“ರಾಜ್ಯದಲ್ಲಿ ಯೂರಿಯಾ ರಸಗೊಬ್ಬರ ವಿತರಣೆಯಲ್ಲಿ ಭಾರೀ ಭ್ರಷ್ಟಾಚಾರ; ರೈತರಿಗೆ ತೊಂದರೆ” – ಸಂಸದ ಬಸವರಾಜ ಬೊಮ್ಮಾಯಿ
ನವದೆಹಲಿ: ಕೇಂದ್ರ ರಸಗೊಬ್ಬರ ಮತ್ತು ರಾಸಾಯನಿಕ ಸಚಿವ ಜೆ.ಪಿ. ನಡ್ಡಾ ಅವರು, ಕರ್ನಾಟಕಕ್ಕೆ ಅಗತ್ಯವಿರುವ 1.35 ಲಕ್ಷ ಮೆಟ್ರಿಕ್ ಟನ್ ಯೂರಿಯಾವನ್ನು ಮುಂದಿನ 10 ರಿಂದ 15 ದಿನಗಳಲ್ಲಿ ಪೂರೈಸುವ ಭರವಸೆ ನೀಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ನವದೆಹಲಿಯಲ್ಲಿ ಸೋಮವಾರ ಕರ್ನಾಟಕದ ಬಿಜೆಪಿ ಸಂಸದರೊಂದಿಗೆ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕದ ರೈತರಿಗೆ ಯೂರಿಯಾ ಸಕಾಲಿಕವಾಗಿ ಸಿಗುತ್ತಿಲ್ಲ ಎಂದು ಆರೋಪಿಸಿದರು. “ಇದು ಒಂದೇ ದಿನದ ಸಮಸ್ಯೆಯಲ್ಲ. ಈ ವರ್ಷ ಉತ್ತಮ ಮುಂಗಾರು ಮತ್ತು ಮುಂಗಾರು ಪೂರ್ವ ಮಳೆಯಿಂದಾಗಿ ರೈತರು ದೊಡ್ಡ ಪ್ರಮಾಣದಲ್ಲಿ ಮೆಕ್ಕೆಜೋಳ ಬೆಳೆಯುತ್ತಿದ್ದಾರೆ. ಮೆಕ್ಕೆಜೋಳದ ಬೆಳೆ ವಿಸ್ತೀರ್ಣವು ಶೇ.1.5 ರಷ್ಟು ಹೆಚ್ಚಾಗಿದೆ. ಕೃಷಿ ಇಲಾಖೆಗೆ ಈ ವಿಷಯ ತಿಳಿದಿದೆ ಮತ್ತು ಅವರು ಇದನ್ನು ಒಪ್ಪಿಕೊಂಡಿದ್ದಾರೆ. ಸಾಮಾನ್ಯವಾಗಿ ಜುಲೈನಿಂದ ಆಗಸ್ಟ್‌ವರೆಗೆ ಯೂರಿಯಾದ ಬೇಡಿಕೆ ಇರುತ್ತದೆ. ಆದರೆ ಈ ಬಾರಿ ಜೂನ್‌ನ ಮೂರನೇ ವಾರದಿಂದಲೇ ಮಳೆ ಆರಂಭವಾದ ಕಾರಣ, ರಸಗೊಬ್ಬರದ ಬೇಡಿಕೆಯೂ ಮೊದಲೇ ಶುರುವಾಗಿದೆ,” ಎಂದು ಅವರು ವಿವರಿಸಿದರು.
