ರಾಜ್ಯದಲ್ಲಿ ಅರಣ್ಯ ಪ್ರದೇಶವನ್ನು ವಿಸ್ತರಿಸಿ, ಪರಿಸರವನ್ನು ಉಳಿಸಿ ಬೆಳೆಸುವಂತೆ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಸಾರ್ವಜನಿಕರಿಗೆ ಮನವಿ ಮಾಡಿದರು. “ದೇಶದಲ್ಲಿ ಅರಣ್ಯ ಪ್ರದೇಶವನ್ನು ಹೆಚ್ಚಿಸಬೇಕು. ರಸ್ತೆ ಬದಿಯಲ್ಲಿ ಸಸಿಗಳನ್ನು ನೆಡುವುದಷ್ಟೇ ಅಲ್ಲ, ಅವುಗಳ ರಕ್ಷಣೆಗೂ ಆದ್ಯತೆ ನೀಡಬೇಕು. ಇದಕ್ಕಾಗಿ ಸಾರ್ವಜನಿಕರು ಸರ್ಕಾರದೊಂದಿಗೆ ಕೈಜೋಡಿಸಬೇಕು” ಎಂದು ಅವರು ಒತ್ತಿ ಹೇಳಿದರು.
ಕಲಬುರಗಿಯ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಪಾಲಿಟೆಕ್ನಿಕ್ ಕಾಲೇಜು ಆವರಣದಲ್ಲಿ ನಡೆದ ‘ಮನಮಹೋತ್ಸವ 2025’, ‘ಹಸಿರುಪಥ’, ಮತ್ತು ‘ಕಲಬುರಗಿ ಹಸಿರು ಹೆಜ್ಜೆ’ ಕಾರ್ಯಕ್ರಮದಲ್ಲಿ ಸಸಿಗೆ ನೀರು ಎರೆಯುವ ಮೂಲಕ ಉದ್ಘಾಟನೆಗೊಳಿಸಿ, ಖರ್ಗೆ ಮಾತನಾಡಿದರು.
ತಾವು ಉಸ್ತುವಾರಿ ಸಚಿವರಾಗಿದ್ದಾಗ ಅರಣ್ಯ ವಿಸ್ತರಣೆಗೆ ಮಾಡಿದ ಕಾರ್ಯಗಳನ್ನು ಸ್ಮರಿಸಿದ ಖರ್ಗೆ, “ಆಗ ಜನರು ರಸ್ತೆ ಬದಿಯ ಗಿಡಗಳನ್ನು ಕಡಿದು ಕೃಷಿ ಪರಿಕರಗಳಿಗೆ ಬಳಸುತ್ತಿದ್ದರು. ಒಣಗಿದ ಅಥವಾ ಕೆಲಸಕ್ಕೆ ಅನುಕೂಲವಾಗದ ಮರಗಳನ್ನು ಕಡಿಯುವುದರಿಂದ ಸಮಸ್ಯೆಯಿಲ್ಲ, ಆದರೆ ಬೆಳೆದು ನಿಂತ ಮರಗಳನ್ನು ಕಡಿಯುವುದು ಅಪಾಯಕಾರಿ” ಎಂದು ಕಳವಳ ವ್ಯಕ್ತಪಡಿಸಿದರು.
“ಇತ್ತೀಚಿಗೆ ಹೃದಯಾಘಾತದಿಂದ, ವಿಶೇಷವಾಗಿ ಯುವಕರು ಸಾವನ್ನಪ್ಪುತ್ತಿದ್ದಾರೆ. ಹಾಸನ ಜಿಲ್ಲೆಯಲ್ಲಿ ಇಂತಹ ಪ್ರಕರಣಗಳು ಹೆಚ್ಚಾಗಿವೆ. ಸ್ವಚ್ಛ ಗಾಳಿ, ಬೆಳಕು, ಮತ್ತು ನೀರಿಗಾಗಿ ಉತ್ತಮ ಪರಿಸರ ಅಗತ್ಯ. ಇದಕ್ಕೆ ಎಲ್ಲರೂ ಕ್ರಮವಹಿಸಬೇಕು” ಎಂದು ಖರ್ಗೆ ಒತ್ತಾಯಿಸಿದರು.
