ಚಿತ್ತಾಪುರ (ಕಲಬುರಗಿ): ಚಿತ್ತಾಪುರ ಪಟ್ಟಣದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ವಾರ್ಷಿಕ ಪಥ ಸಂಚಲನ ಕಾರ್ಯಕ್ರಮವು ಭಾನುವಾರ ಸಂಜೆ ಶಾಂತಿಯುತ ವಾತಾವರಣದಲ್ಲಿ ನಡೆಯಿತು. ಬಜಾಜ್ ಕಲ್ಯಾಣ ಮಂಟಪದಿಂದ ಆರಂಭಗೊಂಡ ಪಥ ಸಂಚಲನವು ಡಾ. ಬಿ.ಆರ್. ಅಂಬೇಡ್ಕರ್ ವೃತ್ತದ ಸುತ್ತಲೂ ಸಾಗಿ ಮುಕ್ತಾಯಗೊಂಡಿತು.
ಗಣವೇಷ ಧರಿಸಿದ ಸ್ವಯಂಸೇವಕರು ಪಥ ಸಂಚಲನದಲ್ಲಿ ಭಾಗವಹಿಸಿದ್ದು, ಆರಂಭದಲ್ಲಿ ಪುಷ್ಪಾರ್ಚನೆ ನೆರವೇರಿಸಲಾಯಿತು. ಅಂಬೇಡ್ಕರ್ ವೃತ್ತಕ್ಕೆ ತಲುಪಿದಾಗ ಸ್ವಯಂಸೇವಕರು “ಜೈ ಶ್ರೀ ರಾಮ್… ಜೈ ಜೈ ಶ್ರೀ ರಾಮ್” ಘೋಷಣೆಗಳನ್ನು ಕೂಗಿದರು.
ಯಾವುದೇ ಅಹಿತಕರ ಘಟನೆ ನಡೆಯದಂತೆ ಕಲಬುರಗಿ ಜಿಲ್ಲಾ ಪೊಲೀಸ್ ಇಲಾಖೆಯು ವ್ಯಾಪಕ ಬಂದೋಬಸ್ತ್ ಒಡ್ಡಿತ್ತು. ಪಥ ಸಂಚಲನದುದ್ದಕ್ಕೂ ಪೊಲೀಸರ ಕಣ್ಗಾವಲು ಇರಿಸಲಾಗಿತ್ತು. ಅಂಬೇಡ್ಕರ್ ವೃತ್ತದ ಸುತ್ತಲೂ ಸಿಸಿಟಿವಿ ಕ್ಯಾಮೆರಾಗಳ ಮೂಲಕ ನಿಗಾ ವಹಿಸಲಾಗಿತ್ತು ಮತ್ತು ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ದಳದ (KSRP) ತುಕಡಿಯನ್ನು ವಿಶೇಷವಾಗಿ ನಿಯೋಜಿಸಲಾಗಿತ್ತು.
ಪಥ ಸಂಚಲನದ ಮುಂದೆ ಮತ್ತು ಹಿಂದೆ ಪೊಲೀಸ್ ವಾಹನಗಳು ಸಂಚರಿಸುತ್ತಿದ್ದವು. ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ವೃತ್ತದ ಸುತ್ತಲೂ ನಿಯೋಜಿಸಿ ಸಂಪೂರ್ಣ ಭದ್ರತೆ ಕಲ್ಪಿಸಲಾಗಿತ್ತು.
ಪಥ ಸಂಚಲನ ಯಾವುದೇ ಅಡಚಣೆಯಿಲ್ಲದೆ ಶಾಂತಿಯುತವಾಗಿ ಮುಕ್ತಾಯಗೊಂಡಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.











