ಮದ್ದೂರು: ಕಾಂಗ್ರೆಸ್ ಸರ್ಕಾರದ ಮತಬ್ಯಾಂಕ್ ರಾಜಕಾರಣದಿಂದಾಗಿ ಕರ್ನಾಟಕದಲ್ಲಿ ಮಿನಿ ಪಾಕಿಸ್ತಾನಗಳು ಸೃಷ್ಟಿಯಾಗುತ್ತಿವೆ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್.ಅಶೋಕ ಆರೋಪಿಸಿದ್ದಾರೆ. ಮದ್ದೂರು ತಾಲೂಕಿಗೆ ಭೇಟಿ ನೀಡಿ ಸ್ಥಳೀಯರೊಂದಿಗೆ ಮಾತುಕತೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದ ನೀತಿಗಳಿಂದಾಗಿ ಹಿಂದೂ ಸಮುದಾಯದ ಮೇಲೆ ಒತ್ತಡ ಹೇರಲಾಗುತ್ತಿದೆ ಎಂದು ಕಿಡಿಕಾರಿದರು.
“ಮದ್ದೂರಿನಲ್ಲಿ ಹಿಂದೂಗಳು ಯಾವುದೇ ಮೆರವಣಿಗೆ ನಡೆಸಿದರೂ, ಮಸೀದಿ ಮುಂಭಾಗ ಮೌನವಾಗಿರಬೇಕು ಎಂಬ ಒತ್ತಡವಿದೆ. ಆದರೆ, ರಂಜಾನ್ ಸಂದರ್ಭದಲ್ಲಿ ಮುಸ್ಲಿಮರು ದೇವಾಲಯಗಳ ಮುಂಭಾಗ ಮೆರವಣಿಗೆ ನಡೆಸಬಹುದು. ಇದು ಕಾಂಗ್ರೆಸ್ನ ಜಾತ್ಯತೀತತೆಯ ಗೀಳು. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಧೋರಣೆಯಿಂದಾಗಿ ಮುಸ್ಲಿಮರಿಗೆ ಯಾವುದೇ ಕಾನೂನು ಭಯವಿಲ್ಲ ಎಂಬ ಭಾವನೆ ಮೂಡಿದೆ,” ಎಂದು ಆರ್.ಅಶೋಕ ಆಕ್ರೋಶ ವ್ಯಕ್ತಪಡಿಸಿದರು.
ಮದ್ದೂರಿನಲ್ಲಿ ಮಸೀದಿಯನ್ನು ಅಕ್ರಮವಾಗಿ ನಿರ್ಮಿಸಲಾಗಿದೆ ಎಂದು ಆರೋಪಿಸಿದ ಅವರು, “ಬೇರೆ ರಾಜ್ಯಗಳಿಂದ ಜನರು ಇಲ್ಲಿಗೆ ಬಂದಿದ್ದಾರೆ. ಈಗ ಕಲ್ಲು ತೂರಾಟ ನಡೆಸಿರುವವರು ಮುಂದೆ ಬಾಂಬ್ ಹಾಕುವ ಸಾಧ್ಯತೆಯಿದೆ. ಕಾಂಗ್ರೆಸ್ ನಾಯಕರು ಇಂತಹವರನ್ನು ‘ನಮ್ಮ ಬ್ರದರ್ಗಳು’ ಎಂದು ಕರೆಯುತ್ತಾರೆ. ಈ ಬೆಂಬಲದಿಂದಲೇ ರಾಜ್ಯದಲ್ಲಿ ಮಿನಿ ಪಾಕಿಸ್ತಾನಗಳು ಉದ್ಭವವಾಗುತ್ತಿವೆ,” ಎಂದು ಟೀಕಿಸಿದರು.
ಗಣಪತಿ ಮೂರ್ತಿ ವಿಸರ್ಜನೆ ಸಂದರ್ಭದಲ್ಲಿ ಸಂಭವಿಸಿದ ಘಟನೆಗಳ ಬಗ್ಗೆ ಪ್ರಸ್ತಾಪಿಸಿದ ಆರ್.ಅಶೋಕ, “ಗಲಭೆಗೆ ಕಾರಣರಾದವರು ಸ್ಥಳೀಯರಲ್ಲ ಎಂದಾದರೆ, ಅವರು ಪಾಕಿಸ್ತಾನದಿಂದ ಬಂದಿದ್ದಾರೆಯೇ? ಇದು ಪೂರ್ವ ನಿಯೋಜಿತ ಕೃತ್ಯ. ಸರ್ಕಾರದ ಗುಪ್ತಚರ ಇಲಾಖೆ ಮತ್ತು ಪೊಲೀಸ್ ಇಲಾಖೆ ಈ ಘಟನೆಯನ್ನು ತಡೆಗಟ್ಟಲು ಸಿದ್ಧತೆ ಮಾಡಿಕೊಳ್ಳಬೇಕಿತ್ತು. ಆದರೆ, ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ,” ಎಂದು ಆರೋಪಿಸಿದರು.
ಕಾಂಗ್ರೆಸ್ ಸರ್ಕಾರದ ಜಾತ್ಯತೀತತೆಯ ಬಗ್ಗೆ ಪ್ರಶ್ನಿಸಿದ ಅವರು, “ಎಲ್ಲರೂ ಒಂದೇ ಎಂದು ಮಾತಿನಲ್ಲಿ ಹೇಳುತ್ತಾರೆ. ಆದರೆ, ಹಿಂದೂಗಳು ಯಾವುದೇ ಸಮಾರಂಭ ಮಾಡಲು ಬಿಡುವುದಿಲ್ಲ. ಮೆರವಣಿಗೆ ಸಂದರ್ಭದಲ್ಲಿ ಸಾಕಷ್ಟು ಪೊಲೀಸ್ ಬಂದೋಬಸ್ತ್ ಇರಬೇಕಿತ್ತು. ಸರ್ಕಾರದ ನಿರ್ಲಕ್ಷ್ಯದಿಂದ ಈ ಅನಾಹುತ ಸಂಭವಿಸಿದೆ,” ಎಂದರು.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಟೀಕಿಸಿದ ಆರ್.ಅಶೋಕ, “ಅವರು ಹಿಂದೂ ಎಂದು ಹೇಳಿಕೊಳ್ಳುತ್ತಾರೆಯೇ ಹೊರತು, ಅವರಿಗೆ ಹಿಂದೂ ಸಮುದಾಯದ ಬಗ್ಗೆ ಯಾವುದೇ ಅಭಿಮಾನವಿಲ್ಲ. ಅವರು ಸಂಪೂರ್ಣ ನಿರಾಶರಾಗಿದ್ದಾರೆ,” ಎಂದು ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಿರೋಧ ವ್ಯಕ್ತಪಡಿಸಿದ ಆರ್.ಅಶೋಕ, “ಕಾಂಗ್ರೆಸ್ ಅಧಿಕಾರದಲ್ಲಿದ್ದರೆ, ರಾಜ್ಯದಲ್ಲಿ ಇನ್ನಷ್ಟು ಗಲಭೆಗಳು ಸಂಭವಿಸಿ, ಮಿನಿ ಪಾಕಿಸ್ತಾನಗಳ ಸಂಖ್ಯೆ ಹೆಚ್ಚಾಗುತ್ತದೆ,” ಎಂದು ಎಚ್ಚರಿಕೆ ನೀಡಿದರು.