ದೇಶದಲ್ಲಿ ಕೇವಲ 25.15% ಮತ್ತು ರಾಜ್ಯದಲ್ಲಿ 21% ಅರಣ್ಯ ಪ್ರದೇಶವಿದೆ ಎಂದು ಉಲ್ಲೇಖಿಸಿದ ಅವರು, “ಕನಿಷ್ಠ 33% ಅರಣ್ಯವಿದ್ದರೆ ಮಾತ್ರ ಜನರಿಗೆ ಸಾಕಷ್ಟು ಆಮ್ಲಜನಕ ಮತ್ತು ನೀರು ದೊರೆಯುತ್ತದೆ. ಶಾಲೆ, ಕಾಲೇಜು, ರಸ್ತೆ ಬದಿ, ಮತ್ತು ಜಮೀನುಗಳಲ್ಲಿ ಸಸಿಗಳನ್ನು ನೆಡಬೇಕು” ಎಂದು ಸಲಹೆ ನೀಡಿದರು.
“20 ಅಂಶದ ಕಾರ್ಯಕ್ರಮದಲ್ಲಿ ಅರಣ್ಯ ಅಭಿವೃದ್ಧಿಗೆ ಒತ್ತು ನೀಡಲಾಗಿತ್ತು, ಆದರೆ ಕೆಲವರು ಇದನ್ನು ಲೇವಡಿ ಮಾಡಿದರು. ರಾಜ್ಯದಲ್ಲಿ 20 ಲಕ್ಷ ಹೆಕ್ಟೇರ್ ಅರಣ್ಯ ನಾಶವಾಗಿದೆ. ಕರಾವಳಿಯಲ್ಲಿ ಗಿಡಗಳನ್ನು ಕಡಿದು ಜಮೀನು ಮಾಡಿಕೊಳ್ಳಲಾಗುತ್ತಿದೆ. ಇದು ಸರಿಯಾದ ಕ್ರಮವಲ್ಲ. ಪರಿಸರ ಕಾಪಾಡುವ ಜವಾಬ್ದಾರಿ ಎಲ್ಲರ ಮೇಲಿದೆ” ಎಂದು ಖರ್ಗೆ ಎಚ್ಚರಿಕೆ ನೀಡಿದರು.
ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ‘ಫಾರೆಸ್ಟ್ ಕನ್ಸರ್ವೇಶನ್ ಆಕ್ಟ್’ ಜಾರಿಗೆ ತಂದಿದ್ದರು ಎಂದು ನೆನಪಿಸಿದ ಅವರು, “ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಕಾಲದಲ್ಲಿ ‘ಫಾರೆಸ್ಟ್ ರೈಟ್ಸ್ ಆಕ್ಟ್’ ಮೂಲಕ ಅರಣ್ಯದಲ್ಲಿ ವಾಸಿಸುವ ಜನರಿಗೆ ಮರಗಳ ಉತ್ಪನ್ನಗಳನ್ನು ಜೀವನಾಧಾರಕ್ಕೆ ಬಳಸಲು ಅವಕಾಶ ಕಲ್ಪಿಸಲಾಯಿತು. ಆದರೆ, ಅರಣ್ಯ ಕಾನೂನುಗಳನ್ನು ಯಾವ ರಾಜ್ಯವೂ ಸರಿಯಾಗಿ ಪಾಲಿಸುತ್ತಿಲ್ಲ” ಎಂದು ವಿಷಾದಿಸಿದರು.
“ಪ್ರಧಾನಿ ಮೋದಿ ಸರ್ಕಾರ ಜಾರಿಗೆ ತಂದ ‘ಫಾರೆಸ್ಟ್ ಕನ್ಸರ್ವೇಶನ್ ಅಮೆಂಡ್‌ಮೆಂಟ್ ಆಕ್ಟ್’ ಕೂಡ ಪಾಲನೆಯಾಗುತ್ತಿಲ್ಲ. ಈ ರೀತಿ ಮುಂದುವರಿದರೆ, ಪರಿಸರ ಹಾಳಾದಾಗ ಸ್ವಚ್ಛ ಗಾಳಿ, ಬೆಳಕು, ಮತ್ತು ಆಹಾರ ದೊರಕದೆ ಜನರಿಗೆ ಅಪಾಯ ಎದುರಾಗಲಿದೆ” ಎಂದು ಎಚ್ಚರಿಕೆ ನೀಡಿದರು.
ರಾಜ್ಯ ಸರ್ಕಾರ ಈ ವರ್ಷ 3 ಕೋಟಿ ಸಸಿಗಳನ್ನು ನೆಡಲು ಗುರಿಯಿಟ್ಟಿದ್ದು, “2.5 ಕೋಟಿ ಸಸಿಗಳು ಬದುಕಿದರೆ ಅದೇ ದೊಡ್ಡ ಸಾಧನೆ” ಎಂದು ಖರ್ಗೆ ತಿಳಿಸಿದರು. “ನದಿ ತೀರದ ಡ್ಯಾಂಗಳ ಸುತ್ತಲೂ ಅರಣ್ಯ ಬೆಳೆಸಲು ಸರ್ಕಾರ ಕ್ರಮ ಕೈಗೊಳ್ಳಬೇಕು. ಸಾರ್ವಜನಿಕರು ತಮ್ಮ ಮನೆಯ ಸುತ್ತ ಸಸಿಗಳನ್ನು ನೆಡುವ ಮೂಲಕ ಪರಿಸರ ಸಂರಕ್ಷಣೆಗೆ ಕೊಡುಗೆ ನೀಡಬೇಕು” ಎಂದು ಮನವಿ ಮಾಡಿದರು.
