ನಾಡಪ್ರಭು ಕೆಂಪೇಗೌಡರ ಬೆಂಗಳೂರನ್ನು ಭೂಕಂಪದ ನಾಡು ಮಾಡಬಾರದು
ಬೆಂಗಳೂರು: ಬಿಬಿಎಂಪಿ ಚುನಾವಣೆಯಲ್ಲಿ ಗೆಲುವಿಗಾಗಿ ಕಾಂಗ್ರೆಸ್ ಸರ್ಕಾರ ಬೆಂಗಳೂರನ್ನು ಐದು ಭಾಗಗಳಾಗಿ ವಿಭಜಿಸಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಆರೋಪಿಸಿದ್ದಾರೆ. ಈ ಕ್ರಮವನ್ನು ವಿರೋಧಿಸಿ ಬಿಜೆಪಿ ಕಾನೂನು ಹೋರಾಟ ಸೇರಿದಂತೆ ಪ್ರತಿಭಟನೆ ನಡೆಸಲಿದೆ ಎಂದು ಅವರು ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಆರ್.ಅಶೋಕ, “ಕಾಂಗ್ರೆಸ್ ಸರ್ಕಾರ ರಾಜಕೀಯ ಲಾಭಕ್ಕಾಗಿ ಬೆಂಗಳೂರನ್ನು ಅತಂತ್ರವಾಗಿ ಐದು ಪಾಲಿಕೆಗಳಾಗಿ ಒಡೆದಿದೆ. ಇದರಿಂದ ತಾರತಮ್ಯ ಉಂಟಾಗಿ, ಜನರಿಗೆ ತೊಂದರೆಯಾಗಲಿದೆ. ಬೆಂಗಳೂರಿನ ಜನರು ವಿಭಜನೆಗೆ ಒಪ್ಪಿಲ್ಲ. ಈಗಾಗಲೇ ತೆರಿಗೆ, ಸೆಸ್, ಇ-ಖಾತಾದಿಂದ ನಗರವಾಸಿಗಳಿಗೆ ಸಮಸ್ಯೆಯಾಗಿದೆ. ಕಾಂಗ್ರೆಸ್ಗೆ ಚುನಾವಣೆಯಲ್ಲಿ ಸೋಲು ಖಚಿತವಾಗಿದ್ದು, ಅದನ್ನು ತಪ್ಪಿಸಲು ಈ ತಂತ್ರ ಅನುಸರಿಸಿದ್ದಾರೆ” ಎಂದು ಕಿಡಿಕಾರಿದರು.
ಕಪ್ಪು ಪಟ್ಟಿಯಲ್ಲಿರುವ ಗುತ್ತಿಗೆದಾರರಿಗೆ ಸುರಂಗ ರಸ್ತೆ ಯೋಜನೆಯನ್ನು ನೀಡಲಾಗುತ್ತಿದೆ ಎಂದು ಆರೋಪಿಸಿದ ಅವರು, “ಸುರಂಗ ರಸ್ತೆಗೆ ಟೋಲ್ ವಿಧಿಸುವುದರಿಂದ ಶ್ರೀಮಂತರಿಗೆ ಮಾತ್ರ ಪ್ರಯೋಜನವಾಗಲಿದೆ. ಸಾಮಾನ್ಯ ಜನರಿಗೆ ಇದರಿಂದ ಯಾವುದೇ ಲಾಭವಿಲ್ಲ. ನಾಡಪ್ರಭು ಕೆಂಪೇಗೌಡರು ಕಟ್ಟಿದ ಬೆಂಗಳೂರನ್ನು ಭೂಕಂಪದ ನಾಡು ಮಾಡಬಾರದು. ಅಭಿವೃದ್ಧಿಗೆ ನಾವು ಸಹಕರಿಸುತ್ತೇವೆ, ಆದರೆ ಕೊಳ್ಳೆ ಯೋಜನೆಗಳನ್ನು ವಿರೋಧಿಸುತ್ತೇವೆ” ಎಂದರು.
