ಕಲಬುರಗಿ: ಕಲಬುರಗಿಯಲ್ಲಿ 210 ಬೆಡ್‌ಗಳ ಸಾಮರ್ಥ್ಯದ ಕ್ವಿದಾಯಿ ಕ್ಯಾನ್ಸರ್ ಆಸ್ಪತ್ರೆ ನಿರ್ಮಾಣದ ಸ್ಥಳವನ್ನು ರಾಜ್ಯದ ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಖಾತೆ ಸಚಿವ ಡಾ. ಶರಣಪ್ರಕಾಶ ಪಾಟೀಲ ಅವರು ಪರಿಶೀಲಿಸಿದರು. ಈ ಹೊಸ ಆಸ್ಪತ್ರೆ ಸುಮಾರು ಒಂದೂವರೆ ಎಕರೆ ಜಾಗದಲ್ಲಿ ಸ್ಥಾಪನೆಯಾಗಲಿದ್ದು, ಇದರಿಂದ ಈ ಭಾಗದ ಕ್ಯಾನ್ಸರ್ ರೋಗಿಗಳಿಗೆ ಕಡಿಮೆ ವೆಚ್ಚದಲ್ಲಿ ಸಮಗ್ರ ಚಿಕಿತ್ಸೆ ಲಭ್ಯವಾಗಲಿದೆ.
76 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ
ಈ ಆಸ್ಪತ್ರೆ ನಿರ್ಮಾಣಕ್ಕೆ 76 ಕೋಟಿ ರೂ. ವೆಚ್ಚ ನಿರ್ಧರಿಸಲಾಗಿದ್ದು, ಏಪ್ರಿಲ್ 16 ರಂದು ಆಸ್ಪತ್ರೆಯ ಅಡಿಗಲ್ಲು ಸಮಾರಂಭವನ್ನು ನಡೆಸುವ ಉದ್ದೇಶವಿದೆ. ಈ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಉಪಸ್ಥಿತರಿರುವರು. ಈ ಪ್ರಸ್ತುತ ಯೋಜನೆಗೆ ಕರ್ನಾಟಕ ಎಕ್ಷಾಮಿನೇಷನ್ ಅಥಾರಿಟಿಯಿಂದ 25 ಕೋಟಿ, ಕೆ.ಕೆ.ಆರ್.ಡಿ.ಬಿ ಯಿಂದ 25 ಕೋಟಿ, ಕಿದ್ವಾಯಿ ಮುಖ್ಯ ಆಸ್ಪತ್ರೆಯಿಂದ 16 ಕೋಟಿ ಹಾಗೂ ರಾಜ್ಯ ಸರ್ಕಾರದಿಂದ 10 ಕೋಟಿ ಅನುದಾನವನ್ನು ಮಂಜೂರು ಮಾಡಲಾಗಿದೆ.
ಆಸ್ಪತ್ರೆಯ ಪುನಃಶ್ರೇಣೀಕರಣ
ಹಳೆಯ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಈಗಾಗಲೇ 80 ಬೆಡ್‌ಗಳ ವ್ಯವಸ್ಥೆ ಮಾಡಲಾಗಿತ್ತು. 2017 ರಲ್ಲಿ ಪುನಃ ಕಾರ್ಯಾರಂಭವಾದ ಈ ಆಸ್ಪತ್ರೆ ಇದೀಗ ಸಾಕಷ್ಟು ಪ್ರಗತಿ ಸಾಧಿಸಿದೆ. 2020 ರಿಂದ ಈವರೆಗೆ 9,867 ಓ.ಪಿ.ಡಿ., 7,831 ಹೆಚ್ಚುವರಿ ಕೇಸ್, 7,831 ದೃಢೀಕೃತ ಕ್ಯಾನ್ಸರ್ ಪ್ರಕರಣಗಳು, 1,521 ಶಸ್ತ್ರಚಿಕಿತ್ಸೆ, 12,808 ಕಿಮೋಥೆರಪಿ, 1,648 ರೇಡಿಯೇಷನ್ ಚಿಕಿತ್ಸೆಗಳು ನೀಡಲಾಗಿದೆ. ಇದರಿಂದಾಗಿ ಕಿದ್ವಾಯಿ ಆಸ್ಪತ್ರೆಯ ಕಾರ್ಯನಿರ್ವಹಣೆ ಸತತವಾಗಿ ವಿಸ್ತಾರಗೊಳ್ಳುತ್ತಿದೆ.