ರೈತರ ಮೇಲೆ ಹೆಚ್ಚಿನ ಆರ್ಥಿಕ ಒತ್ತಡ
ಬೊಮ್ಮಾಯಿ ಅವರು, ಸಾಮಾನ್ಯವಾಗಿ ರೈತರು ಒಮ್ಮೆ ಯೂರಿಯಾವನ್ನು ಬಳಸುತ್ತಾರೆ. ಆದರೆ ಈ ಬಾರಿ, ಮೊದಲ ಬಾರಿಗೆ ಯೂರಿಯಾ ಬಳಸಿದ ಬಳಿಕ ಮತ್ತೆ ಮಳೆಯಾದ ಕಾರಣ, ಎರಡನೇ ಮತ್ತು ಮೂರನೇ ಬಾರಿಯೂ ಯೂರಿಯಾ ಬಳಕೆ ಮಾಡಬೇಕಾಯಿತು. ಇದರಿಂದ ರೈತರ ಮೇಲೆ ಆರ್ಥಿಕ ಒತ್ತಡ ಹೆಚ್ಚಾಗಿದೆ. ಇದರ ಜೊತೆಗೆ, ಮೆಕ್ಕೆಜೋಳ ಬೆಳೆಯಲ್ಲಿ ಕಳೆಗಳ ಸಮಸ್ಯೆ ಮತ್ತು ಕಾರ್ಮಿಕರ ಕೊರತೆಯಿಂದ ರೈತರು ಕಳೆನಾಶಕಗಳಿಗೂ ಖರ್ಚು ಮಾಡಬೇಕಾಗಿದೆ. ಇದು ಆರ್ಥಿಕ ಭಾರವನ್ನು ಮತ್ತಷ್ಟು ಹೆಚ್ಚಿಸಿದೆ. ರಸಗೊಬ್ಬರ ವಿತರಕರ ಅಂಗಡಿಗಳ ಮುಂದೆ ರಾತ್ರಿಯಿಡೀ ಸಾಲುಗಟ್ಟಿ ನಿಲ್ಲುವುದರಿಂದ ರೈತರು ಸಿಟ್ಟಿಗೆದ್ದು ಪ್ರತಿಭಟನೆ ನಡೆಸುತ್ತಿದ್ದಾರೆ. ರಾಜ್ಯದ ಎಂಟು ಜಿಲ್ಲೆಗಳಲ್ಲಿ ಈ ಸಮಸ್ಯೆ ತೀವ್ರವಾಗಿದ್ದು, ಮೂರು-ನಾಲ್ಕು ಜಿಲ್ಲೆಗಳಲ್ಲಿ ಮಧ್ಯಮ ಮಟ್ಟದಲ್ಲಿದೆ ಎಂದು ಅವರು ಹೇಳಿದರು.
ಕೃಷಿ ಇಲಾಖೆಯ ವೈಫಲ್ಯ
ಕೃಷಿ ಇಲಾಖೆಯು ಹವಾಮಾನ ಬದಲಾವಣೆಯನ್ನು ಗಮನಿಸಿ ಬಫರ್ ಸ್ಟಾಕ್ ಇರಿಸಿಕೊಳ್ಳಬೇಕಿತ್ತು. ಹಿಂದಿನ ವರ್ಷದ ರಸಗೊಬ್ಬರ ಬಳಕೆಯ ಆಧಾರದ ಮೇಲೆ ಈ ವರ್ಷದ ಬೇಡಿಕೆಯನ್ನು ಅಂದಾಜಿಸಿ ಸಂಗ್ರಹ ಮಾಡಬೇಕಿತ್ತು. ಕೇಂದ್ರ ಸರ್ಕಾರವು ರೈಲ್ವೆ ವ್ಯಾಗನ್‌ಗಳ ಮೂಲಕ ರಾಜ್ಯದ ಸಮೀಪದ ಯಾರ್ಡ್‌ಗೆ ರಸಗೊಬ್ಬರವನ್ನು ಒದಗಿಸುತ್ತದೆ. ಆದರೆ ವಿತರಣೆಯ ಜವಾಬ್ದಾರಿಯು ರಾಜ್ಯ ಸರ್ಕಾರದ ಮೇಲಿದೆ. ಈ ವಿತರಣೆಯಲ್ಲಿ ದೊಡ್ಡ ಮಟ್ಟದ ಗೊಂದಲ ಮತ್ತು ಕಳಪೆ ನಿರ್ವಹಣೆ ಉಂಟಾಗಿದೆ. ಕೃಷಿ ಇಲಾಖೆಯು ರೈತರ ಬೇಡಿಕೆಯನ್ನು ಅರ್ಥಮಾಡಿಕೊಳ್ಳಲು ಮತ್ತು ಅಂದಾಜಿಸಲು ವಿಫಲವಾಗಿದೆ ಎಂದು ಬೊಮ್ಮಾಯಿ ಆರೋಪಿಸಿದರು.
ರಸಗೊಬ್ಬರ ವಿತರಣೆಯಲ್ಲಿ ಭ್ರಷ್ಟಾಚಾರ
ರಾಜ್ಯದಲ್ಲಿ ರಸಗೊಬ್ಬರ ವಿತರಣೆಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಸಂಸದರು ಆರೋಪಿಸಿದರು. ಕರ್ನಾಟಕದಲ್ಲಿ ಯೂರಿಯಾ ಲಭ್ಯವಿದ್ದರೂ, ರೈತರಿಗೆ ಅದು ದೊರೆಯುತ್ತಿಲ್ಲ. ಶ್ರೀಮಂತ ರೈತರು ಹೆಚ್ಚಿನ ಬೆಲೆಗೆ ಯೂರಿಯಾವನ್ನು ಖರೀದಿಸುತ್ತಿದ್ದರೆ, ಸಣ್ಣ ಮತ್ತು ಅತಿ ಸಣ್ಣ ರೈತರು ಅಂಗಡಿಗಳ ಮುಂದೆ ಸಾಲುಗಟ್ಟಿ ನಿಲ್ಲಬೇಕಾಗಿದೆ. ಅನಧಿಕೃತವಾಗಿ ಯೂರಿಯಾವನ್ನು ಸಂಗ್ರಹಿಸಿ ಕಪ್ಪು ಮಾರುಕಟ್ಟೆಯಲ್ಲಿ ದುಬಾರಿ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಇದರಲ್ಲಿ ದೊಡ್ಡ ಮಟ್ಟದ ಭ್ರಷ್ಟಾಚಾರ ನಡೆಯುತ್ತಿದೆ. ಜಿಲ್ಲಾವಾರು ಬೇಡಿಕೆಯ ಬಗ್ಗೆ ಅಧಿಕಾರಿಗಳಿಗೆ ಸರಿಯಾದ ಮಾಹಿತಿಯಿಲ್ಲ. ಆಡಳಿತಾತ್ಮಕ ವೈಫಲ್ಯದಿಂದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಅವರು ಹೇಳಿದರು.
