ಶಿವಮೊಗ್ಗ: ಕಾಂಗ್ರೆಸ್ ಸರಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಆಡಳಿತವು ಕರ್ನಾಟಕವನ್ನು ಆರ್ಥಿಕ ದಿವಾಳಿಯತ್ತ ಕೊಂಡೊಯ್ಯುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಆರೋಪಿಸಿದ್ದಾರೆ.
ಶಿವಮೊಗ್ಗದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರಕಾರವು ಅನ್ನಭಾಗ್ಯ ಯೋಜನೆಗೆ ಕೊಟ್ಟ ಭರವಸೆಯನ್ನೇ ಕಿತ್ತುಕೊಳ್ಳುತ್ತಿದೆ ಎಂದು ಕಿಡಿಕಾರಿದರು. “10 ಕೆ.ಜಿ. ಅಕ್ಕಿ ಕೊಡುವುದಾಗಿ ಹೇಳಿದ್ದ ಸರಕಾರ, ಆನಂತರ 5 ಕೆ.ಜಿ.ಗೆ ಇಳಿಸಿತು. ಈಗ ಅದನ್ನೂ ಸಂಪೂರ್ಣ ನಿಲ್ಲಿಸುತ್ತಿದೆ,” ಎಂದು ಆಕ್ಷೇಪ ವ್ಯಕ್ತಪಡಿಸಿದರು.
ರಾಜ್ಯ ಸರಕಾರಕ್ಕೆ ಹಣ ಕ್ರೋಡೀಕರಿಸಲು ಸಾಧ್ಯವಾಗದೆ, ಸರಕಾರಿ ನೌಕರರಿಗೆ ಸಂಬಳ ನೀಡಲು ಕೂಡ ತೊಡಕಾಗಿದೆ ಎಂದ ಅವರು, ಅಭಿವೃದ್ಧಿಗೆ ಹಣವಿಲ್ಲದ ಕಾರಣ ಆಡಳಿತ ಪಕ್ಷದ ಶಾಸಕರೇ ಬೀದಿಗಿಳಿದು ಹೋರಾಟ ನಡೆಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ವಿವರಿಸಿದರು. “ಮಹಾನಗರ ಪಾಲಿಕೆ, ಲಾರಿ ಮಾಲೀಕರಿಗೆ ಮೂರ್ನಾಲ್ಕು ತಿಂಗಳಿಂದ ಬಾಡಿಗೆ ಕೊಡದೆ, ಅವರೂ ಹೋರಾಟಕ್ಕೆ ಮುಂದಾಗಿದ್ದಾರೆ,” ಎಂದರು.
ಸಿದ್ದರಾಮಯ್ಯ ಸರಕಾರ ಸಂಪೂರ್ಣ ನಿಷ್ಕ್ರಿಯವಾಗಿದೆ ಎಂದು ಟೀಕಿಸಿದ ವಿಜಯೇಂದ್ರ, ಮುಖ್ಯಮಂತ್ರಿಗಳು ಆಡಳಿತದ ಮೇಲಿನ ಹಿಡಿತ ಕಳೆದುಕೊಂಡಿದ್ದಾರೆ ಎಂದರು. “ಕಾಂಗ್ರೆಸ್ ಶಾಸಕರೇ ಸಿಎಂ ಮೇಲಿನ ವಿಶ್ವಾಸ ಕಳೆದುಕೊಂಡಿದ್ದಾರೆ. ಗ್ಯಾರಂಟಿ ಯೋಜನೆಗಳ ಸಾಗಾಟ ವೆಚ್ಚಕ್ಕೂ ಹಣವಿಲ್ಲ. ಇದನ್ನು ಸ್ವತಃ ರಾಯರೆಡ್ಡಿಯವರೇ ಒಪ್ಪಿಕೊಂಡಿದ್ದಾರೆ,” ಎಂದು ತಿಳಿಸಿದರು.
ಆರ್‍ಸಿಬಿ ಆಘಾತ: ಸಿಎಂ, ಡಿಸಿಎಂಗೆ ಟೀಕೆ
ಆರ್‍ಸಿಬಿ ವಿಜಯೋತ್ಸವದ ವೇಳೆ ಕಾಲ್ತುಳಿತದಿಂದ 11 ಮಂದಿ ಸಾವನ್ನಪ್ಪಿದ ಘಟನೆಗೆ ಸಂಬಂಧಿಸಿದ ಪ್ರಶ್ನೆಗೆ ಉತ್ತರಿಸಿದ ವಿಜಯೇಂದ್ರ, “ಸ್ವತಃ ಸಿಎಂ ಸಿದ್ದರಾಮಯ್ಯ ಟ್ವೀಟ್ ಮೂಲಕ ಆರ್‍ಸಿಬಿ ಸನ್ಮಾನಕ್ಕೆ ಜನರನ್ನು ಕರೆದಿದ್ದರು. ಆದರೆ ಈ ದುರಂತಕ್ಕೆ ಆರ್‍ಸಿಬಿ ಮತ್ತು ಕೆಎಸ್‍ಎಸಿ ಮೇಲೆ ದೋಷ ಹೊರಿಸುವ ಷಡ್ಯಂತ್ರ ನಡೆದಿದೆ,” ಎಂದು ಆರೋಪಿಸಿದರು. ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರ ಪ್ರತಿಷ್ಠೆ, ಪ್ರಚಾರದ ಚಟದಿಂದ ಈ ದುರ್ಘಟನೆ ಸಂಭವಿಸಿದೆ ಎಂದು ತೀವ್ರ ಟೀಕೆ ವ್ಯಕ್ತಪಡಿಸಿದರು.