ಬೆಂಗಳೂರು: ಕರ್ನಾಟಕವು ಡ್ರಗ್ಸ್‌ನ ಸ್ವರ್ಗವಾಗುತ್ತಿದೆ ಎಂದು ವಿಧಾನಪರಿಷತ್‌ನ ವಿಪಕ್ಷ ಮುಖ್ಯ ಸಚೇತಕ ಎನ್. ರವಿಕುಮಾರ್ ಗಂಭೀರ ಆರೋಪ ಮಾಡಿದ್ದಾರೆ. ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಮಂಗಳವಾರ ಆಯೋಜಿಸಿದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, “ಕರ್ನಾಟಕದಲ್ಲಿ ಡ್ರಗ್ಸ್ ವ್ಯಾಪಕವಾಗಿ ರಾಜಾರೋಷವಾಗಿ ಸಿಗುತ್ತಿದೆ. ಕಲಬುರ್ಗಿ, ಬೆಂಗಳೂರು, ಮಂಗಳೂರು ಸೇರಿದಂತೆ ಎಲ್ಲ ಜಿಲ್ಲೆಗಳಲ್ಲಿ ಈ ಸಮಸ್ಯೆ ಉಲ್ಬಣಗೊಂಡಿದೆ. ಈಶಾನ್ಯ ರಾಜ್ಯಗಳು ಮತ್ತು ಪಂಜಾಬ್‌ನಂತೆ ಕರ್ನಾಟಕವೂ ಡ್ರಗ್ಸ್‌ನಿಂದ ಯುವ ಜನತೆಯ ಜೀವನವನ್ನು ಹಾಳುಮಾಡುವ ದಾರಿಯಲ್ಲಿದೆ” ಎಂದು ಖೇದ ವ್ಯಕ್ತಪಡಿಸಿದರು.
ಕಾಂಗ್ರೆಸ್ ನಾಯಕರ ವಿರುದ್ಧ ಆಕ್ಷೇಪ: ಕಲಬುರ್ಗಿಯಲ್ಲಿ ಕಾಂಗ್ರೆಸ್‌ನ ಗುಲ್ಬರ್ಗ ದಕ್ಷಿಣ ಬ್ಲಾಕ್ ಅಧ್ಯಕ್ಷ ಲಿಂಗರಾಜ್ ಕಣ್ಣಿ ಡ್ರಗ್ಸ್ ವ್ಯವಹಾರದಲ್ಲಿ ಬಂಧಿತನಾಗಿರುವುದನ್ನು ಉಲ್ಲೇಖಿಸಿದ ರವಿಕುಮಾರ್, “ಈತನಿಗೆ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಶಾಸಕ ಅಲ್ಲಮಪ್ರಭು ಪಾಟೀಲ್ ಆಪ್ತರಾಗಿದ್ದಾರೆ. ಇವರು ವರ್ಷಗಟ್ಟಲೆ ಡ್ರಗ್ಸ್ ವ್ಯಾಪಾರದಲ್ಲಿ ತೊಡಗಿದ್ದರೂ ಕ್ರಮ ಕೈಗೊಂಡಿಲ್ಲ” ಎಂದು ಆರೋಪಿಸಿದರು. ಇದೇ ರೀತಿ, ಮಲ್ಲಿನಾಥ್ ಸೊಂತ್‌ನ ಮಗನೂ ಡ್ರಗ್ಸ್ ಸಾಗಾಟದಲ್ಲಿ ಭಾಗಿಯಾಗಿದ್ದು, ಇವನೂ ಕಾಂಗ್ರೆಸ್ ಕಾರ್ಯಕರ್ತ ಎಂದು ದೂರಿದರು. “ಪ್ರಿಯಾಂಕ್ ಖರ್ಗೆಯ ಸುತ್ತಲಿನ ಶಿಷ್ಯರ ಗುಣಮಟ್ಟ ಏನು? ಕಲಬುರ್ಗಿಯಲ್ಲಿ 50 ವರ್ಷಗಳಿಂದ ಖರ್ಗೆ ಕುಟುಂಬದ ಆಡಳಿತವಿದ್ದರೂ ಡ್ರಗ್ಸ್ ಸಮಸ್ಯೆ ಶೂನ್ಯವಾಗಿಲ್ಲ” ಎಂದು ಪ್ರಶ್ನಿಸಿದರು.
