ಕಲಬುರಗಿ: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ರಾಜ್ಯವ್ಯಾಪಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಕೈಗೊಳ್ಳುತ್ತಿದ್ದು, ಕಲಬುರಗಿ ಜಿಲ್ಲೆಯಲ್ಲಿ ಜೆಸ್ಕಾಂ ಸಹಯೋಗದೊಂದಿಗೆ ಪ್ರತಿ ಮನೆಗೆ ಯುನಿಕ್ ಹೌಸ್‌ಹೋಲ್ಡ್ ಐಡೆಂಟಿಫಿಕೇಶನ್ (UHID) ಸಂಖ್ಯೆಯನ್ನು ಜನರೇಟ್ ಮಾಡಲು ಸಿದ್ಧತೆ ನಡೆಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್, ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ನಡೆಯಲಿರುವ ಈ ಸಮೀಕ್ಷೆಯನ್ನು ಸರ್ಕಾರ ನಿಯೋಜಿತ ಗಣತಿದಾರರು ಮೊಬೈಲ್ ಆಪ್ ಮೂಲಕ ಕೈಗೊಳ್ಳಲಿದ್ದಾರೆ. ಈ ಸಂದರ್ಭದಲ್ಲಿ ಸಾರ್ವಜನಿಕರು ತಮ್ಮ ಕುಟುಂಬದ ಸಂಪೂರ್ಣ ಮಾಹಿತಿಯನ್ನು ಒದಗಿಸಿ, ಸಮೀಕ್ಷೆಯ ಯಶಸ್ಸಿಗೆ ಸಹಕರಿಸಬೇಕೆಂದು ಸಚಿವರು ಮನವಿ ಮಾಡಿದ್ದಾರೆ. ಈ ಸಮೀಕ್ಷೆಯ ಫಲಿತಾಂಶವು ರಾಜ್ಯದ ಅಭಿವೃದ್ಧಿ ಮತ್ತು ಕಲ್ಯಾಣ ಕಾರ್ಯಕ್ರಮಗಳಿಗೆ ಆಧಾರವಾಗಿ, ನೀತಿ ನಿರೂಪಣೆಗೆ ನೆರವಾಗಲಿದೆ ಎಂದು ಅವರು ಹೇಳಿದ್ದಾರೆ.
ಸಮೀಕ್ಷೆಗೆ ಅಗತ್ಯ ದಾಖಲೆಗಳು
ಸಮೀಕ್ಷೆಯು ಪಡಿತರ ಚೀಟಿ ಮತ್ತು ಆಧಾರ್ ಸಂಖ್ಯೆ ಆಧಾರಿತವಾಗಿದ್ದು, ಗಣತಿದಾರರು ಮನೆಗೆ ಭೇಟಿ ನೀಡಿದಾಗ ಈ ಕೆಳಗಿನ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಂಡರೆ ಪ್ರಕ್ರಿಯೆ ಸುಗಮವಾಗಿ ಮತ್ತು ತ್ವರಿತವಾಗಿ ನಡೆಯಲಿದೆ:
- ಪಡಿತರ ಚೀಟಿ
- ಆಧಾರ್ ಕಾರ್ಡ್ ಅಥವಾ ಆಧಾರ್ ಸಂಖ್ಯೆ
- ವಿಕಲಚೇತನರಾದವರಿಗೆ UID ಕಾರ್ಡ್ ಅಥವಾ ಅಂಗವೈಕಲ್ಯ ಪ್ರಮಾಣಪತ್ರ
- ಮತದಾರರ ಗುರುತಿನ ಚೀಟಿ
ಕುಟುಂಬದ ಎಲ್ಲ ಸದಸ್ಯರ ಆಧಾರ್ ಕಾರ್ಡ್‌ಗೆ ಮೊಬೈಲ್ ಸಂಖ್ಯೆ ಲಿಂಕ್ ಆಗಿರುವುದನ್ನು ಖಾತರಿಪಡಿಸಿಕೊಳ್ಳಬೇಕು. ಸಮೀಕ್ಷೆ ಸಂದರ್ಭದಲ್ಲಿ e-KYC ಪ್ರಕ್ರಿಯೆಗೆ ಆಧಾರ್‌ಗೆ ಲಿಂಕ್ ಆಗಿರುವ ಮೊಬೈಲ್‌ಗೆ ಬರುವ OTP ಒದಗಿಸಬೇಕಾಗುತ್ತದೆ. ಒಂದೊಮ್ಮೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ ಚಾಲ್ತಿಯಲ್ಲಿಲ್ಲದಿದ್ದರೆ, ಆಧಾರ್ ನೋಂದಣಿ ಕೇಂದ್ರಕ್ಕೆ ಭೇಟಿ ನೀಡಿ ಹೊಸ ಸಂಖ್ಯೆಯನ್ನು ಲಿಂಕ್ ಮಾಡಿಸಿಕೊಳ್ಳುವಂತೆ ಸಚಿವರು ಸೂಚಿಸಿದ್ದಾರೆ.
