ಅಂಬಾರಗೋಡ್ಲು – ಕಳಸವಳ್ಳಿ ತೂಗು ಸೇತುವೆ ಲೋಕಾರ್ಪಣೆ
ಶಿವಮೊಗ್ಗ: ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ಶ್ರೀ ನಿತಿನ್ ಗಡ್ಕರಿ ಅವರು ಇಂದು ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ 2042 ಕೋಟಿ ರೂಪಾಯಿ ವೆಚ್ಚದ 9 ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು. ಈ ಸಂದರ್ಭದಲ್ಲಿ ಅಂಬಾರಗೋಡ್ಲು – ಕಳಸವಳ್ಳಿ ನಡುವೆ 472.08 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ 6.18 ಕಿ.ಮೀ. ಉದ್ದದ ತೂಗು ಸೇತುವೆಯನ್ನು ಲೋಕಾರ್ಪಣೆಗೊಳಿಸಲಾಯಿತು. ಇದು ಭಾರತದ ಎರಡನೇ ಅತಿ ಉದ್ದದ ತೂಗು ಸೇತುವೆಯಾಗಿದೆ.
ಕಾರ್ಯಕ್ರಮದಲ್ಲಿ ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಹಾಗೂ ನವೀಕರಿಸಬಹುದಾದ ಇಂಧನ ಸಚಿವ ಶ್ರೀ ಪ್ರಲ್ಹಾದ್ ಜೋಶಿ, ಲೋಕಸಭಾ ಸದಸ್ಯರಾದ ಶ್ರೀ ಬಿ.ವೈ. ರಾಘವೇಂದ್ರ, ಶ್ರೀ ಕೋಟ ಶ್ರೀನಿವಾಸ ಪೂಜಾರಿ ಮತ್ತು ಕ್ಯಾಪ್ಟನ್ ಬ್ರಿಜೇಶ್ ಚೌಟ ಉಪಸ್ಥಿತರಿದ್ದರು.

ಕರ್ನಾಟಕದಲ್ಲಿ ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿ
ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀ ನಿತಿನ್ ಗಡ್ಕರಿ, ಕರ್ನಾಟಕದಲ್ಲಿ ಸುಮಾರು 9,000 ಕಿ.ಮೀ. ಉದ್ದದ ರಾಷ್ಟ್ರೀಯ ಹೆದ್ದಾರಿಗಳನ್ನು ನಿರ್ಮಿಸಲಾಗಿದೆ ಎಂದು ತಿಳಿಸಿದರು. ಪ್ರಸ್ತುತ 3 ಲಕ್ಷ ಕೋಟಿ ರೂ. ಮೌಲ್ಯದ ಯೋಜನೆಗಳು ವಿವಿಧ ಹಂತಗಳಲ್ಲಿ ಪ್ರಗತಿಯಲ್ಲಿದ್ದು, ಮುಂದಿನ 5 ವರ್ಷಗಳಲ್ಲಿ 5 ಲಕ್ಷ ಕೋಟಿ ರೂ. ವೆಚ್ಚದ ಯೋಜನೆಗಳನ್ನು ಕೈಗೊಳ್ಳಲು ಯೋಜನೆ ರೂಪಿಸಲಾಗಿದೆ. ಪ್ರಧಾನಮಂತ್ರಿ ಆಕಾಂಕ್ಷಿ ಜಿಲ್ಲೆಗಳಿಗೂ ರಾಷ್ಟ್ರೀಯ ಹೆದ್ದಾರಿಗಳ ಸಂಪರ್ಕ ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.
