ಮಿಂಚಲು ಸಜ್ಜಾಗಿದ್ದಾರೆ. ಈ ಚಿತ್ರದಲ್ಲಿ ದೀಕ್ಷಾ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿರುವ ಚೈತ್ರಾ, ತಮ್ಮ ನಟನೆಯ ಮೂಲಕ ಪ್ರೇಕ್ಷಕರ ಮನಗೆಲ್ಲಲು ರೆಡಿಯಾಗಿದ್ದಾರೆ. ಈಗಾಗಲೇ ಚೈತ್ರಾ ಅವರ ಪಾತ್ರದ ಟೀಸರ್ ಬಿಡುಗಡೆಯಾಗಿದ್ದು, ಗುನಾಧ್ಯ ಪ್ರೊಡಕ್ಷನ್ಸ್ ಯೂಟ್ಯೂಬ್ ಚಾನೆಲ್‌ನಲ್ಲಿ ಲಭ್ಯವಿದೆ.
ಕರಾವಳಿ ಭಾಷೆಯಲ್ಲಿ ತಮ್ಮ ಪ್ರೀತಿ ಮತ್ತು ಮದುವೆಯ ಕನಸನ್ನು ದೀಕ್ಷಾ ಪಾತ್ರದ ಮೂಲಕ ಚೈತ್ರಾ ಆಕರ್ಷಕವಾಗಿ ಪರಿಚಯಿಸಿದ್ದಾರೆ. ಡಿ-ಗ್ಲಾಮ್ ಲುಕ್‌ನಲ್ಲಿ ಕಾಣಿಸಿಕೊಂಡಿರುವ ಚೈತ್ರಾ, ತಮ್ಮ ಸಹಜ ನಟನೆಯಿಂದ ಗಮನ ಸೆಳೆದಿದ್ದಾರೆ. ಈ ಟೀಸರ್‌ನ್ನು ನಟಿ ರಮ್ಯಾ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡು, ಚಿತ್ರತಂಡಕ್ಕೆ ಶುಭಾಶಯ ಕೋರಿದ್ದಾರೆ.
ಕುಂದಾಪುರದ ಪಡುಕೋಣೆಯ ರಿಶಿತ್ ಶೆಟ್ಟಿ ನಿರ್ದೇಶನದ ‘ಮಾರ್ನಮಿ’, ಕರಾವಳಿಯ ಹುಲಿವೇಷ ಸಂಸ್ಕೃತಿಯನ್ನು ಕೇಂದ್ರವಾಗಿಟ್ಟುಕೊಂಡು ಪ್ರೇಮಕಥೆ, ಆಕ್ಷನ್, ಭಾವನೆ ಮತ್ತು ಹಾಸ್ಯದ ಮಿಶ್ರಣವನ್ನು ಒಳಗೊಂಡಿದೆ. ಗುನಾಧ್ಯ ಬ್ಯಾನರ್ ಅಡಿಯಲ್ಲಿ ಶಿಲ್ಪಾ ನಿಶಾಂತ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.
ಚಿತ್ರದಲ್ಲಿ ರಿತ್ವಿಕ್ ಮಠದ್ ನಾಯಕನಾಗಿ ನಟಿಸಿದ್ದು, ಪ್ರಕಾಶ್ ತುಮಿನಾಡು, ಸೋನು ಗೌಡ, ಜ್ಯೋತೀಶ್ ಶೆಟ್ಟಿ, ರೋಚಿತ್, ಸ್ವರಾಜ್ ಶೆಟ್ಟಿ, ಮೈಮ್ ರಾಮದಾಸ್ ಮತ್ತು ಚೈತ್ರ ಶೆಟ್ಟಿ ಸೇರಿದಂತೆ ಗಣನೀಯ ತಾರಾಬಳಗವಿದೆ. ಚರಣ್ ರಾಜ್ ಸಂಗೀತ ನಿರ್ದೇಶನವನ್ನು ನೀಡಿದ್ದು, ಶಿವಸೇನ ಛಾಯಾಗ್ರಹಣ ನಿರ್ವಹಿಸಿದ್ದಾರೆ.
‘ಮಾರ್ನಮಿ’ ಚಿತ್ರವು ಕರಾವಳಿಯ ಸಂಸ್ಕೃತಿಯೊಂದಿಗೆ ಪ್ರೇಕ್ಷಕರಿಗೆ ಮನರಂಜನೆಯ ಜೊತೆಗೆ ಭಾವನಾತ್ಮಕ ಅನುಭವವನ್ನು ಒದಗಿಸುವ ಭರವಸೆಯನ್ನು ಇಟ್ಟುಕೊಂಡಿದೆ.