ಲಿಂಕ್ ಮಾರಾಟ ನಿಲ್ಲಿಸಿ
ಕರ್ನಾಟಕದಲ್ಲಿ 1.35 ಲಕ್ಷ ಮೆಟ್ರಿಕ್ ಟನ್ ಯೂರಿಯಾ ಸ್ಟಾಕ್ ಇದೆ. ಇದನ್ನು ಸರಿಯಾಗಿ ನಿರ್ವಹಿಸಿದರೆ, ರೈತರ ತುರ್ತು ರಸಗೊಬ್ಬರ ಕೊರತೆಯನ್ನು ಪರಿಹರಿಸಬಹುದು. ರಾಜ್ಯ ಸರ್ಕಾರವು ಈ ಯೂರಿಯಾವನ್ನು ಸಹಕಾರಿ ಸಂಘಗಳ ಮೂಲಕ ವಿತರಿಸಬೇಕು. ಯೂರಿಯಾ ಪಡೆಯಲು ರೈತರನ್ನು ಇತರ ರಸಗೊಬ್ಬರಗಳ ಖರೀದಿಗೆ ಒತ್ತಾಯಿಸಬಾರದು ಎಂದು ಕೇಂದ್ರ ಸರ್ಕಾರ ಸ್ಪಷ್ಟ ಆದೇಶ ನೀಡಿದೆ. ಲಿಂಕ್ ಮಾರಾಟದಲ್ಲಿ ತೊಡಗಿರುವ ವಿತರಕರ ಪರವಾನಗಿಯನ್ನು ರದ್ದುಗೊಳಿಸಬೇಕು. ಆದರೆ, ರಾಜ್ಯ ಸರ್ಕಾರ ಈ ನಿಟ್ಟಿನಲ್ಲಿ ಯಾವುದೇ ಕ್ರಮ ಕೈಗೊಂಡಿಲ್ಲ. ರೈತರು ಈಗಾಗಲೇ ಸಂಕಷ್ಟದಲ್ಲಿದ್ದಾರೆ, ಆದರೆ ರಾಜ್ಯ ಸರ್ಕಾರವು ಅವರ ಮೇಲೆ ಹೆಚ್ಚಿನ ಒತ್ತಡವನ್ನು ಹೇರುತ್ತಿದೆ. ಯೂರಿಯಾವನ್ನು ಇತರ ರಸಗೊಬ್ಬರ ಖರೀದಿಗೆ ಜೋಡಿಸದೆ ಪೂರೈಕೆ ಮಾಡಬೇಕು ಎಂದು ಬೊಮ್ಮಾಯಿ ಒತ್ತಾಯಿಸಿದರು.