ಹೆಬ್ಬಾಳ ಮೇಲ್ಸೇತುವೆ ಜಂಕ್ಷನ್ನಂತಹ ಪ್ರಮುಖ ಸ್ಥಳವನ್ನು ಖಾಸಗಿ ಭೂ ಮಾಲೀಕರಿಗೆ ನೀಡಲು ಸರ್ಕಾರ ಮುಂದಾಗಿದೆ ಎಂದು ಆರೋಪಿಸಿದ ಆರ್.ಅಶೋಕ, “ಇ-ಖಾತಾ ವಿಚಾರದಲ್ಲಿ ಜನರಿಗೆ ತೊಂದರೆಯಾಗುತ್ತಿದೆ. ಬೆಂಗಳೂರನ್ನು ಹಣ ಲೂಟಿಗೆ ಬಳಸಬಾರದು. ಕಾಂಗ್ರೆಸ್ ಸರ್ಕಾರ ಬೆಂಗಳೂರನ್ನು ಹೋಳು ಮಾಡುತ್ತಿದೆ. ಟ್ರಾಫಿಕ್, ಕಸದ ಸಮಸ್ಯೆಯಿಂದ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಹೊಸ ಪಾಲಿಕೆಗಳ ರಚನೆಯಿಂದ ಬೆಂಗಳೂರಿನ ಜನರ ಹೃದಯ ಚೂರಾಗಲಿದೆ. ಇದರ ವಿರುದ್ಧ ಬಿಜೆಪಿ ಹೋರಾಟ ನಡೆಸಲಿದೆ” ಎಂದು ಹೇಳಿದರು.
ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕೊಡುಗೆಯನ್ನು ಸ್ಮರಿಸಿದ ಅವರು, “ಕೆಆರ್ಎಸ್ ಜಲಾಶಯ, ಸೋಪ್ ಫ್ಯಾಕ್ಟರಿ, ವಿಶ್ವವಿದ್ಯಾಲಯಗಳು, ಸಾಮಾಜಿಕ ನ್ಯಾಯದಂತಹ ಕೆಲಸಗಳಿಂದ ಅವರು ಜನರಿಗೆ ಜೀವನಾಡಿಯಾದರು. ಆದರೆ, ಮುಡಾದಲ್ಲಿ 14 ಸೈಟುಗಳನ್ನು ಕೊಳ್ಳೆ ಹೊಡೆದವರನ್ನು ಮಹಾರಾಜರೊಂದಿಗೆ ಹೋಲಿಸುವುದು ತಪ್ಪು. ಯತೀಂದ್ರ ಸಿದ್ದರಾಮಯ್ಯ ಅವರು ಮಹಾರಾಜರ ಕುಟುಂಬಕ್ಕೆ ಅಪಮಾನ ಮಾಡಿದ್ದಾರೆ. ಅವರು ಕೂಡಲೇ ಕ್ಷಮೆ ಕೇಳಬೇಕು” ಎಂದು ಆಗ್ರಹಿಸಿದರು.
ಅರಣ್ಯ ಇಲಾಖೆಯ ಕಾರ್ಯಕ್ಷಮತೆಯನ್ನು ಪ್ರಶ್ನಿಸಿದ ಆರ್.ಅಶೋಕ, “ಹುಲಿಗಳ ಸಾವಿನಿಂದ ಅರಣ್ಯ ಇಲಾಖೆ ಸತ್ತಂತಾಗಿದೆ. ಗೋವುಗಳನ್ನು ಅರಣ್ಯದಲ್ಲಿ ಮೇಯಿಸದಂತೆ ಆದೇಶಿಸಿರುವುದು ಸರಿಯಲ್ಲ. ಕಾಂಗ್ರೆಸ್ ಸರ್ಕಾರದ 136 ಸೀಟು ಗೆಲುವಿನ ಬಗ್ಗೆಯೂ ಅನುಮಾನವಿದೆ. ಚುನಾವಣೆಯಲ್ಲಿ ಸೋತಾಗ ಸಾಕ್ಷಿ ಕೇಳುವವರು, ಭಯೋತ್ಪಾದಕರ ಮೇಲೆ ದಾಳಿ ಮಾಡಿದಾಗಲೂ ಸಾಕ್ಷಿ ಕೇಳಿದ್ದರು” ಎಂದು ವ್ಯಂಗ್ಯವಾಡಿದರು.