ಕಲಬುರಗಿ: ಅಕ್ರಮ ಚಟುವಟಿಕೆಗಳ ವಿರುದ್ಧ ಸರ್ಕಾರ ಶೂನ್ಯ ಸಹಿಷ್ಣುತೆ ನೀತಿಯನ್ನು ಅನುಸರಿಸುತ್ತಿದ್ದು, ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಕಲಬುರಗಿ ಪೊಲೀಸ್ ಕಮೀಷನರ್ ಕಚೇರಿಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದ ಸಚಿವರು, ಆನ್‌ಲೈನ್ ದಂಧೆ, ಬೆಟ್ಟಿಂಗ್, ಮಟ್ಕಾ, ಇಸ್ಪೀಟ್, ಗಾಂಜಾ, ಡ್ರಗ್ಸ್ ಸೇರಿದಂತೆ ಕಾನೂನುಬಾಹಿರ ಚಟುವಟಿಕೆಗಳನ್ನು ಕಟ್ಟುನಿಟ್ಟಾಗಿ ನಿಗ್ರಹಿಸುವಂತೆ ನಿರ್ದೇಶಿಸಿದರು. ಕೇಂದ್ರ ಕಾರಾಗೃಹದಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳ ಬಗ್ಗೆ ವರದಿಗಳಿದ್ದು, ನಗರ ಪೊಲೀಸ್ ಆಯುಕ್ತ ಡಾ. ಶರಣಪ್ಪ ಢಗೆ ಮತ್ತು ಜಿಲ್ಲಾ ಎಸ್‌ಪಿ ಶ್ರೀನಿವಾಸಲು ಅಡ್ಡೂರು ಅವರಿಗೆ ಕಾರಾಗೃಹಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲು ಸೂಚನೆ ನೀಡಿದರು.
ಗ್ರಾಮೀಣ ಭಾಗದ ಜನರು ಪೊಲೀಸ್ ಠಾಣೆಗೆ ಸಮಸ್ಯೆಗಳೊಂದಿಗೆ ಬಂದಾಗ ಸೌಜನ್ಯದಿಂದ ವರ್ತಿಸುವಂತೆ ಸಲಹೆ ನೀಡಿದ ಸಚಿವರು, ಪೋಕ್ಸೋ ಸೇರಿದಂತೆ ಗಂಭೀರ ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್‌ನ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಒತ್ತಾಯಿಸಿದರು. ಸಿವಿಲ್ ಸ್ವರೂಪದ ಪ್ರಕರಣಗಳಲ್ಲಿ ಪೊಲೀಸರು ಮಧ್ಯವರ್ತಿಗಳಂತೆ ವರ್ತಿಸುವ ಬಗ್ಗೆ ದೂರುಗಳಿರುವುದರಿಂದ, ಇಂತಹ ಪ್ರಕರಣಗಳಲ್ಲಿ ಹಸ್ತಕ್ಷೇಪ ಮಾಡದಂತೆ ಎಚ್ಚರಿಕೆ ನೀಡಿದರು.
ಸರ್ಕಾರದ ಕಾರ್ಯಕ್ರಮಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ತಪ್ಪು ಮಾಹಿತಿ ಹರಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆಯೂ ಸಚಿವರು ಸೂಚಿಸಿದರು. ಇತ್ತೀಚೆಗೆ ಕಲಬುರಗಿಯಲ್ಲಿ ನಡೆದ ಬಂಗಾರದ ಅಂಗಡಿ ದರೋಡೆ ಮತ್ತು ಅಕ್ರಮ ನೇಮಕಾತಿ ಪ್ರಕರಣಗಳನ್ನು ಬೇಧಿಸಿದ ಪೊಲೀಸರ ಕಾರ್ಯಕ್ಷಮತೆಯನ್ನು ಶ್ಲಾಘಿಸಿದ ಅವರು, ದಕ್ಷತೆಯಿಂದ ಕಾರ್ಯನಿರ್ವಹಿಸಿದಾಗ ಜಿಲ್ಲೆಗೆ ಕೀರ್ತಿ ಬರುತ್ತದೆ ಎಂದರು.
ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಮಾತನಾಡಿ, ಗ್ರಾಮೀಣ ಭಾಗದಲ್ಲಿ ರಾತ್ರಿಯ ಗಸ್ತು ಹೆಚ್ಚಿಸಬೇಕು, ಗುಪ್ತಚರ ಇಲಾಖೆಯನ್ನು ಬಲಪಡಿಸಬೇಕು ಮತ್ತು ಕಾನೂನು ಸುವ್ಯವಸ್ಥೆ ಕಾಪಾಡಬೇಕು ಎಂದರು. ರಸ್ತೆಯ ಬದಿಯಲ್ಲಿ ವಾಹನ ಸವಾರರಿಂದ ಹಣ ವಸೂಲಿ ಮಾಡುವ ಬಗ್ಗೆ ದೂರುಗಳಿವೆ ಎಂದು ಗಮನಸೆಳೆದ ಅವರು, ಇದಕ್ಕೆ ಕಡಿವಾಣ ಹಾಕುವಂತೆ ಸೂಚಿಸಿದರು. ಮೈಕ್ರೋ ಫೈನಾನ್ಸ್ ಸಿಬ್ಬಂದಿಗಳ ಕಿರುಕುಳ ಮತ್ತು ವಿದ್ಯಾರ್ಥಿಗಳಿಗೆ ಹೆಚ್ಚಿನ ಬಡ್ಡಿಯಲ್ಲಿ ಸಾಲ ನೀಡಿ ಕಿರುಕುಳ ನೀಡುವವರ ವಿರುದ್ಧ ಕಾನೂನು ಕ್ರಮಕ್ಕೆ ಸೂಚನೆ ನೀಡಿದರು.
ಶಾಸಕ ಎಂ.ವೈ. ಪಾಟೀಲ್ ಅವರು ಗಾಣಗಾಪುರ ದತ್ತಾತ್ರೇಯ ದೇವಸ್ಥಾನದ ಬಳಿ ವ್ಯವಸ್ಥಿತ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸುವಂತೆ ತಿಳಿಸಿದರೆ, ಶಾಸಕ ಅಲ್ಲಮಪ್ರಭು ಪಾಟೀಲ್ ಅವರು ಎಸ್.ಬಿ. ಕಾಲೇಜ್ ಮತ್ತು ಕೇಂದ್ರ ಬಸ್ ನಿಲ್ದಾಣದ ಬಳಿಯ ಟ್ರಾಫಿಕ್ ಜಾಮ್‌ಗೆ ಕ್ರಮಕ್ಕೆ ಸೂಚಿಸಿದರು.
ನಗರ ಪೊಲೀಸ್ ಆಯುಕ್ತ ಡಾ. ಶರಣಪ್ಪ ಢಗೆ ಮತ್ತು ಎಸ್‌ಪಿ ಶ್ರೀನಿವಾಸಲು ಅವರು ತಮ್ಮ ವ್ಯಾಪ್ತಿಯಲ್ಲಿ ಕೈಗೊಂಡ ಕಾರ್ಯಾಚರಣೆಗಳು, ಬಂದೋಬಸ್ತ್ ಮತ್ತು ಅಪರಾಧ ಪ್ರಕರಣಗಳ ಬೇಧನೆಯ ಬಗ್ಗೆ ಸಚಿವರಿಗೆ ಮಾಹಿತಿ ನೀಡಿದರು. ರಾಷ್ಟ್ರಪತಿ ಚೌಕ್, ವಲ್ಲಭಭಾಯಿ ಚೌಕ್, ಸೇಡಂ ವೃತ್ತ, ಹುಮಾನಾಬಾದ್ ರಿಂಗ್ ರಸ್ತೆ ವೃತ್ತ ಸೇರಿದಂತೆ ಪ್ರಮುಖ ವೃತ್ತಗಳಲ್ಲಿ ಟ್ರಾಫಿಕ್ ಲೈಟ್ ಅಳವಡಿಕೆಗೆ ಇಲಾಖೆಯಿಂದ ಪ್ರಸ್ತಾವನೆ ಸಲ್ಲಿಕೆಯಾಯಿತು.
ಸಭೆಯಲ್ಲಿ ಶಾಸಕರಾದ ಎಂ.ವೈ. ಪಾಟೀಲ್, ಅಲ್ಲಮಪ್ರಭು ಪಾಟೀಲ್, ಅವಿನಾಶ ಜಾಧವ್, ಎಂ.ಎಲ್.ಸಿ. ಜಗದೇವ ಗುತ್ತೇದಾರ್, ಡಿಐಜಿ ಶಂತನು ಸಿನ್ಹಾ, ಡಿಸಿಪಿ ಕನ್ನಿಕಾ ಸಿಕ್ರೀವಾಲ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.