ಪೊಲೀಸರ ನಿಷ್ಕ್ರಿಯತೆಗೆ ಟೀಕೆ: ಲಿಂಗರಾಜ್ ಕಣ್ಣಿಯನ್ನು ಮಹಾರಾಷ್ಟ್ರ ಪೊಲೀಸರು ಬಂಧಿಸಿದ್ದಾರೆಯೇ ಹೊರತು ಕರ್ನಾಟಕ ಪೊಲೀಸರು ಅಲ್ಲ ಎಂದು ರವಿಕುಮಾರ್ ಆಕ್ಷೇಪಿಸಿದರು. “ಕರ್ನಾಟಕದ ಪೊಲೀಸರು ಈ ವಿಷಯದಲ್ಲಿ ನಿಷ್ಕ್ರಿಯರಾಗಿದ್ದಾರೆ. ಪ್ರಿಯಾಂಕ್ ಖರ್ಗೆ ಮತ್ತು ಅಲ್ಲಮಪ್ರಭು ಪಾಟೀಲ್ ಇವರನ್ನು ರಕ್ಷಿಸಿದ್ದಾರೆ ಎಂಬ ಸಂಶಯವಿದೆ. ಗೃಹ ಇಲಾಖೆ ಈ ಬಗ್ಗೆ ಕ್ರಮ ಕೈಗೊಳ್ಳಬೇಕು” ಎಂದು ಒತ್ತಾಯಿಸಿದರು. ಜೊತೆಗೆ, ಪ್ರಿಯಾಂಕ್ ಖರ್ಗೆ ತಮ್ಮ ಇಲಾಖೆಯನ್ನು ಬಿಟ್ಟು ದೇಶದ ಎಲ್ಲ ವಿಷಯಗಳ ಬಗ್ಗೆ ಮಾತನಾಡುವುದನ್ನು ವ್ಯಂಗ್ಯವಾಗಿ ಟೀಕಿಸಿದರು.
ಕೈಗಾರಿಕೆಗಳ ಸ್ಥಳಾಂತರಕ್ಕೆ ಪ್ರಶ್ನೆ: ಕರ್ನಾಟಕದಿಂದ ಟೊಯೊಟೊ ಇಲೆಕ್ಟ್ರಿಕಲ್ ಕಾರ್‌ನ 25 ಸಾವಿರ ಕೋಟಿ ಹೂಡಿಕೆಯ ಕೈಗಾರಿಕೆ ಮಹಾರಾಷ್ಟ್ರಕ್ಕೆ, ಇನ್ಫೋಸಿಸ್ ಶಾಖೆ ಹೈದರಾಬಾದ್‌ಗೆ, ಮತ್ತು ಆಪಲ್ ಫಾಕ್ಸ್‌ಕಾನ್ ಬ್ರ್ಯಾಂಡ್ ತಮಿಳುನಾಡಿಗೆ ಸ್ಥಳಾಂತರಗೊಂಡಿರುವುದನ್ನು ಉಲ್ಲೇಖಿಸಿದ ರವಿಕುಮಾರ್, “ಇದಕ್ಕೆ ಕಾರಣವೇನು? ಪ್ರಿಯಾಂಕ್ ಖರ್ಗೆ ಇದಕ್ಕೆ ಉತ್ತರಿಸಬೇಕು” ಎಂದು ಆಗ್ರಹಿಸಿದರು. ಹಿರಿಯ ಕೈಗಾರಿಕೋದ್ಯಮಿ ಮೋಹನ್‌ದಾಸ್ ಪೈ ಅವರು ಈ ಸರ್ಕಾರವನ್ನು ಭ್ರಷ್ಟ ಎಂದು ಕರೆದಿರುವುದನ್ನು ಗಮನಕ್ಕೆ ತಂದರು.
ಸಿಎಂ-ಡಿಸಿಎಂಗೆ ಟೀಕೆ: ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ರಸ್ತೆ ನಿರ್ಮಾಣ ಕಾರ್ಯವನ್ನು ಮೆಚ್ಚಿದ ರವಿಕುಮಾರ್, “ಗಡ್ಕರಿ ಅವರು ಸಿಗಂದೂರು ಸೇತುವೆಯನ್ನು ಕಡಿಮೆ ಅವಧಿಯಲ್ಲಿ ಪೂರ್ಣಗೊಳಿಸಿದ್ದಾರೆ. ಕಾಂಗ್ರೆಸ್ ಆಡಳಿತದಲ್ಲಿ ದಿನಕ್ಕೆ 7-8 ಕಿಮೀ ಹೆದ್ದಾರಿ ಕಾಮಗಾರಿ ನಡೆಯುತ್ತಿತ್ತು, ಈಗ ಅದು 34 ಕಿಮೀಗೆ ಏರಿದೆ. ಆದರೆ, ಗಡ್ಕರಿ ಕರ್ನಾಟಕಕ್ಕೆ ಬಂದಾಗ ಸಿಎಂ ಮತ್ತು ಡಿಸಿಎಂ ಕಾರ್ಯಕ್ರಮಕ್ಕೆ ಹಾಜರಾಗದಿರುವುದು ಕುಂಟುನೆಪ. ಇದು ಪಲಾಯನವಾದ” ಎಂದು ಟೀಕಿಸಿದರು. ಕರ್ನಾಟಕಕ್ಕೆ 5 ಲಕ್ಷ ಕೋಟಿ ಹೂಡಿಕೆಯ ಭರವಸೆಯನ್ನು ಗಡ್ಕರಿ ನೀಡಿದ್ದಾರೆ ಎಂದು ಉಲ್ಲೇಖಿಸಿದರು.
ಗೋಷ್ಠಿಯಲ್ಲಿ ಬಿಜೆಪಿ ರಾಜ್ಯ ವಕ್ತಾರರಾದ ಹರಿಪ್ರಕಾಶ್ ಕೋಣೆಮನೆ ಮತ್ತು ಅಶೋಕ್ ಗೌಡ ಉಪಸ್ಥಿತರಿದ್ದರು.