ಸರ್ವಪಕ್ಷದಿಂದ ಸಚಿವ ಸಂತೋಷ್ ಲಾಡ್‌ಗೆ ಮೆಚ್ಚುಗೆ
ಗಿಗ್ ಕಾರ್ಮಿಕರ ಜೀವನ ಭದ್ರತೆಗೆ ಐತಿಹಾಸಿಕ ಕ್ರಮ
ಬೆಂಗಳೂರು: ಕರ್ನಾಟಕ ವೇದಿಕೆ ಆಧಾರಿತ ಗಿಗ್ ಕಾರ್ಮಿಕರ ಸಾಮಾಜಿಕ ಭದ್ರತೆ ಮತ್ತು ಕ್ಷೇಮಾಭಿವೃದ್ಧಿ ವಿಧೇಯಕ-2025ಕ್ಕೆ ವಿಧಾನಸಭೆಯಲ್ಲಿ ಮಂಗಳವಾರ ಸರ್ವಾನುಮತದ ಅಂಗೀಕಾರ ದೊರೆತಿದೆ. ಈ ಐತಿಹಾಸಿಕ ವಿಧೇಯಕವನ್ನು ಕಾರ್ಮಿಕ ಸಚಿವ ಸಂತೋಷ್ ಎಸ್. ಲಾಡ್ ಮಂಡಿಸಿದ್ದು, ಗಿಗ್ ಕಾರ್ಮಿಕರ ಕಲ್ಯಾಣಕ್ಕಾಗಿ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಕ್ರಮಕ್ಕೆ ಸರ್ವಪಕ್ಷದ ನಾಯಕರಿಂದ ಶ್ಲಾಘನೆ ವ್ಯಕ್ತವಾಗಿದೆ.
ವಿಧೇಯಕವನ್ನು ಮಂಡಿಸಿದ ಸಚಿವ ಲಾಡ್, ಇದರ ಪ್ರಮುಖ ಅಂಶಗಳಾದ ಮಂಡಳಿ ರಚನೆ, ಸೆಸ್ ಸಂಗ್ರಹ, ಗಿಗ್ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ, ಆರೋಗ್ಯ, ಮತ್ತು ಜೀವನ ಕಲ್ಯಾಣಕ್ಕೆ ಸಂಬಂಧಿಸಿದ ಸೌಲಭ್ಯಗಳನ್ನು ಸದನದಲ್ಲಿ ವಿವರಿಸಿದರು. “ಗಿಗ್ ಎಕಾನಮಿ ರಾಜ್ಯದಲ್ಲಿ ವೇಗವಾಗಿ ಬೆಳೆಯುತ್ತಿದ್ದು, ಸುಮಾರು 4 ಲಕ್ಷಕ್ಕೂ ಅಧಿಕ ಕಾರ್ಮಿಕರು ಈ ಕ್ಷೇತ್ರದಲ್ಲಿ ತೊಡಗಿಕೊಂಡಿದ್ದಾರೆ. ಅವರ ಆರೋಗ್ಯ, ಜೀವನ ಭದ್ರತೆ, ಮತ್ತು ಕೆಲಸದ ಕಲ್ಯಾಣವನ್ನು ಗಮನದಲ್ಲಿಟ್ಟು ಈ ವಿಧೇಯಕವನ್ನು ರೂಪಿಸಲಾಗಿದೆ. ಇದಕ್ಕಾಗಿ ಪಾಲುದಾರರು, ಉದ್ಯಮಿಗಳೊಂದಿಗೆ ವಿವಿಧ ಸಭೆಗಳು ಮತ್ತು ಸಮಾಲೋಚನೆಗಳನ್ನು ನಡೆಸಲಾಗಿದೆ. ಈ ಹಿಂದೆ ಸುಗ್ರೀವಾಜ್ಞೆಯ ಮೂಲಕ ಜಾರಿಗೊಳಿಸಲಾಗಿತ್ತು, ಈಗ ವಿಧೇಯಕವಾಗಿ ಮಂಡಿಸಲಾಗಿದೆ” ಎಂದು ಅವರು ತಿಳಿಸಿದರು.
ಸರ್ವಪಕ್ಷದಿಂದ ಪ್ರಶಂಸೆ
ವಿಧೇಯಕದ ಕುರಿತ ಚರ್ಚೆಯಲ್ಲಿ ಆಡಳಿತ ಮತ್ತು ವಿರೋಧ ಪಕ್ಷದ ನಾಯಕರು ಭಾಗವಹಿಸಿ, ಇದನ್ನು ಐತಿಹಾಸಿಕ ಮತ್ತು ಮಹತ್ವಾಕಾಂಕ್ಷಿ ಕ್ರಮ ಎಂದು ಬಣ್ಣಿಸಿದರು. ಶಾಸಕರಾದ ಎಸ್. ಸುರೇಶ್ ಕುಮಾರ್, “ಗಿಗ್ ಕಾರ್ಮಿಕರ ಹಿತ ಕಾಪಾಡಲು ಈ ವಿಧೇಯಕ ಮಹತ್ವದ್ದಾಗಿದೆ. ಮನೆ ಬಾಗಿಲಿಗೆ ಸೇವೆ ಒದಗಿಸುವ ಕಾರ್ಮಿಕರಿಗೆ ಸರ್ಕಾರ ಜೀವನ ಭದ್ರತೆ ಒದಗಿಸುತ್ತಿದೆ. ಹೊರಗುತ್ತಿಗೆ ಕಾರ್ಮಿಕರನ್ನೂ ಈ ಯೋಜನೆಯಡಿ ಸೇರಿಸಬೇಕು” ಎಂದು ಸಲಹೆ ನೀಡಿದರು.