ಕಲಬುರಗಿಯಲ್ಲಿ ಬ್ರಾಕಿ ಥೆರಪಿ ಪರಿಚಯ
ಕಲಬುರಗಿ ಜಿಲ್ಲೆಯಲ್ಲಿ ಕ್ಯಾನ್ಸರ್ ಚಿಕಿತ್ಸೆಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಗರ್ಭಕಂಠ, ಸ್ತನ, ಪ್ರಾಸ್ಟೇಟ್ ಕ್ಯಾನ್ಸರ್‌ಗಳಿಗೆ ಅತ್ಯಂತ ಪರಿಣಾಮಕಾರಿಯಾದ ಬ್ರಾಕಿ ಥೆರಪಿಯನ್ನು ಪ್ರಾರಂಭಿಸಲಾಗಿದೆ. ಇದಕ್ಕಾಗಿ 6.2 ಕೋಟಿ ರೂ. ವೆಚ್ಚದಲ್ಲಿ ಜರ್ಮನಿಯಿಂದ ಸೌಲಭ್ಯಗಳನ್ನು ಖರೀದಿಸಲಾಗಿದೆ. ಈಗಾಗಲೇ ಈ ಚಿಕಿತ್ಸಾ ವ್ಯವಸ್ಥೆ ಆರಂಭವಾಗಿದ್ದು, ಇದು ಈ ಭಾಗದ ಕ್ಯಾನ್ಸರ್ ರೋಗಿಗಳಿಗೆ ಮಹತ್ವದ ಅನುಕೂಲ ಒದಗಿಸಲಿದೆ.
ಉದ್ಯೋಗ ಮೇಳದ ಆಯೋಜನೆ
ಕಲಬುರಗಿ ಜಿಲ್ಲೆಯಲ್ಲಿ ನಿರುದ್ಯೋಗ ನಿವಾರಣೆಗೆ ಏಪ್ರಿಲ್ 16 ರಂದು ಉದ್ಯೋಗ ಮೇಳವನ್ನು ಹಮ್ಮಿಕೊಳ್ಳಲಾಗಿದೆ. ಎಸ್.ಎಸ್.ಎಲ್.ಸಿ, ಪಿಯುಸಿ ಮತ್ತು ಪದವಿ ಪೂರೈಸಿದ ನಿರುದ್ಯೋಗಿ ಯುವಕರು ಈ ಮೇಳದಲ್ಲಿ ಭಾಗವಹಿಸಬಹುದಾಗಿದೆ. ಸುಮಾರು 250 ಕ್ಕೂ ಹೆಚ್ಚು ಕಂಪನಿಗಳು ಈ ಮೇಳದಲ್ಲಿ ಪಾಲ್ಗೊಳ್ಳಲಿದ್ದು, ಭಾಗವಹಿಸುವವರಿಗೆ ಉದ್ಯೋಗ ಅವಕಾಶ ದೊರಕುವ ಸಾಧ್ಯತೆ ಇದೆ ಎಂದು ಸಚಿವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದವರು
ಈ ಸಭೆಯಲ್ಲಿ ಕಿದ್ವಾಯಿ ಪ್ರಭಾರಿ ಅಧಿಕಾರಿ ಡಾ. ಗುರುರಾಜ ದೇಶಪಾಂಡೆ, ಅಸೋಸಿಯೇಟ್ ಪ್ರೊಫೆಸರ್‌ಗಳಾದ ಡಾ. ಶೃತಿ ವಿ., ಡಾ. ನವೀನ್ ಬಿ., ಡಾ. ಉಮೇಶ್, ರೇಡಿಯೇಷನ್ ಅಂಕಲಾಜಿಸ್ಟ್ ಡಾ. ರಾಹುಲ್ ಲೋನ್, ಟ್ರಾಮಾ ಕೇರ್ ಸೆಂಟರ್ ಪ್ರಭಾರಿ ಡಾ. ಶಿವಕುಮಾರ, ಓರಲ್ ಅಂಕಲಾಜಿಸ್ಟ್ ವಿರಭದ್ರ ಕಲ್ಯಾಣ ಉಪಸ್ಥಿತರಿದ್ದರು.