ಬೆಂಗಳೂರು: ಕಾಂಗ್ರೆಸ್ ಅಧಿಕಾರ ಮತ್ತು ಮಾನಸಿಕ ಅಸ್ವಸ್ಥರಿಗೆ ಯಾವುದಾದರೂ ಸಂಬಂಧವಿದೆಯೇ ಎಂದು ಬಿಜೆಪಿ ನಿಕಟಪೂರ್ವ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಪ್ರಶ್ನಿಸಿದ್ದಾರೆ.
ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಮಂಗಳವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಹಸುವಿನ ಕೆಚ್ಚಲು ಕತ್ತರಿಸಿದ ಭೀಕರ ಘಟನೆ ನಡೆದು ತಣ್ಣಗಾಗಿತ್ತು. ಆಗ ಆ ಕೃತ್ಯವನ್ನು ಮಾನಸಿಕ ಅಸ್ವಸ್ಥನೊಬ್ಬ ಎಸಗಿದ್ದಾನೆಂದು ಹೇಳಲಾಗಿತ್ತು. ಆ ನಂತರ ಭಟ್ಕಳ, ಚಿಕ್ಕಮಗಳೂರು ಜಿಲ್ಲೆಯ ಕಡೂರು, ಹೊಸನಗರ, ಬೆಳಗಾವಿಯಲ್ಲಿ ಇಂತಹ ಘಟನೆಗಳು ಸಂಭವಿಸಿವೆ. “ಹಸುವಿನ ಕೆಚ್ಚಲು ಕತ್ತರಿಸುವ ಇಷ್ಟೊಂದು ಮಾನಸಿಕ ಅಸ್ವಸ್ಥರು ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಏಕೆ ಹೆಚ್ಚಾಗಿದ್ದಾರೆ?” ಎಂದು ಸಿ.ಟಿ. ರವಿ ಕೇಳಿದರು.
“ಹುಣ್ಣಿಮೆ ಬಂದಾಗ ಕೆಲವರಿಗೆ ಹುಚ್ಚು ಕೆದರುತ್ತದೆ ಎನ್ನುತ್ತಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಈ ಹುಚ್ಚು ಇನ್ನಷ್ಟು ಹೆಚ್ಚಾಗುತ್ತದೆಯೇ?” ಎಂದು ವ್ಯಂಗ್ಯವಾಡಿದ ಅವರು, ಇದು ಪ್ರತ್ಯೇಕ ಘಟನೆಯಲ್ಲ. ಗೋವನ್ನು ದೇವರೆಂದು ಪೂಜಿಸುವ ಸಂಸ್ಕೃತಿಯನ್ನು ವಿರೋಧಿಸುವ ವಿಕೃತ ಮನಸ್ಥಿತಿಯ ಜನರು ಇಂತಹ ಕೃತ್ಯಗಳನ್ನು ಎಸಗುತ್ತಿದ್ದಾರೆ. ಸಕಲ ಜೀವಿಗಳಿಗೂ ಒಳಿತನ್ನೇ ಬಯಸುವ ಬಸವಣ್ಣನವರ ತತ್ವವನ್ನು ಎದುರಿಸುವ ಮಾನಸಿಕತೆ ಇದರ ಹಿಂದಿದೆ ಎಂದು ಆರೋಪಿಸಿದರು.