ದೇಶಾದ್ಯಂತ ಸಂಪರ್ಕ ವ್ಯವಸ್ಥೆ
ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಮತ್ತು ದೆಹಲಿಯಿಂದ ಮುಂಬೈ ಮಾರ್ಗವಾಗಿ ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳಿಗೆ ಸಂಪರ್ಕ ಕಲ್ಪಿಸಲಾಗಿದೆ. ಅಟಲ್ ಟನಲ್‌ನಂತಹ ಸುರಂಗ ಮಾರ್ಗಗಳನ್ನು ನಿರ್ಮಿಸಲಾಗುತ್ತಿದೆ. ಹಾಸನ-ರಾಯಚೂರು ನಡುವಿನ ನಾಲ್ಕು ಪಥದ ಹೆದ್ದಾರಿಯನ್ನು ಈ ವರ್ಷದ ಡಿಸೆಂಬರ್‌ಗೆ ಪೂರ್ಣಗೊಳಿಸಲಾಗುವುದು, ಇದರಿಂದ ಪ್ರಯಾಣ ಸಮಯ ಕಡಿಮೆಯಾಗಲಿದೆ. ಬೆಂಗಳೂರು-ಚೆನ್ನೈ ಹೆದ್ದಾರಿ ನಿರ್ಮಾಣ ಕಾರ್ಯ ಮುಕ್ತಾಯಗೊಂಡಿದ್ದು, ಮುಂದಿನ ಆರು ತಿಂಗಳಲ್ಲಿ ಲೋಕಾರ್ಪಣೆಗೊಳ್ಳಲಿದೆ.

ಹುಬ್ಬಳ್ಳಿ-ಧಾರವಾಡ ಹೆದ್ದಾರಿ
ಹುಬ್ಬಳ್ಳಿ-ಧಾರವಾಡ ನಡುವಿನ ಹೆದ್ದಾರಿ ಕಾಮಗಾರಿ ಶೇ.70ರಷ್ಟು ಪೂರ್ಣಗೊಂಡಿದ್ದು, ಮಾರ್ಚ್ 2026ರ ವೇಳೆಗೆ ಮುಕ್ತಾಯವಾಗಲಿದೆ. ಇದರಿಂದ ಅವಳಿ ನಗರಗಳ ನಡುವಿನ ಪ್ರಯಾಣ ಸಮಯ 15 ನಿಮಿಷಕ್ಕೆ ಇಳಿಯಲಿದೆ. ಮೈಸೂರು-ಮಡಿಕೇರಿ, ಶಿರಾಡಿ ಘಾಟ್ ರಸ್ತೆ ಕಾಮಗಾರಿಗಳೂ ಪ್ರಗತಿಯಲ್ಲಿವೆ.
ತೂಗು ಸೇತುವೆಗೆ ಚೌಡೇಶ್ವರಿ ಮಾತೆ ಸೇತುವೆ ಎಂದು ನಾಮಕರಣ
ಕೇಂದ್ರ ಸಚಿವ ಶ್ರೀ ಪ್ರಲ್ಹಾದ್ ಜೋಶಿ ಮಾತನಾಡಿ, ಅಂಬಾರಗೋಡ್ಲು-ಕಳಸವಳ್ಳಿ ತೂಗು ಸೇತುವೆಯಿಂದ ಪ್ರಯಾಣ ಸಮಯ ಉಳಿತಾಯವಾಗಲಿದೆ ಎಂದರು. ಈ ಸೇತುವೆಗೆ ಚೌಡೇಶ್ವರಿ ಮಾತೆ ಸೇತುವೆ ಎಂದು ನಾಮಕರಣ ಮಾಡಬೇಕೆಂದು ಸಲಹೆ ನೀಡಿದರು. ಕಳೆದ 10 ವರ್ಷಗಳಲ್ಲಿ 50,000 ಕಿ.ಮೀ. ಹೆದ್ದಾರಿಗಳನ್ನು ನಿರ್ಮಿಸಲಾಗಿದ್ದು, ಕರ್ನಾಟಕಕ್ಕೆ ವಿಶೇಷ ಆದ್ಯತೆ ನೀಡಲಾಗಿದೆ. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ನೇತೃತ್ವದಲ್ಲಿ ಪ್ರತಿದಿನ 34 ಕಿ.ಮೀ. ಹೆದ್ದಾರಿಗಳನ್ನು ನಿರ್ಮಿಸಲಾಗುತ್ತಿದೆ. ಭಾರತ್ ಮಾಲಾ ಯೋಜನೆಯ ಮೂಲಕ ದೇಶಾದ್ಯಂತ ಸಂಪರ್ಕ ವ್ಯವಸ್ಥೆಯನ್ನು ಬಲಪಡಿಸಲಾಗಿದೆ ಎಂದರು.