ಅರಣ್ಯ ಸಚಿವರಿಂದ ಯೋಜನೆಯ ವಿವರ
ಅರಣ್ಯ ಸಚಿವ ಈಶ್ವರ ಖಂಡ್ರೆ ಮಾತನಾಡಿ, “ರಾಜ್ಯದಲ್ಲಿ 21% ಮತ್ತು ಕಲ್ಯಾಣ ಕರ್ನಾಟಕದಲ್ಲಿ 5% ಕ್ಕಿಂತ ಕಡಿಮೆ ಅರಣ್ಯವಿದೆ. ಕಲಬುರಗಿಯಲ್ಲಿ ಕೇವಲ 2% ಅರಣ್ಯವಿದ್ದು, ಇದು ಆತಂಕಕಾರಿ. ಈ ಭಾಗದಲ್ಲಿ 28 ಲಕ್ಷ ಸಸಿಗಳನ್ನು ನೆಡಲಾಗುತ್ತಿದೆ, ಇವುಗಳಲ್ಲಿ 7 ಲಕ್ಷ ಎತ್ತರದ ಸಸಿಗಳಿವೆ. ಪ್ರತಿ ವರ್ಷ ಕಲ್ಯಾಣ ಕರ್ನಾಟಕದಲ್ಲಿ 1 ಕೋಟಿ ಸಸಿಗಳನ್ನು ನೆಡುವ ಗುರಿಯಿದೆ” ಎಂದರು.
“‘ಮನೆಗೊಂದು ಮರ, ಊರಿಗೊಂದು ವನ’ ಯೋಜನೆಯಡಿ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಪ್ರಕೃತಿ ವಿಕೋಪ, ಜಾಗತಿಕ ತಾಪಮಾನ ಏರಿಕೆ, ಮತ್ತು ಮಾಲಿನ್ಯದಿಂದ ಜನರ ಆರೋಗ್ಯದ ಮೇಲೆ ಪರಿಣಾಮವಾಗುತ್ತಿದೆ. ಆರೋಗ್ಯಕರ ವಾತಾವರಣಕ್ಕಾಗಿ ಮರಗಿಡಗಳನ್ನು ಬೆಳೆಸಬೇಕು” ಎಂದು ಖಂಡ್ರೆ ಒತ್ತಾಯಿಸಿದರು.
“ನೆಟ್ಟ ಸಸಿಗಳ ಬದುಕುವಿಕೆಯ ಬಗ್ಗೆ ಗುಣಮಟ್ಟ ತಪಾಸಣೆಗಾಗಿ ಖಾಸಗಿ ಸಂಸ್ಥೆಯಿಂದ ತನಿಖೆ ನಡೆಸಲಾಗುವುದು. ಕಲಬುರಗಿಯಲ್ಲಿ ವನ್ಯಜೀವಿ ಸಂರಕ್ಷಣೆ, ಉದ್ಯಾನವನ, ಮೃಗಾಲಯ, ಟೀ ಪಾರ್ಕ್, ಮತ್ತು ಚಿಂಚೋಳಿಯ ಚಂದ್ರಂಪಳ್ಳಿಯಲ್ಲಿ ಇಕೋ ಟೂರಿಸಂ ಪಾರ್ಕ್ ನಿರ್ಮಾಣ ಯೋಜನೆ ರೂಪುಗೊಂಡಿದೆ” ಎಂದು ತಿಳಿಸಿದರು.
