ಕೇಂದ್ರ ಸರ್ಕಾರದ ಮೇಲೆ ಒಗ್ಗಟ್ಟಿನ ಒತ್ತಡಕ್ಕೆ ಕರೆ
ಅಗತ್ಯವಿದ್ದರೆ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಹಿಂಪಡೆಯಲು ಸಿದ್ಧ
ಬೆಂಗಳೂರು: ಕಳಸಾ-ಬಂಡೂರಿ ಯೋಜನೆಯ ಮೂಲಕ ಕರ್ನಾಟಕಕ್ಕೆ ಮೀಸಲಾದ ಪಾಲಿನ ನೀರನ್ನು ಬಳಸಿಕೊಳ್ಳಲು ರಾಜ್ಯಕ್ಕೆ ಸಂಪೂರ್ಣ ಹಕ್ಕಿದೆ ಎಂದು ಉಪಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ. ಈ ಯೋಜನೆಯ ಜಾರಿಗೆ ಎಲ್ಲರೂ ಒಗ್ಗಟ್ಟಾಗಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದು ಅವರು ಕರೆ ನೀಡಿದ್ದಾರೆ.
ವಿಧಾನಸಭೆಯ ಪ್ರಶ್ನೋತ್ತರ ಕಲಾಪದಲ್ಲಿ ಶಾಸಕ ಕೋನರೆಡ್ಡಿ ಅವರು, ಮಹದಾಯಿ ಯೋಜನೆ ಕುರಿತು ಗೋವಾ ಮುಖ್ಯಮಂತ್ರಿಯ ವಿಧಾನಸಭೆಯ ಹೇಳಿಕೆಯ ಬಗ್ಗೆ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಡಿಸಿಎಂ ಶಿವಕುಮಾರ್, “ರಾಜ್ಯದ ಜನರು ಪಕ್ಷಬೇಧ ಮರೆತು ಈ ಯೋಜನೆಗಾಗಿ ಹೋರಾಟ ನಡೆಸಿದ್ದಾರೆ. ನ್ಯಾಯಾಲಯದ ತೀರ್ಪಿನ ಮೂಲಕ ರಾಜ್ಯಕ್ಕೆ ಅಗತ್ಯ ನೀರಿನ ಪಾಲು ಹಂಚಿಕೆಯಾಗಿದೆ. 2022ರಲ್ಲಿ ಕೇಂದ್ರ ಜಲ ಆಯೋಗವೂ ಈ ನೀರನ್ನು ಬಳಸಲು ಅನುಮತಿ ನೀಡಿತು. ಇದರಿಂದಾಗಿ ಹುಬ್ಬಳ್ಳಿ-ಧಾರವಾಡದಲ್ಲಿ ವಿಜಯೋತ್ಸವ ಆಚರಿಸಲಾಯಿತು” ಎಂದರು.
ಗೋವಾದ ಅಧಿಕಾರಿಯೊಬ್ಬರು ಈ ಯೋಜನೆಯನ್ನು ಪ್ರಶ್ನಿಸಿ ಕರ್ನಾಟಕಕ್ಕೆ ಶೋಕಾಸ್ ನೋಟೀಸ್ ಜಾರಿಗೊಳಿಸಿದ್ದಾರೆ ಎಂದು ಉಲ್ಲೇಖಿಸಿದ ಶಿವಕುಮಾರ್, “ಗೋವಾದ ಅಧಿಕಾರಿಗಳಿಗೆ ನಮಗೆ ನೋಟೀಸ್ ನೀಡುವ ಅಧಿಕಾರ ಎಲ್ಲಿಂದ ಬಂತು? ಕೇಂದ್ರ ಸರ್ಕಾರವು ಕೆಲವು ಸಂದರ್ಭಗಳಲ್ಲಿ ನೋಟೀಸ್ ನೀಡಬಹುದು, ಆದರೆ ಬೇರೆ ರಾಜ್ಯದಿಂದ ನಮಗೆ ನೋಟೀಸ್ ನೀಡುವುದು ಸರಿಯೇ? ಆಗ ನಾನು ಅಧಿಕಾರದಲ್ಲಿದ್ದರೆ, ಈ ನೋಟೀಸ್‌ಗೆ ‘ನೀನು ಯಾರು?’ ಎಂದು ಪ್ರಶ್ನಿಸುತ್ತಿದ್ದೆ. ಆದರೆ, ಆಗ ಕರ್ನಾಟಕದ ಕೆಲವರು ನ್ಯಾಯಾಲಯದ ಮೆಟ್ಟಿಲೇರಿದ್ದಾರೆ” ಎಂದು ಹೇಳಿದರು.
