ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಆಡಳಿತ ಶೈಲಿಯನ್ನು ತೀವ್ರವಾಗಿ ಟೀಕಿಸಿದ ಪ್ರತಿಪಕ್ಷ ನಾಯಕ ಆರ್. ಅಶೋಕ, “ಕಾಂಗ್ರೆಸ್‌ಗೆ ಮತ ನೀಡಿದ ಜನರು ಈಗ ಪಾಪ ತೊಳೆದುಕೊಳ್ಳುವುದು ಹೇಗೆಂದು ಚಿಂತೆ ಮಾಡುತ್ತಿದ್ದಾರೆ” ಎಂದು ವ್ಯಂಗ್ಯವಾಡಿದರು.
ರಾಜಧಾನಿಯಲ್ಲಿ ನಡೆದ ಬಿಜೆಪಿ ಪ್ರತಿಭಟನೆಯಲ್ಲಿ ಅವರು ಮಾತನಾಡುತ್ತಾ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಆರ್ಥಿಕ ನೀತಿಯನ್ನು ಟೀಕಿಸಿ, “ಸಿಎಂ ತೆರಿಗೆ ಮೂಲಕ ಕಳ್ಳತನ ಮಾಡುತ್ತಿದ್ದಾರೆ, ಡಿಸಿಎಂ ಕಮಿಷನ್ ಮೂಲಕ ಕಳ್ಳತನ ಮಾಡುತ್ತಿದ್ದಾರೆ” ಎಂದರು.
“ಸತ್ತ ನಂತರ ಹೆಣದ ಮೇಲೂ ಹಣ ವಸೂಲಿ ಮಾಡುವ ನಿಲುವು ಕಾಂಗ್ರೆಸ್ ಸರ್ಕಾರದದು. ಮರಣ ಪ್ರಮಾಣಪತ್ರಕ್ಕೆ ಕೂಡ ಶುಲ್ಕ ಹೆಚ್ಚಿಸಲಾಗಿದೆ. ಮದ್ಯದ ದರ ಹೆಚ್ಚಿಸಿ ಮದ್ಯಪ್ರಿಯರಿಂದ ಹಣ ಸಂಗ್ರಹಿಸಲಾಗುತ್ತಿದೆ. ಶೌಚಾಲಯ ನಿರ್ವಹಣೆಗೆ ಕೂಡ ಸರ್ಕಾರದ ಬಳಿ ಹಣವಿಲ್ಲ. ಇದೀಗ ಬೆಂಗಳೂರು ನಾಗರಿಕರಿಗೆ ನೀರಿನ ದರ ಶಾಕ್ ಕಾದಿದೆ” ಎಂದರು.
ಸರ್ಕಾರದ ‘ಗ್ಯಾರಂಟಿ’ ಯೋಜನೆಗಳ ಕುರಿತು ಅವರು ವಾಗ್ದಾಳಿ ನಡೆಸಿ, “ಸಿಎಂ ಪತ್ನಿಗೆ ಸಹಾಯಧನ ನೀಡಿ, ಪತಿಯೆ ಮೂಲಕ ಹಣ ವಸೂಲಿ ಮಾಡುತ್ತಿದ್ದಾರೆ” ಎಂದು ಆರೋಪಿಸಿದರು.
ಬಜೆಟ್ ನಂತರವೇ ತೆರಿಗೆ ಏರಿಕೆಯನ್ನು ಜನರಿಗೆ ತಿಳಿಸದೆ ಜಾರಿಗೊಳಿಸಲಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ ಅವರು, “ವಕ್ಫ್ ಮಂಡಳಿ ರೈತರ ಜಮೀನನ್ನು ಕಬಳಿಸುತ್ತಿದ್ದ ಸಂದರ್ಭದಲ್ಲಿ ಪ್ರಧಾನಿ ಮೋದಿ ಕಾನೂನು ತಿದ್ದುಪಡಿ ತಂದಿದ್ದರು. ಆದರೆ ಕಾಂಗ್ರೆಸ್ ಈ ಕ್ರಮಕ್ಕೂ ವಿರೋಧ ವ್ಯಕ್ತಪಡಿಸಿದೆ” ಎಂದು ಹೇಳಿದರು.
ಪ್ರತಿಭಟನೆ ಸಂದರ್ಭ ಬಿಜೆಪಿಯ ನಾಯಕರನ್ನು ಬಂಧಿಸಿ ಬಸ್‌ಗಳಲ್ಲಿ ಇರಿಸಲಾಗುತ್ತಿದೆ ಎಂಬುದರ ಬಗ್ಗೆ ಬೇಸರ ವ್ಯಕ್ತಪಡಿಸಿದ ಅವರು, “ಇಂದು ಸರ್ಕಾರ ಬಸ್‌ಗಳನ್ನು ತರಲೂ ಅಸಾಧ್ಯವಾಗುತ್ತಿದೆ. ಬಸ್‌ಗಳ ಕೊರತೆಯ ಮಧ್ಯೆ ಪ್ರತಿಭಟನಾಕಾರರನ್ನು ಕಟ್ಟಿ ಹಾಕಲು ಯೋಗ್ಯತೆ ಕೂಡ ಇಲ್ಲ” ಎಂದು ದೂರಿದರು.
ಆರ್. ಅಶೋಕ ಅವರ ಈ ವಾಗ್ದಾಳಿ ರಾಜ್ಯ ರಾಜಕೀಯದಲ್ಲಿ ಮತ್ತೊಂದು ಚರ್ಚೆಗೆ ದಾರಿ ಮಾಡಿಕೊಟ್ಟಿದೆ.