ಬಿಜೆಪಿಯ ಶಾಸಕ ಅರವಿಂದ ಬೆಲ್ಲದ್, “ಗಿಗ್ ಕಾರ್ಮಿಕರ ಕ್ಷೇಮಾಭಿವೃದ್ಧಿಗೆ ರಾಜ್ಯ ಸರ್ಕಾರ ಈ ವಿಧೇಯಕದ ಮೂಲಕ ಮೇಲ್ಪಂಕ್ತಿಯಲ್ಲಿ ಸ್ಥಾನ ಪಡೆದಿದೆ. ಇದು ಒಳ್ಳೆಯ ಕಾನೂನಾಗಲಿದೆ” ಎಂದರು. ಸಿಕೆ ರಾಮಮೂರ್ತಿ, “ಸಚಿವ ಲಾಡ್ ಗಿಗ್ ಕಾರ್ಮಿಕರ ಕಲ್ಯಾಣಕ್ಕಾಗಿ ಶ್ಲಾಘನೀಯ ಕೆಲಸ ಮಾಡಿದ್ದಾರೆ. ಇವರಿಗೆ ಇಎಸ್‌ಐ ಆಸ್ಪತ್ರೆಗಳಲ್ಲಿ ಚಿಕಿತ್ಸೆ ದೊರೆಯುವಂತೆ ಕ್ರಮ ಕೈಗೊಳ್ಳಬೇಕು” ಎಂದು ಒತ್ತಾಯಿಸಿದರು. ಡಾ. ಸಿಎನ್ ಅಶ್ವತ್ಥ್ ನಾರಾಯಣ, “ಇದು ಒಳ್ಳೆಯ ಮಸೂದೆ” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಶಾಸಕ ಎನ್.ಎಚ್. ಕೋನರೆಡ್ಡಿ, ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿ ಗಿಗ್ ಕಾರ್ಮಿಕರ ಸಮಸ್ಯೆಗಳ ಕುರಿತು ಗಮನ ಸೆಳೆದಿದ್ದನ್ನು ಉಲ್ಲೇಖಿಸಿದರು. ಶಾಸಕ ಶಿವಲಿಂಗೇಗೌಡ, “ಸಚಿವ ಲಾಡ್ ಇತ್ತೀಚೆಗೆ ಕಾರ್ಮಿಕರ ಮಕ್ಕಳಿಗೆ ವಸತಿ ಶಾಲೆ ತೆರೆಯಲು ಮುಂದಾಗಿದ್ದಾರೆ. ಈ ವಿಧೇಯಕ ಗಿಗ್ ಕಾರ್ಮಿಕರಿಗೆ ಆತ್ಮಸ್ಥೈರ್ಯ ತುಂಬುವ ಕ್ರಮವಾಗಿದೆ” ಎಂದು ಹೇಳಿದರು. ಇತರ ಶಾಸಕರಾದ ಉಮಾನಾಥ್ ಕೋಟ್ಯಾನ್, ಧೀರಜ್ ಮುನಿರಾಜು, ಡಾ. ಎನ್. ಶ್ರೀನಿವಾಸ್, ಸಿಎನ್ ಬಾಲಕೃಷ್ಣ, ಚೆನ್ನಬಸಪ್ಪ, ಮತ್ತು ಕೆ.ವೈ. ನಂಜೇಗೌಡ ಕೂಡ ವಿಧೇಯಕವನ್ನು ಸ್ವಾಗತಿಸಿದರು.
ಸಲಹೆಗಳ ಪರಿಗಣನೆಗೆ ಭರವಸೆ
ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸಿದ ಸಚಿವ ಲಾಡ್, “ವಿಧೇಯಕಕ್ಕೆ ಸಂಬಂಧಿಸಿದಂತೆ ಎಲ್ಲರ ಸಲಹೆಗಳನ್ನು ಪರಿಗಣಿಸಲಾಗುವುದು. ಭಾಗೀದಾರರೊಂದಿಗೆ ಮತ್ತಷ್ಟು ಚರ್ಚೆ ನಡೆಸಲಾಗುವುದು. ಹೊರಗುತ್ತಿಗೆ ಕಾರ್ಮಿಕರನ್ನು ಈ ವಿಧೇಯಕದಲ್ಲಿ ಸೇರಿಸಲು ಸಾಧ್ಯವಿಲ್ಲವಾದರೂ, ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಪ್ರತ್ಯೇಕ ಸೊಸೈಟಿ ರಚಿಸಲು ಕ್ರಮ ಕೈಗೊಳ್ಳಲಾಗುವುದು” ಎಂದು ಭರವಸೆ ನೀಡಿದರು. ಚರ್ಚೆಯಲ್ಲಿ ಭಾಗವಹಿಸಿ ಸಲಹೆ ನೀಡಿದ ಎಲ್ಲರಿಗೂ ಧನ್ಯವಾದ ಸಲ್ಲಿಸಿದರು.
ಈ ವಿಧೇಯಕವು ಗಿಗ್ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ, ಆರೋಗ್ಯ ಸೇವೆ, ಮತ್ತು ಕೆಲಸದ ಕಲ್ಯಾಣವನ್ನು ಖಾತರಿಪಡಿಸುವ ಮೂಲಕ ರಾಜ್ಯದ ಗಿಗ್ ಎಕಾನಮಿಯಲ್ಲಿ ಕಾರ್ಯನಿರ್ವಹಿಸುವ ಲಕ್ಷಾಂತರ ಕಾರ್ಮಿಕರಿಗೆ ಆರ್ಥಿಕ ಮತ್ತು ಸಾಮಾಜಿಕ ಸ್ಥಿರತೆಯನ್ನು ಒದಗಿಸಲಿದೆ.