ಕಾನೂನು ತೊಡಕುಗಳ ಪರಿಶೀಲನೆ
“ನಾನು ಕೇಂದ್ರ ಜಲಶಕ್ತಿ ಸಚಿವ ಭೂಪೇಂದ್ರ ಯಾದವ್ ಅವರನ್ನು ನಾಲ್ಕು ಬಾರಿ ಭೇಟಿಯಾಗಿ ಚರ್ಚಿಸಿದ್ದೇನೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಕೂಡ ಮೂರು ಬಾರಿ ಭೇಟಿಯಾಗಿ ಮನವಿ ಮಾಡಿದ್ದಾರೆ. ಈ ತಿಂಗಳಲ್ಲಿ ಮತ್ತೊಮ್ಮೆ ದೆಹಲಿಯಲ್ಲಿ ಭೇಟಿಯಾಗಲು ದಿನಾಂಕ ನಿಗದಿಯಾಗಿದೆ. ಕಳಸಾ-ಬಂಡೂರಿ ಯೋಜನೆಗೆ ಕರ್ನಾಟಕಕ್ಕೆ ಮೀಸಲಾದ ಪ್ರತಿ ಹನಿ ನೀರನ್ನು ಬಳಸಿಕೊಳ್ಳಲು ಸಂಪೂರ್ಣ ಹಕ್ಕಿದೆ. ನಾನು ಜಲಸಂಪನ್ಮೂಲ ಇಲಾಖೆಯ ಜವಾಬ್ದಾರಿ ವಹಿಸಿಕೊಂಡ ಬಳಿಕ ಟೆಂಡರ್ ಕರೆದು ಗುತ್ತಿಗೆ ಅಂತಿಮಗೊಳಿಸಿದ್ದೇನೆ. ಕಾನೂನು ತೊಡಕುಗಳನ್ನು ಪರಿಶೀಲಿಸುತ್ತಿದ್ದೇವೆ. ಅಗತ್ಯವಿದ್ದರೆ, ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿರುವ ಅರ್ಜಿಯನ್ನು ಹಿಂಪಡೆದು ಯೋಜನೆಯನ್ನು ಆರಂಭಿಸಬಹುದು ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ. ಈ ಬಗ್ಗೆ ಅಡ್ವೊಕೇಟ್ ಜನರಲ್ ಜೊತೆ ಚರ್ಚಿಸುತ್ತಿದ್ದೇನೆ” ಎಂದು ಶಿವಕುಮಾರ್ ವಿವರಿಸಿದರು.
ನ್ಯಾಯಾಲಯದಲ್ಲಿ ಬಗೆಹರಿಯದು
ಶಾಸಕ ಬೆಲ್ಲದ್ ಅವರು, “ನಾವು ಒತ್ತಡ ಹಾಕುವ ಬದಲು ಕೋರ್ಟ್‌ನಲ್ಲಿ ತೀರ್ಮಾನ ಮಾಡಿಸಿ” ಎಂದಾಗ, ಶಿವಕುಮಾರ್, “ನ್ಯಾಯಾಲಯದಲ್ಲಿ ಈ ವಿಷಯ ಬಗೆಹರಿಯಲು ಸಾಧ್ಯವಿಲ್ಲ. ಕೋರ್ಟ್ ಮೆಟ್ಟಿಲೇರಿದರೆ ವಿಷಯ ಎಲ್ಲೆಲ್ಲಿಗೋ ತಿರುಗುತ್ತದೆ. ಗೋವಾದಿಂದ ನಮಗೆ ನೋಟೀಸ್ ನೀಡುವ ಅಧಿಕಾರ ಯಾರಿಗಿದೆ? ನೀವು ಬೇರೆ ಪಕ್ಷದವರಾದರೂ ನಾನು ನಿಮಗೆ ನೋಟೀಸ್ ನೀಡಬಲ್ಲೆಯೇ?” ಎಂದು ಪ್ರಶ್ನಿಸಿದರು. ಇದಕ್ಕೆ ಬೆಲ್ಲದ್, ಡಿಸಿಎಂ ನಿಲುವು ಸರಿಯಿದೆ ಎಂದು ಒಪ್ಪಿಕೊಂಡರು.