ಕಾರ್ಯಕ್ರಮದ ವಿಶೇಷತೆ
ಜುಲೈ 1 ರಿಂದ 7 ರವರೆಗೆ ರಾಜ್ಯ ಅರಣ್ಯ ಇಲಾಖೆಯ ‘ವನಮಹೋತ್ಸವ’ದಡಿ ರಾಜ್ಯಾದ್ಯಂತ 3 ಕೋಟಿ ಸಸಿಗಳನ್ನು ನೆಡುವ ಗುರಿಯಿದೆ, ಇದರಲ್ಲಿ ಕಲ್ಯಾಣ ಕರ್ನಾಟಕದಲ್ಲಿ 25 ಲಕ್ಷ ಸಸಿಗಳು ಸೇರಿವೆ. ಜಿಯೋ ಟ್ಯಾಗಿಂಗ್ ಮೂಲಕ ಸಸಿಗಳ ಬೆಳವಣಿಗೆಯನ್ನು ಗಮನಿಸಲಾಗುವುದು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ‘ಹಸಿರು ಪಥ’ ಯೋಜನೆಯಡಿ 5,000 ಕಿ.ಮೀ. ರಸ್ತೆ ಬದಿಯಲ್ಲಿ ಸಸಿಗಳನ್ನು ನೆಡಲಾಗುವುದು, ಇದರಲ್ಲಿ ಕಲಬುರಗಿಯ 249 ಕಿ.ಮೀ. ಸೇರಿದೆ. ನರೇಗಾ ಯೋಜನೆಯಡಿ ಸಸಿಗಳನ್ನು ನೆಡುವುದು ಮತ್ತು ಜಿಯೋ ಟ್ಯಾಗಿಂಗ್ ಮೂಲಕ ಪಾಲನೆ ಮಾಡಲಾಗುವುದು.
‘ಕಲಬುರಗಿ ಹಸಿರು ಹೆಜ್ಜೆ’ ಕಾರ್ಯಕ್ರಮದಡಿ ರೂ. 38.30 ಕೋಟಿಯಲ್ಲಿ ಕೆರೆ ಅಭಿವೃದ್ಧಿ, ರೂ. 21.27 ಕೋಟಿಯಲ್ಲಿ 30 ಕೆರೆಗಳ ಪುನರುಜ್ಜೀವನ, ಮತ್ತು ರೂ. 18.60 ಕೋಟಿಯಲ್ಲಿ ನಗರದ 25 ಪ್ರಮುಖ ವೃತ್ತಗಳ ಸೌಂದರ್ಯೀಕರಣ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಡಿಎಂಎಫ್ ಅನುದಾನದಿಂದ ರೂ. 60 ಲಕ್ಷ ವೆಚ್ಚದಲ್ಲಿ 37,100 ಕುಟುಂಬಗಳಿಗೆ ‘ಮನೆಗೊಂದು ಮರ’ ಯೋಜನೆಯಡಿ ಸಸಿಗಳನ್ನು ವಿತರಿಸಲಾಯಿತು. ಸಾಂಕೇತಿಕವಾಗಿ ಮೂವರು ವಿದ್ಯಾರ್ಥಿಗಳಿಗೆ ಸಸಿಗಳನ್ನು ನೀಡಲಾಯಿತು.
ಪ್ರಮುಖರ ಉಪಸ್ಥಿತಿ
ಕಾರ್ಯಕ್ರಮದಲ್ಲಿ ಸಂಸದ ರಾಧಾಕೃಷ್ಣ ದೊಡ್ಡಮನಿ, ಸಚಿವರಾದ ಈಶ್ವರ ಖಂಡ್ರೆ, ಪ್ರಿಯಾಂಕ್ ಖರ್ಗೆ, ಶಾಸಕರಾದ ಬಿ.ಆರ್. ಪಾಟೀಲ್, ಎಂ.ವೈ. ಪಾಟೀಲ್, ಅಲ್ಲಮಪ್ರಭು ಪಾಟೀಲ್, ಎಂಎಲ್‌ಸಿಗಳಾದ ತಿಪ್ಪಣ್ಣಪ್ಪ ಕಮಕನೂರು, ಶಶೀಲ್ ನಮೋಸಿ, ಜಗದೇವ ಗುತ್ತೇದಾರ, ಚಂದ್ರಶೇಖರ್ ಪಾಟೀಲ್, ಮಾಜಿ ಸಚಿವರಾದ ಬಾಬುರಾವ್ ಚಿಂಚನಸೂರು, ರೇವುನಾಯಕ ಬೆಳಮಗಿ, ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್, ಕಮೀಷನರ್ ಶರಣಪ್ಪ, ಸಿಇಒ ಭಂವರ್ ಸಿಂಗ್ ಮೀನಾ, ಎಸ್‌ಪಿ ಅಡ್ಡೂರು ಶ್ರೀನಿವಾಸಲು, ಮಹಾನಗರ ಪಾಲಿಕೆ ಕಮೀಷನರ್ ಶಿಂಧೆ ಅವಿನಾಶ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಸುಮೀತ್ ಕುಮಾರ್ ಪಾಟೀಲ್ ಸೇರಿದಂತೆ ಇತರರು ಉಪಸ್ಥಿತರಿದ್ದರು.