ನೆಲಮಂಗಲ: ಕಾಂಗ್ರೆಸ್ ಆಡಳಿತದಲ್ಲಿ ಓಲೈಕೆ ರಾಜಕಾರಣದಿಂದ ಕಾನೂನು-ಸುವ್ಯವಸ್ಥೆ ಹದಗೆಟ್ಟಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಟೀಕಿಸಿದ್ದಾರೆ. ನೆಲಮಂಗಲದಲ್ಲಿ ಬಿಜೆಪಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಘಟಕ ಮತ್ತು ನೆಲಮಂಗಲ ತಾಲೂಕು ಘಟಕದಿಂದ ಆಯೋಜಿಸಲಾದ ಅಹಲ್ಯದೇವಿಯವರ 300ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಿಜಯೇಂದ್ರ ಅವರು, ಕಾಂಗ್ರೆಸ್ ಸರ್ಕಾರದ ಅಸಮರ್ಪಕ ಆಡಳಿತ ಮತ್ತು ಓಲೈಕೆ ರಾಜಕಾರಣದಿಂದ ರಾಜ್ಯದ ಕಾನೂನು ಸುವ್ಯವಸ್ಥೆ ಹಾಳಾಗಿದೆ ಎಂದು ಆರೋಪಿಸಿದರು. “ಹಿಂದೂ ಸಂಘಟನೆಗಳ ಪ್ರಮುಖರ ಮೇಲೆ ಪ್ರಕರಣ ದಾಖಲಿಸುವುದು, ಬಿಜೆಪಿ ಕಾರ್ಯಕರ್ತರಿಗೆ ಸಮಸ್ಯೆಗಳನ್ನು ಸೃಷ್ಟಿಸುವುದು ಮತ್ತು ಬೆಲೆ ಏರಿಕೆಯಿಂದ ಜನಸಾಮಾನ್ಯರ ಬದುಕು ಕಷ್ಟಕರವಾಗಿದೆ,” ಎಂದು ಅವರು ವಿಷಾದ ವ್ಯಕ್ತಪಡಿಸಿದರು.
ಬಿಜೆಪಿ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ ಅವರು ರೈತರು, ಹಿಂದುಳಿದ ವರ್ಗಗಳು ಮತ್ತು ಪರಿಶಿಷ್ಟ ಜಾತಿಗಳಿಗೆ ಹಲವು ಜನಪರ ಯೋಜನೆಗಳನ್ನು ಜಾರಿಗೊಳಿಸಿದ್ದರು. ಭಾಗ್ಯಲಕ್ಷ್ಮಿ ಯೋಜನೆ, 60 ವರ್ಷ ಮೇಲ್ಪಟ್ಟವರಿಗೆ ಮಾಸಿಕ ಭತ್ಯೆ, ಮಹಿಳೆಯರಿಗೆ ವಿಶೇಷ ಒತ್ತು ನೀಡುವ ಕಾರ್ಯಕ್ರಮಗಳು ಇದರಲ್ಲಿ ಸೇರಿವೆ ಎಂದು ವಿಜಯೇಂದ್ರ ನೆನಪಿಸಿದರು.
ಕಾರ್ಯಕ್ರಮದಲ್ಲಿ, ನೆಲಮಂಗಲ ಹೆದ್ದಾರಿಯಿಂದ ಮುಖ್ಯ ರಸ್ತೆಯ ಮೂಲಕ ನಡೆದ ಮೆರವಣಿಗೆಯಲ್ಲಿ ವಿಜಯೇಂದ್ರ ಅವರಿಗೆ ಭವ್ಯ ಸ್ವಾಗತ ಕೋರಲಾಯಿತು. ಬೆಂಗಳೂರು ಗ್ರಾಮಾಂತರ ಬಿಜೆಪಿ ಜಿಲ್ಲಾ ಘಟಕ ಮತ್ತು ನೆಲಮಂಗಲ ತಾಲೂಕು ಕಾರ್ಯಕರ್ತರು ಬೃಹತ್ ಹಾರ ಹಾಕಿ ಬರಮಾಡಿಕೊಂಡರು. ತದನಂತರ, ಜಯದೇವ ಸಮುದಾಯ ಭವನದಲ್ಲಿ ಅಹಲ್ಯದೇವಿಯವರ 300ನೇ ಜನ್ಮದಿನಾಚರಣೆಯ ಉದ್ಘಾಟನೆಯಲ್ಲಿ ಭಾಗವಹಿಸಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ರಾಮಕೃಷ್ಣಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ಪಕ್ಷವನ್ನು ಬಲಪಡಿಸುವ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ರಾಜ್ಯ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಮಂಜುಳಾ ಅವರು ಮಹಿಳಾ ಮೋರ್ಚಾವನ್ನು ಇನ್ನಷ್ಟು ಸದೃಢಗೊಳಿಸುವ ಕುರಿತು ತಿಳಿಸಿದರು. ಬಿಜೆಪಿಯ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಜಗದೀಶ್ ಶೆಟ್ಟರ್, ಮತ್ತು ಸದಾನಂದ ಗೌಡ ಅವರ ಜನಪರ ಕಾರ್ಯಗಳನ್ನು ಸಾಮಾನ್ಯ ಜನರಿಗೆ ತಿಳಿಸಿ, ಸಂಘಟನೆಯನ್ನು ಬಲಪಡಿಸುವಂತೆ ಕಾರ್ಯಕರ್ತರಿಗೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷ ರಾಮಕೃಷ್ಣಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರವಿ, ಜಿಲ್ಲಾ ಮಹಿಳಾ ಅಧ್ಯಕ್ಷೆ ಶ್ರೀಮತಿ ಅನುಸೂಯ, ರಾಜ್ಯ ಯುವ ಮೋರ್ಚಾ ಅಧ್ಯಕ್ಷ ಧೀರಜ್ ಮುನಿರಾಜು, ಮಾಜಿ ಶಾಸಕ ಚಂದ್ರಣ್ಣ, ರಾಜ್ಯ ಕಾರ್ಯಕಾರಿಣಿ ಸದಸ್ಯೆ ವತ್ಸಲಾ, ಮಾಧ್ಯಮ ಪ್ರಕೋಷ್ಠದ ಜಿಲ್ಲಾ ಸಂಚಾಲಕ ರಾಜು ಎಚ್, ಸಾಮಾಜಿಕ ಜಾಲತಾಣ ಸಂಚಾಲಕ ಕುಮಾರ್ ಸೇರಿದಂತೆ ಹಲವು ಪ್ರಮುಖರು ಭಾಗವಹಿಸಿದ್ದರು.