ಕೇಂದ್ರದಿಂದ ಆರ್ಥಿಕ ನೆರವಿಗೆ ಒತ್ತಾಯ
ಶಾಸಕ ಎಂ.ಆರ್. ಪಾಟೀಲ್ ಅವರು ಕುಂದಗೋಳ ತಾಲೂಕಿನ ಬೆಣ್ಣೆಹಳ್ಳದಲ್ಲಿ ಪ್ರವಾಹ ತಡೆಗೆ ಕ್ರಮ ಕೇಳಿದಾಗ, ಶಿವಕುಮಾರ್, “ಈ ಪ್ರದೇಶವನ್ನು ಖುದ್ದಾಗಿ ಪರಿಶೀಲಿಸಿದ್ದೇನೆ. ಶಾಸಕ ಕೋನರೆಡ್ಡಿ ಸೇರಿದಂತೆ ಎಲ್ಲರ ಒತ್ತಡದಿಂದ ರೂ.200 ಕೋಟಿ ವೆಚ್ಚದ ಕಾಮಗಾರಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ರೂ.1610 ಕೋಟಿ ಮೊತ್ತದ ಯೋಜನೆಯನ್ನು ಎಐಬಿಪಿ ಯೋಜನೆಯಡಿ ಕೇಂದ್ರಕ್ಕೆ ಕಳುಹಿಸಲಾಗಿದೆ. ಬಿಜೆಪಿ ಶಾಸಕರು ಕೇಂದ್ರ ಸಚಿವರ ಮೇಲೆ ಒತ್ತಡ ಹಾಕಿದರೆ, ಈ ಯೋಜನೆಗೆ ಆರ್ಥಿಕ ನೆರವು ಸಿಗಬಹುದು. ನಾನೂ ಜೊತೆಗಿರುವೆ” ಎಂದರು.
ಕಬಿನಿ ಮತ್ತು ಭೀಮಾ ನದಿ ಯೋಜನೆಗಳಿಗೆ ಕ್ರಮ
ಕಬಿನಿ ಬಲದಂಡೆ ನಾಲೆಯ ಅಭಿವೃದ್ಧಿಗೆ ಶಾಸಕ ಎ.ಆರ್. ಕೃಷ್ಣಮೂರ್ತಿ ಕೇಳಿದ ಪ್ರಶ್ನೆಗೆ, “180 ಕಿ.ಮೀ. ಉದ್ದದ ಈ ನಾಲೆಗೆ ಡಿಪಿಆರ್ ಸಿದ್ಧಪಡಿಸಲು ಸೂಚಿಸಲಾಗಿದೆ. 24-01-2025ರಂದು ಮಂಡಳಿಯಲ್ಲಿ ವೆಚ್ಚ ತೀರ್ಮಾನಿಸಲು ಸೂಚನೆ ನೀಡಲಾಗಿದೆ. ತಾಂತ್ರಿಕ ವರದಿ ಬಂದ ನಂತರ ಕಾಮಗಾರಿ ಆರಂಭವಾಗಲಿದೆ” ಎಂದರು.
ಶಾಸಕ ವಿಠಲ್ ದೊಂಡಿಬಾ ಅವರ ಭೀಮಾ ನದಿಯಿಂದ 8 ಕೆರೆಗಳಿಗೆ ನೀರು ಹರಿಸುವ ಬೇಡಿಕೆಗೆ, “2025-26ರ ಸಾಲಿಗೆ ರೂ.2 ಕೋಟಿ ಅನುದಾನಕ್ಕೆ ಅನುಮೋದನೆ ನೀಡಲಾಗಿದೆ. ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಕಾಮಗಾರಿ ಆರಂಭವಾಗಲಿದೆ” ಎಂದು ಭರವಸೆ ನೀಡಿದರು.
ಬಿಎಂಐಸಿಪಿ ಯೋಜನೆಯ ತೊಡಕು
ಶಾಸಕ ಕೆ.ಎಂ. ಉದಯ್ ಅವರ ಬಿಎಂಐಸಿಪಿ ಯೋಜನೆಯಿಂದ ಪುರಸಭೆಗೆ ಆದಾಯದ ಕೊರತೆಯ ಕುರಿತ ಪ್ರಶ್ನೆಗೆ, “ಮದ್ದೂರನ್ನು ಬಿಎಂಐಸಿಪಿ ವ್ಯಾಪ್ತಿಯಿಂದ ಹೊರತರಲು ಪ್ರಯತ್ನಿಸಿದೆವು. ಆದರೆ, ಸುಪ್ರೀಂ ಕೋರ್ಟ್ ತೀರ್ಪಿನಿಂದ ಯೋಜನೆಯನ್ನು ಬದಲಿಸಲಾಗದು. ಪುರಸಭೆಗೆ ಆದಾಯಕ್ಕಾಗಿ ಸಹಕಾರ ನೀಡಲು ಸಿದ್ಧನಿದ್ದೇನೆ” ಎಂದು ಶಿವಕುಮಾರ್ ತಿಳಿಸಿದರು.