ಬೆಂಗಳೂರು: ಕರ್ನಾಟಕ ಸರ್ಕಾರದ ಸನ್ಮಾನ್ಯ ಸಾರಿಗೆ ಮತ್ತು ಮುಜರಾಯಿ ಖಾತೆಯ ಸಚಿವರಾದ ಶ್ರೀ ರಾಮಲಿಂಗರೆಡ್ಡಿರವರ ಅಧ್ಯಕ್ಷತೆಯಲ್ಲಿ ಇಂದು ಮಹತ್ವದ ಒಡಂಬಡಿಕೆ ಮಾಡಿಕೊಳ್ಳಲಾಯಿತು. ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ (KKRTC) ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ನಡುವೆ ನೌಕರರ ಕಲ್ಯಾಣಕ್ಕಾಗಿ ಪ್ರೀಮಿಯಂ ರಹಿತ ಅಪಘಾತ ವಿಮೆ ಒದಗಿಸುವ ಕುರಿತು ಒಪ್ಪಂದಕ್ಕೆ ಸಹಿ ಹಾಕಲಾಯಿತು.
ಈ ಕಾರ್ಯಕ್ರಮದಲ್ಲಿ ಕ.ಕ.ರ.ಸಾ.ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಎಂ.ರಾಚಪ್ಪ ಹಾಗೂ ಎಸ್‌ಬಿಐ ಬ್ಯಾಂಕಿನ ಡಿವಿಜನಲ್ ಜನರಲ್ ಮ್ಯಾನೇಜರ್ ಶ್ರೀ ಮನೋಜಕುಮಾರ ಟೋಪೋ ಉಪಸ್ಥಿತರಿದ್ದರು.
ಈ ಯೋಜನೆಯಡಿಯಲ್ಲಿ ನಿಗಮದ ನೌಕರರು ಪ್ರೀಮಿಯಂ ರಹಿತ ವಿಮಾ ಸೌಲಭ್ಯ ಪಡೆಯಲಿದ್ದಾರೆ. ಇದರಲ್ಲಿ, ಅಪಘಾತದಲ್ಲಿ ನಿಧನರಾದರೆ ರೂ.1.00 ಕೋಟಿ ಹಾಗೂ ಸಹಜ ನಿಧನಕ್ಕೆ ರೂ.6.00 ಲಕ್ಷಗಳ “Term Insurance” ಸೌಲಭ್ಯ ಒದಗಿಸಲಾಗುವುದು. ಇದಲ್ಲದೇ, “Corporate Salary Package” ಅಡಿಯಲ್ಲಿ ಮತ್ತಿತರ ಆರ್ಥಿಕ ಸೌಲಭ್ಯಗಳನ್ನೂ ಈ ಯೋಜನೆಯಡಿ ನೌಕರರು ಪಡೆಯಲಿದ್ದಾರೆ.
ಸ್ನೇಹಪೂರ್ಣ ಸಹಕಾರ ಮುಂದುವರೆಯಲಿದೆ
ನಿಗಮದ ವ್ಯವಸ್ಥಾಪಕ ನಿರ್ದೇಶಕರು ಮಾತನಾಡಿ, “ನೌಕರರ ಕಲ್ಯಾಣಕ್ಕಾಗಿ ನಿಗಮ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಪ್ರಸ್ತುತ, 13150 ನೌಕರರು ಎಸ್‌ಬಿಐ ಬ್ಯಾಂಕಿನಲ್ಲಿ ವೇತನ ಖಾತೆಯನ್ನು ಹೊಂದಿದ್ದಾರೆ. ಈ ಯೋಜನೆಯ ಮೂಲಕ ಎಲ್ಲರು ಪ್ರೀಮಿಯಂ ರಹಿತ ವಿಮಾ ಸೌಲಭ್ಯಕ್ಕೆ ಅರ್ಹರಾಗಿದ್ದಾರೆ” ಎಂದು ತಿಳಿಸಿದ್ದಾರೆ. ಇದೇ ರೀತಿಯ ಸಹಕಾರ ಮುಂದುವರೆಯಲೆಂದು ಅವರು ನಿರೀಕ್ಷೆ ವ್ಯಕ್ತಪಡಿಸಿದರು.
ಪರಿಹಾರ ಮೊತ್ತ ತ್ವರಿತ ನಿರ್ವಹಣೆಗೆ ಆದೇಶ
ಮಾನ್ಯ ಸಚಿವರಾದ ಶ್ರೀ ರಾಮಲಿಂಗರೆಡ್ಡಿಯವರು, “ಅಪಘಾತದಲ್ಲಿ ನಿಧನರಾದ ನೌಕರರ ಅವಲಂಬಿತರಿಗೆ ಆದ್ಯತೆಯ ಮೇರೆಗೆ ಪರಿಹಾರ ಮೊತ್ತ ಒದಗಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು” ಎಂದು ನಿರ್ದೇಶನ ನೀಡಿದರು.
ಈ ಮಹತ್ವದ ಸಮಾರಂಭದಲ್ಲಿ ಕ.ರಾ.ರ.ಸಾ.ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಅನ್ಬುಕುಮಾರ್ ಭಾ.ಆ.ಸೇ ಹಾಗೂ ಎಸ್‌ಬಿಐ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. ಅವರಲ್ಲಿ ಶ್ರೀ ವಿಜಯ್ ಕೆ.ಟಿ (ಎ.ಎಸ್.ಎಂ.), ಶ್ರೀ ದೇವಕಿನಂದನ್ (ಎ.ಎಸ್.ಎಂ.), ಶ್ರೀ ಸಂಜಯ್ ಕುಮಾರ್ (ಎ.ಎಸ್.ಎಂ.), ಶ್ರೀ ಅಂಕಿತ್ ಸಾಹು (ಸಿ.ಎಂ.) ಹಾಗೂ ನಿಗಮದ ಹಿರಿಯ ಅಧಿಕಾರಿಗಳು ಸೇರಿದ್ದರು.
ಈ ಒಡಂಬಡಿಕೆಯಿಂದ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ನೌಕರರು ಆರ್ಥಿಕ ಭದ್ರತೆಯ ನಿರೀಕ್ಷೆಯಲ್ಲಿ ಇಂಬು ಹೊಂದಲಿದ್ದಾರೆ.