ಸಮೀಕ್ಷೆಯ ವಿವರಗಳು
ಸುಮಾರು 60 ಪ್ರಶ್ನೆಗಳನ್ನು ಒಳಗೊಂಡಿರುವ ಈ ಸಮೀಕ್ಷೆಯಲ್ಲಿ ಶಿಕ್ಷಣ, ಕೌಶಲ್ಯ ತರಬೇತಿಯ ಅಗತ್ಯ, ಆದಾಯ, ಕುಟುಂಬದ ವಾರ್ಷಿಕ ವರಮಾನ, ಆರ್ಥಿಕ ಸ್ಥಿತಿ, ಧರ್ಮ, ಜಾತಿ, ಉಪಜಾತಿ ಮತ್ತು ಕುಲಕಸುಬಿನ ವಿವರಗಳನ್ನು ಒದಗಿಸಬೇಕಾಗುತ್ತದೆ. ಈ ಮಾಹಿತಿಯು ರಾಜ್ಯದ ಸಾಮಾಜಿಕ-ಆರ್ಥಿಕ ನೀತಿಗಳ ರೂಪುರೇಷೆಗೆ ಪ್ರಮುಖ ಆಧಾರವಾಗಲಿದೆ.
ಜಾಗೃತಿ ಅಭಿಯಾನ
ಸಮೀಕ್ಷೆಯ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು NCC (ನ್ಯಾಷನಲ್ ಕೆಡೆಟ್ ಕಾರ್ಪ್ಸ್) ಪದವಿ ವಿದ್ಯಾರ್ಥಿಗಳ ಮೂಲಕ ಜಾಗೃತಿ ಅಭಿಯಾನವನ್ನು ಆಯೋಜಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗದ ಸಹಾಯವಾಣಿ ಸಂಖ್ಯೆ 8050770004ಗೆ ಸಂಪರ್ಕಿಸಬಹುದು ಅಥವಾ ವೆಬ್‌ಸೈಟ್ https://kscbc.karnataka.gov.in ಭೇಟಿ ನೀಡಬಹುದು.
ಸಾರ್ವಜನಿಕರಿಗೆ ಸಚಿವರ ಕರೆ
“ಸಮೀಕ್ಷೆಯ ಯಶಸ್ಸು ರಾಜ್ಯದ ಅಭಿವೃದ್ಧಿಗೆ ಮೂಲಭೂತವಾಗಿದೆ. ಎಲ್ಲರೂ ಮುಕ್ತ ಮನಸ್ಸಿನಿಂದ ಗಣತಿದಾರರಿಗೆ ಸೂಕ್ತ ಮಾಹಿತಿ ಒದಗಿಸಿ, ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಕೈಜೋಡಿಸಬೇಕು” ಎಂದು ಸಚಿವ ಪ್ರಿಯಾಂಕ್ ಖರ್ಗೆ ಕೋರಿದ್ದಾರೆ.












