ಕಲಬುರಗಿ: ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ) 2025-26ನೇ ಸಾಲಿನ 5,000 ಕೋಟಿ ರೂಪಾಯಿಗಳ ಕ್ರಿಯಾ ಯೋಜನೆಗೆ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಅವರ ಅನುಮೋದನೆಗಾಗಿ ಸಲ್ಲಿಸಿದೆ. ಈ ಯೋಜನೆಯ ಜೊತೆಗೆ, ಶಿಕ್ಷಣ, ಆರೋಗ್ಯ, ಉದ್ಯೋಗ, ಕೌಶಲ್ಯಾಭಿವೃದ್ಧಿ, ಹಿಂದುಳಿದ ವರ್ಗಗಳ ಕಲ್ಯಾಣ ಮತ್ತು ಅಲ್ಪಸಂಖ್ಯಾತರ ಕಲ್ಯಾಣಕ್ಕೆ ಸಂಬಂಧಿಸಿದ ವಿನೂತನ ಯೋಜನೆಗಳಿಗೆ ರಾಜ್ಯಪಾಲರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಕೆಕೆಆರ್‌ಡಿಬಿ ಅಧ್ಯಕ್ಷ ಡಾ. ಅಜಯ್ ಧರಂಸಿಂಗ್ ತಿಳಿಸಿದ್ದಾರೆ.
ಕೆಕೆಆರ್‌ಡಿಬಿ ಅಧ್ಯಕ್ಷ ಡಾ. ಅಜಯ್ ಧರಂಸಿಂಗ್ ಮತ್ತು ರಾಜ್ಯ ಯೋಜನಾ ಖಾತೆ ಸಚಿವ ಡಿ. ಸುದಾಕರ್ ಅವರು ರಾಜ್ಯಪಾಲರಿಗೆ ಕ್ರಿಯಾ ಯೋಜನೆಯ ಪ್ರಸ್ತಾವನೆ ಸಲ್ಲಿಸಿದ ಸಂದರ್ಭದಲ್ಲಿ, ಮಂಡಳಿಯ ವಿವಿಧ ಕ್ಷೇತ್ರಗಳಲ್ಲಿ ಕೈಗೊಂಡಿರುವ ನವೀನ ಯೋಜನೆಗಳ ಬಗ್ಗೆ ವಿವರಿಸಿದರು. ರಾಜ್ಯಪಾಲರು, ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳಲ್ಲಿ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದ ಯೋಜನೆಗಳನ್ನು ಶ್ಲಾಘಿಸಿದ್ದಾರೆ. ಅಲ್ಲದೆ, ರಾಜ್ಯದ ವಿಶ್ವವಿದ್ಯಾಲಯಗಳ ಕುಲಾಧಿಪತಿಗಳಾಗಿರುವ ರಾಜ್ಯಪಾಲರು, ಕಲ್ಯಾಣ ಕರ್ನಾಟಕದ ಉನ್ನತ ಶಿಕ್ಷಣ ಸಂಸ್ಥೆಗಳಾದ ವಿಶ್ವವಿದ್ಯಾಲಯಗಳಿಗೂ ಕೆಕೆಆರ್‌ಡಿಬಿ ಅನುದಾನ ಹಂಚಿಕೆಯಲ್ಲಿ ಪರಿಗಣಿಸುವಂತೆ ಅಮೂಲ್ಯ ಸಲಹೆ ನೀಡಿದ್ದಾರೆ ಎಂದು ಡಾ. ಅಜಯ್ ತಿಳಿಸಿದ್ದಾರೆ.
ಡಾ. ನಂಜುಂಡಪ್ಪ ವರದಿಯ ಸಿಡಿಐ ಸೂಚ್ಯಂಕದ ಆಧಾರದಲ್ಲಿ ಮೈಕ್ರೋ ಮತ್ತು ಮ್ಯಾಕ್ರೋ ಯೋಜನೆಗಳಿಗೆ ಅನುದಾನ ಹಂಚಿಕೆ ಮಾಡಲಾಗಿದೆ. ಜನಸಂಖ್ಯೆಗೆ ಅನುಗುಣವಾಗಿ ಯೋಜನೆಗಳಿಗೆ ಅನುಮೋದನೆ ನೀಡಲಾಗಿದ್ದು, ಮುಖ್ಯಮಂತ್ರಿಗಳ ಆಯವ್ಯಯದ ಮಿತಿಯಂತೆ 5,000 ಕೋಟಿ ರೂಪಾಯಿಗಳ ಕ್ರಿಯಾ ಯೋಜನೆ ರೂಪಿಸಲಾಗಿದೆ. ಆರ್ಥಿಕ ಇಲಾಖೆಯಿಂದ ಈ ಯೋಜನೆಗೆ ಅನುಮತಿ ದೊರೆತಿದ್ದು, ರಾಜ್ಯಪಾಲರಿಗೆ ಸಲ್ಲಿಸಿ ಅನುಮೋದನೆಗೆ ಕೋರಲಾಗಿದೆ.
ಮೇ 10, 2025ರಂದು ನಡೆದ ಕೆಕೆಆರ್‌ಡಿಬಿ ಸಭೆಯ ಚರ್ಚೆಗಳು ಮತ್ತು ನಿರ್ಣಯಗಳಿಗೆ ಅನುಗುಣವಾಗಿ, ಮೈಕ್ರೋ, ಮ್ಯಾಕ್ರೋ, ವಿವೇಚನೆಯ ಅನುದಾನ ಹಾಗೂ ಆಡಳಿತಾತ್ಮಕ ವೆಚ್ಚಗಳಿಗೆ ಸಂಬಂಧಿಸಿದಂತೆ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಲಾಗಿದೆ. ರಾಜ್ಯಪಾಲರು ಕೆಕೆಆರ್‌ಡಿಬಿಯ ಕಾರ್ಯವೈಖರಿಯನ್ನು ಮೆಚ್ಚಿಕೊಂಡಿದ್ದಾರೆ ಎಂದು ಡಾ. ಅಜಯ್ ಧರಂಸಸಿಂಗ್ ಹೇಳಿದ್ದಾರೆ.
ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳ ಸರ್ವತೋಮುಖ ಅಭಿವೃದ್ಧಿಗೆ ಕೆಕೆಆರ್‌ಡಿಬಿ ಬದ್ಧವಾಗಿದ್ದು, ಈ ಕ್ರ 2025-26ನೇ ಸಾಲಿನ ಕ್ರಿಯಾ ಯೋಜನೆಯ ಮೂಲಕ ಈ ಗುರಿಯನ್ನು ಸಾಧಿಸಲು ಮಂಡಳಿ ಶ್ರಮಿಸಲಿದೆ.