ಸರಿಯಾದ ವಿತರಣೆ ಖಾತರಿಪಡಿಸಿ
ಖರೀಫ್ ಋತುವಿಗೆ ಒಟ್ಟಾರೆ 11.17 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರದ ಬೇಡಿಕೆಯಿದೆ. ಜುಲೈ ಅಂತ್ಯದ ವೇಳೆಗೆ 6.25 ಲಕ್ಷ ಮೆಟ್ರಿಕ್ ಟನ್ ವಿತರಣೆಯಾಗಿರಬೇಕಿತ್ತು. ಆದರೆ ಇದುವರೆಗೆ 5.35 ಲಕ್ಷ ಮೆಟ್ರಿಕ್ ಟನ್ ಮಾತ್ರ ವಿತರಣೆಯಾಗಿದೆ. ಪ್ರಸ್ತುತ, ಕರ್ನಾಟಕದಲ್ಲಿ 8.82 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರ ಸ್ಟಾಕ್ ಇದ್ದು, ಇದರಲ್ಲಿ 7.74 ಲಕ್ಷ ಮೆಟ್ರಿಕ್ ಟನ್ ವಿತರಣೆಯಾಗಿದೆ ಎಂದು ರಾಜ್ಯ ಸರ್ಕಾರ ಹೇಳಿಕೊಂಡಿದೆ. ಇದರಿಂದ ಬಫರ್ ಸ್ಟಾಕ್ ಇದ್ದದ್ದು ಸ್ಪಷ್ಟವಾಗುತ್ತದೆ. ಇನ್ನುಳಿದ 1.35 ಲಕ್ಷ ಮೆಟ್ರಿಕ್ ಟನ್ ಯೂರಿಯಾವನ್ನು ಕೇಂದ್ರವು ಪೂರೈಸಬೇಕಾಗಿದೆ. ಇಂದು ಕೇಂದ್ರ ಸಚಿವ ಜೆ.ಪಿ. ನಡ್ಡಾ ಅವರನ್ನು ಭೇಟಿಯಾಗಿ ರಾಜ್ಯದ ರಸಗೊಬ್ಬರ ಸಮಸ್ಯೆಯ ಬಗ್ಗೆ ಚರ್ಚಿಸಲಾಯಿತು. ಸಚಿವರು ತಕ್ಷಣವೇ ಅಧಿಕಾರಿಗಳೊಂದಿಗೆ ಚರ್ಚಿಸಿ, ಕರ್ನಾಟಕಕ್ಕೆ 1.35 ಲಕ್ಷ ಮೆಟ್ರಿಕ್ ಟನ್ ಯೂರಿಯಾವನ್ನು 10 ರಿಂದ 15 ದಿನಗಳಲ್ಲಿ ಪೂರೈಸಲು ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಇಂದಿನಿಂದಲೇ 16,000 ಮೆಟ್ರಿಕ್ ಟನ್ ಯೂರಿಯಾ ರವಾನೆಯಾಗುತ್ತಿದ್ದು, ದಿನಕ್ಕೆ 15,000 ರಿಂದ 20,000 ಮೆಟ್ರಿಕ್ ಟನ್ ಪೂರೈಕೆ ಮುಂದುವರಿಯಲಿದೆ ಎಂದು ಅವರು ತಿಳಿಸಿದರು.
ರಾಜ್ಯ ಸರ್ಕಾರಕ್ಕೆ ಸಲಹೆ
ರಾಜ್ಯ ಸರ್ಕಾರವು ಜಿಲ್ಲೆ, ತಾಲೂಕು ಮತ್ತು ಗ್ರಾಮ ಮಟ್ಟದಲ್ಲಿ ಬೇಡಿಕೆಯನ್ನು ಸರಿಯಾಗಿ ಅಂದಾಜಿಸಿ, ಸೂಕ್ತವಾಗಿ ಪೂರೈಕೆ ಖಾತರಿಪಡಿಸಬೇಕು. ರೈತರು ದೀರ್ಘ ಸಾಲುಗಳಲ್ಲಿ ನಿಲ್ಲುವಂತೆ ಮಾಡಬಾರದು. ಅಕ್ರಮವಾಗಿ ರಸಗೊಬ್ಬರ ಮಾರಾಟ ಮಾಡುವ ಅಂಗಡಿಗಳ ಮೇಲೆ ದಾಳಿ ನಡೆಸಿ, ಕ್ರಿಮಿನಲ್ ಪ್ರಕರಣ ದಾಖಲಿಸಬೇಕು. ಅಕ್ರಮವಾಗಿ ಸಂಗ್ರಹಿಸಿರುವ ರಸಗೊಬ್ಬರವನ್ನು ವಶಪಡಿಸಿಕೊಂಡು ರೈತರಿಗೆ ವಿತರಿಸಬೇಕು. ಇಂತಹ ವಿತರಕರ ಪರವಾನಗಿಯನ್ನು ರದ್ದುಗೊಳಿಸಬೇಕು. ಬೇಡಿಕೆ ಇರುವ ಸ್ಥಳಗಳಿಗೆ ರಸಗೊಬ್ಬರ ಪೂರೈಸಿದರೆ, ಯೂರಿಯಾ ಕೊರತೆಯ ಸಮಸ್ಯೆಯನ್ನು ಬಗೆಹರಿಸಬಹುದು ಎಂದು ಬೊಮ್ಮಾಯಿ ಸಲಹೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಸಂಸದರಾದ ಗೋವಿಂದ ಕಾರಜೋಳ, ಕೋಟ ಶ್ರೀನಿವಾಸ ಪೂಜಾರಿ, ಡಾ. ಸಿ.ಎನ್. ಮಂಜುನಾಥ್, ಪಿ.ಸಿ. ಗದ್ದಿಗೌಡರ್, ವಿಶ್ವೇಶ್ವರ ಹೆಗಡೆ ಕಾಗೇರಿ ಮತ್ತು ರಾಜ್ಯಸಭಾ ಸಂಸದ ಇರನ್ನ ಕಡದಿ ಉಪಸ್ಥಿತರಿದ್ದರು.